ಜೀವಿಗಳ ಉಳಿವು ಮಾನವ ಕುಲಕೆ ಉಸಿರು

Biodiversity
Published on
ಪ್ರತಿ ವರ್ಷ ಮೇ 22ನ್ನು ‘ವಿಶ್ವ ಜೀವ ವೈವಿಧ್ಯ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ ‘ಒಡಂಬಡಿಕೆಯಿಂದ ಕಾರ್ಯರೂಪಕ್ಕೆ : ಜೀವ ವೈವಿಧ್ಯತೆ ಪುನರ್ ನಿರ್ವಿುಸಿ’ ಎಂಬುದಾಗಿದೆ. ವಿಶ್ವ ಸಂಸ್ಥೆ 1993ರಿಂದ ಜೀವ ವೈವಿಧ್ಯತೆ ದಿನ ಆಚರಿಸಲು ಕರೆ ನೀಡಿತು. ಅಂದಿನಿಂದ ಈವರೆಗೆ ಹೆಚ್ಚಿನ ಪ್ರಸ್ತಾವನೆಗಳು ಕಾಗದದಲ್ಲೇ ಉಳಿದುಬಿಟ್ಟಿವೆ. ಹೀಗಾಗಿ, ಈ ಬಾರಿ ಘೋಷವಾಕ್ಯವನ್ನು ಗಂಭೀರವಾಗಿ ಪರಿಗಣಿಸಿ ಆಯಾ ರಾಷ್ಟ್ರಗಳಲ್ಲಿ ಜೀವಿ ವೈವಿಧ್ಯತೆ ಉಳಿಸುವ ಸಂಕಲ್ಪ ತೊಡುವಂತೆ ವಿಶ್ವ ಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.

ಬೆಂಗಳೂರು: ವಸುಂಧರೆಯ ಒಡಲು ಅಸಂಖ್ಯ ಜೀವರಾಶಿಗಳ ಆಗರ. ಪಶು, ಪಕ್ಷಿ, ಕೀಟ ಸೇರಿದಂತೆ ಸಕಲ ಚರಾಚರಗಳಿಗೆ ಜನ್ಮ ನೀಡಿ ಸಲಹುವ ಭೂಮಿ ಪ್ರಾಕೃತಿಕ ಸಿರಿಸಂಪತ್ತಿನ ತವರು. ಕೋಟ್ಯಂತರ ವರ್ಷಗಳ ಹಿಂದೆ ಜನ್ಮತಾಳಿದ ಏಕಕೋಶದ ಜೀವಾಣುವಿನಿಂದ ಆರಂಭಿಸಿ ಈವರೆಗಿನ ಬೆಳವಣಿಗೆ ವಿಸ್ಮಯಕಾರಿಯಾಗಿದೆ. ಒಂದಕ್ಕಿಂದ ಒಂದು ಜೀವರಾಶಿಗಳು ವೈವಿಧ್ಯಮಯ ಲೋಕವನ್ನೇ ಸೃಷ್ಟಿಸಿವೆ.

