

ಮೈಸೂರು: ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಯೋಗಗುರು ಡಾ.ಗಣೇಶ್‌ಕುಮಾರ್ ಅವರ ಷಷ್ಟೃಬ್ಧಿ ಸಂಭ್ರಮ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ‘ವಿವೇಕ ರತ್ನ ಸದ್ಭಾವನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಜಯನಗರ 2ನೇ ಹಂತದ ವಿವೇಕ ಯೋಗ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಪಿ.ವಿ.ಸಂಗೀತಾ, ಎಸ್.ಮಂಜುನಾಥ್(ಶಿಕ್ಷಣ ಕ್ಷೇತ್ರ), ಎಂ.ಎನ್.ಮೋಹನ್, ತಿರುಮಲೆ ಯೋಗ ಪ್ರಕಾಶ, ಅನಂತ್, ಕೆ.ಎನ್.ಸುರೇಶ್, ಕೆ.ಚಂದ್ರು(ಯೋಗ ಮತ್ತು ಸಮಾಜ ಸೇವೆ), ಗೀತಾರಾವ್, ಎಚ್.ಸತೀಶ್, ಕೆ.ಎಸ್.ಶ್ವೇತಾ ಹಾಗೂ ಕವೀಶ್(ಯೋಗ ಶಿಕ್ಷಣ) ಅವರಿಗೆ ‘ವಿವೇಕ ರತ್ನ ಸದ್ಭಾವನಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ.ಗಣೇಶ್‌ಕುಮಾರ್ ಮಾತನಾಡಿ, ಯಾವುದೇ ಉದ್ಯೋಗವಾದರೂ, ಯಾವುದೇ ಕ್ಷೇತ್ರವಾದರೂ ಅದನ್ನು ಶ್ರದ್ಧೆ, ಬದ್ಧತೆ ಮತ್ತು ಏಕಾಗ್ರತೆಯಿಂದ ನಿರ್ವಹಿಸಿದರೆ ದುಡಿಮೆಗೆ ಸೂಕ್ತ ಪ್ರತಿಫಲ ದೊರೆಯುವುದು ಖಚಿತ. ನಾವು ಯಾವುದಾರು ಒಂದು ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿದರೆ ದೊಡ್ಡ ಮಟ್ಟದಲ್ಲಿ ಸಾಧಿಸಬಹುದು ಎಂದು ಸಲಹೆ ನೀಡಿದರು.
ಅನೇಕ ಯೋಗಗುರುಗಳ ಹಾಗೂ ಯೋಗಪಟುಗಳ ಶ್ರಮದಿಂದ ಮೈಸೂರಿನ ಯೋಗ ಪರಂಪರೆಯಿಂದ ಇಡೀ ವಿಶ್ವಕ್ಕೆ ತಿಳಿದಿದೆ. ಅಂತಾರಾಷ್ಟ್ರೀಯ ದಿನದೊಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವಂತಾಗಿದೆ. ಯೋಗವನ್ನು ಒಂದು ಕ್ರೀಡೆ ಎಂದು ಪರಿಗಣಿಸುವಂತಾಗಿದೆ ಎಂದರು.
ಸಂಶೋಧನಾ ಸಂಸ್ಥೆ ಗೌರವಾಧ್ಯಕ್ಷರು ಆದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಜಿಎಸ್‌ಎಸ್ ಮತ್ತು ವೈಎಫ್‌ಎಂ ಅಧ್ಯಕ್ಷ ಶ್ರೀಹರಿ, ವೈಎಫ್‌ಎಂ ಉಪಾಧ್ಯಕ್ಷ ಶಶಿಕುಮಾರ್, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆರ್‌ಎಂಒ ಡಾ.ಎಚ್.ಎ.ಶಶಿರೇಖಾ ಇತರರಿದ್ದರು.