

ರಾಜಸ್ಥಾನ: 23 ವರ್ಷದ ವ್ಯಕ್ತಿಯೊಬ್ಬರು ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ತಪ್ಪು ಮಾದರಿಯ ರಕ್ತವನ್ನು ವರ್ಗಾಯಿಸಿದ ಬೆನ್ನಲ್ಲೇ ಆತ ಸಾವಿಗೀಡಾದ ಘಟನೆ ರಾಜಸ್ಥಾನದ ಜೈಪುರದಲ್ಲಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ರಾಜ್ಯದ ಬಂಡಿಕುಯಿ ಪಟ್ಟಣದ ನಿವಾಸಿ ಸಚಿನ್ ಶರ್ಮಾ ಎಂದು ಗುರುತಿಸಲಾಗಿದ್ದು, ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಹಿನ್ನೆಲೆ ಆಸ್ಪತ್ರೆಯ ಟ್ರಾಮಾ ಸೆಂಟರ್‌ಗೆ ದಾಖಲಾಗಿ, ತುರ್ತು ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ರಕ್ತಸ್ರಾವದಿಂದ ರಕ್ತದ ಅವಶ್ಯಕತೆ ಹೆಚ್ಚಿದ್ದ ಕಾರಣ ವೈದ್ಯರು ಸೂಚಿಸಲಾದ ಬ್ಲಡ್ ಗ್ರೂಪ್ ಅನ್ನು ಹಾಕಲು ತಿಳಿಸಿದ್ದರು. ಆದರೆ ವಾರ್ಡ್ ಬಾಯ್ ಮಾಡಿದ ಒಂದೇ ಒಂದು ಎಡವಟ್ಟಿಗೆ ವ್ಯಕ್ತಿ ಬಲಿಯಾಗಿದ್ದಾರೆ.
ಚಿಕಿತ್ಸೆಯ ಸಮಯದಲ್ಲಿ, ಟ್ರಾಮಾ ಸೆಂಟರ್‌ನಲ್ಲಿ ಪೋಸ್ಟ್ ಮಾಡಲಾದ ವಾರ್ಡ್ ಬಾಯ್, ಅಗತ್ಯವಿರುವ ಎಬಿ-ಪಾಸಿಟಿವ್ ರಕ್ತದ ಬದಲಿಗೆ ಒ-ಪಾಸಿಟಿವ್ ರಕ್ತವನ್ನು ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ. ರಕ್ತ ವರ್ಗಾವಣೆಯ ನಂತರ, ರೋಗಿಯ ಎರಡೂ ಮೂತ್ರಪಿಂಡಗಳು ವೈಫಲ್ಯಗೊಂಡು ಮರಣಹೊಂದಿದರು ಎಂದು ವರದಿಯಾಗಿದೆ.
ಈ ಕುರಿತು ತನಿಖೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಲಾಗಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಈ ಸುದ್ದಿ ವರದಿಯನ್ನು ಪ್ರಕಟಿಸುವ ಸಮಯದಲ್ಲಿ ಸಂತ್ರಸ್ತರ ಕುಟುಂಬ ಅಥವಾ ಆಸ್ಪತ್ರೆ ಅಧಿಕಾರಿಗಳು ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ.
ಈ ಹಿಂದೆ 2022ರಲ್ಲಿ, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ ಡೆಂಗ್ಯೂ ರೋಗಿಯೊಬ್ಬರಿಗೆ ಪ್ಲಾಸ್ಮಾ ಬದಲಿಗೆ ಮುಸಂಬಿ ಜ್ಯೂಸ್ ಅನ್ನು ನೀಡಲಾಗಿತ್ತು. ಅದರಿಂದ ಆ ರೋಗಿ ಸಾವನ್ನಪ್ಪಿದ್ದರು. ಘಟನೆಯ ನಂತರ ಆಸ್ಪತ್ರೆಯನ್ನು ಸೀಲ್ ಮಾಡಿಸಿ, ಪ್ರಕರಣದ ಬಗ್ಗೆ ಯುಪಿ ಸರ್ಕಾರ ತನಿಖೆಗೆ ಆದೇಶಿಸಿತು,(ಏಜೆನ್ಸೀಸ್).