ಶಾಲೆಗಳಲ್ಲಿ ಶುರುವಾಗಲಿದೆ ಶಿಫ್ಟ್​, ಎರಡು ದಿನಕ್ಕೊಮ್ಮೆ ಕ್ಲಾಸ್​

school may
Published on

ಬೆಂಗಳೂರು: ದೇಶಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡು ಈಗಾಗಲೇ ಮೂರು ತಿಂಗಳಾಗುತ್ತಿವೆ. ಲಾಕ್​ಡೌನ್​ ಸ್ವರೂಪ ಬದಲಾದರೂ ಇನ್ನಷ್ಟು ದಿನ ಮುಂದುವರಿಯುವುದು ಖಚಿತ.

ರಾಜ್ಯದಲ್ಲಿ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ಈಗಾಗಲೇ ಆರಂಭಿಸಲಾಗಿದೆ. ಈ ನಡುವೆ, ನೂತನ ಶೈಕ್ಷಣಿಕ ವರ್ಷಾರಂಭ ಹೇಗಿರಲಿದೆ ಎಂಬ ಕುತೂಹಲವೂ ಕಾಡುತ್ತಿದೆ.

ಈ ಬಾರಿ ಶಾಲೆಗಳನ್ನು ಶಿಫ್ಟ್​ಗಳಲ್ಲಿ ಆರಂಭಿಸಲು ಚಿಂತಿಸಲಾಗಿದೆ ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವಂತೆ ನೋಡಿಕೊಳ್ಳಲು ಹಾಗೂ ದಿನ ಬಿಟ್ಟು ದಿನ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ.

ನೂತನ ಶೈಕ್ಷಣಿಕ ವರ್ಷಾರಂಭ, ಪಠ್ಯಕ್ರಮ, ತರಗತಿ ಮೊದಲಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಶಿಫಾರಸುಗಳನ್ನು ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ 34 ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಮೇ 30ರಂದು ವರದಿ ಸಲ್ಲಿಸಲಿದೆ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್​. ಆರ್​. ಉಮಾಶಂಕರ್​ ಮಾಹಿತಿ ನೀಡಿದ್ದಾರೆ.

ಈ ನಡುವೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿದ ವಿಡಿಯೋ ಸಂವಾದದಲ್ಲೂ ಹಲವು ಪ್ರಮುಖ ಅಭಿಪ್ರಾಯಗಳು ವ್ಯಕ್ತವಾಗಿವೆ. ಅದರಂತೆ, ಜೂನ್ 15 ರ ನಂತರ ಒಂದರಿಂದ ಏಳನೇ ತರಗತಿಗಳನ್ನು ಹಾಗೂ ಜುಲೈ 1ರಿಂದ 8ರಿಂದ 10ನೇ ತರಗತಿ ಗಳನ್ನು (Shiftwise) ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬಹುದು ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸುವುದು. ನಿಗದಿಪಡಿಸಿದ ಕೊಠಡಿಗಳಿಗಿಂತ ಹೆಚ್ಚುವರಿ ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳುವುದು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 9:30 ಕ್ಕೆ ಹಾಜರಿರುವಂತೆ ಸೂಚಿಸಿ, ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಟ್ಟು ನಂತರ ಪರೀಕ್ಷೆಗೆ ಹಾಜರಾಗಲು ಅನುವು ಮಾಡಿಕೊಡುವುದು.

ಸರ್ಕಾರಿ ಶಾಲೆಗಳ ದಾಖಲಾತಿ ಆಂದೋಲನ ಮೇ ಅಂತ್ಯದಲ್ಲಿ ನಡೆಸುವುದು. ಪಠ್ಯಕ್ರಮ ಕಡಿಮೆ ಮಾಡದೇ, ಈ ವರ್ಷ ಕಲಿಸಲಾಗದ್ದನ್ನು ಮುಂದಿನ ವರ್ಷ ಕಲಿಸುವುದು. ಇದಕ್ಕೆ ಅನುಗುಣವಾಗಿ 120, 150, 180 ಹಾಗೂ 210 ದಿನಗಳ ಆಧಾರಿತವಾಗಿ ಆಯ್ದ ಡಯಟ್​ಗಳಿಗೆ ಮುಂಬರುವ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯ ಸಿದ್ಧತೆಗೆ ಸೂಚಿಸುವುದು ಎಂಬ ಸಲಹೆಗಳು ಕೇಳಿ ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net