ಪಂಚ ಭೂತಗಳಾದ ಭೂಮಿ, ನೀರು, ವಾಯು, ಅಗ್ನಿ ಹಾಗೂ ಆಕಾಶ ವ್ಯಾಪ್ತಿಯಲ್ಲೂ ಜೀವಿಗಳ ವಾಸ ಹರಿಡಿಕೊಂಡಿದೆ. ಆದರೆ, ಮನುಷ್ಯ ಮಾತ್ರ ತಾನು ಮೇಲು, ಉಳಿದೆಲ್ಲ ಪ್ರಭೇದಗಳು ತನ್ನ ಅಣತಿಯಂತೆ ನಡೆದುಕೊಳ್ಳಬೇಕು ಎಂಬ ಅಸಹಜ ನ್ಯಾಯಕ್ಕೆ ಜೋತುಬಿದ್ದಿದ್ದಾನೆ. ಇದರ ಪರಿಣಾಮ ನಿತ್ಯವೂ ಒಂದಿಲ್ಲೊಂದು ಪ್ರಭೇದಗಳು ಕಣ್ಮರೆಯಾಗುತ್ತಿವೆ. ಇನ್ನೂ ಕೆಲವು ಅಳಿವಿನಂಚಿಗೆ ಬಂದು ನಿಂತಿವೆ. ಇನ್ನೊಂದೆಡೆ ಅಭಿವೃದ್ಧಿ ನೆಪದಲ್ಲಿ ಪರಿಸರದ ಮೇಲಾಗುತ್ತಿರುವ ದೌರ್ಜನ್ಯದಿಂದ ಹಸಿರು ಕ್ಷೀಣಿಸುತ್ತಿದೆ. ಜಾಗತಿಕ ತಾಪಮಾನ, ವಾತಾವರಣದಲ್ಲಿ ಇಂಗಾಲ ಪ್ರಮಾಣ ಏರಿಕೆ ಇತ್ಯಾದಿ ಅಂಶಗಳು ಜೀವ ವೈವಿಧ್ಯತೆಗೆ ಧಕ್ಕೆ ತಂದಿವೆ. ಭವಿಷ್ಯದಲ್ಲಿ ಮಾನವ ಉಸಿರಾಡಲು ಎದುಸಿರುಬಿಡಬೇಕಾದೀತು ಎಂಬ ಪ್ರಜ್ಞೆ ಇಲ್ಲದೆ ನಡೆದುಕೊಳ್ಳುತ್ತಿರುವುದರಿಂದ ಜೀವ ವೈವಿಧ್ಯತೆ ಸರಪಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಂತಹ ವಿಪ್ಲವಗಳಿಗೆ ತಡೆ ಹಾಕಿ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲ ಜೀವಸಂಕುಲಗಳ ಸಂರಕ್ಷಣೆ ಮಾಡಬೇಕೆಂಬ ದನಿಗೆ ಕ್ರಮೇಣ ಮಾನ್ಯತೆ ಸಿಗುತ್ತಿದೆ. ಪರಿಸರವಾದಿಗಳ ಕೂಗಿಗೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗಬೇಕಿದೆ.

ರಾಜ್ಯದ ಜೀವ ವೈವಿಧ್ಯ ತಾಣಗಳು

ಎಲ್ಲೂರು ಹುಣಸೆ ಮರಗಳ ಸಮೂಹ, ದೇವನಹಳ್ಳಿ; ಹೊಗ್ರಿಕಣ್, ಶೋಲಾ ಹುಲ್ಲುಗಾವಲು, ಕಡೂರು; ಬೆಂಗಳೂರು ಕೃಷಿ ವಿವಿ, 718 ಪ್ರಭೇದಗಳ ತವರು; ಅಂಬರಗುಡ್ಡ, ಶೋಲಾ ಹುಲ್ಲುಗಾವಲು ಶಿವಮೊಗ್ಗ; ಮುಂಡಿಗೆಕೆರೆ, ಪಕ್ಷಿಧಾಮ, ಶಿರಸಿ; ಜೂರಿಬೆಟ್ಟ, ಕೊಪ್ಪಳ; ಸಿದ್ಧರಬೆಟ್ಟ, ವೈದ್ಯಕೀಯ ಸಸ್ಯಗಳ ತವರು, ತುಮಕೂರು; ರಾಮನಗರ ಬೆಟ್ಟ, ರಾಮನಗರ; ಚಿಕ್ಕಮಗಳೂರು ಬೆಟ್ಟ, ಚಿಕ್ಕಮಗಳೂರು; ಅಂತರಗಂಗೆ ಬೆಟ್ಟ, ಕೋಲಾರ; ಆದಿನಾರಾಯಣಸ್ವಾಮಿ ಬೆಟ್ಟ, ಗುಡಿಗಂಡೆ; ಮಹಿಮ ರಂಗನಾಥಸ್ವಾಮಿ ಬೆಟ್ಟ, ಬೆಂ.-ನೆಲಮಂಗಲ ರಸ್ತೆ; ಉರುಂಬಿ, ಕುಮಾರಧಾರ ನದಿ ದಂಡೆ, ಕಡಬ (ದ.ಕ)

ಭಾರತದಲ್ಲಿರುವ ಜಾಗತಿಕ ಮಟ್ಟದ ಜೀವವೈವಿಧ್ಯ ತಾಣಗಳು: ಪಶ್ಚಿಮಘಟ್ಟ ಶ್ರೇಣಿ; ಹಿಮಾಲಯ ಪರ್ವತ ಶ್ರೇಣಿ; ಇಂಡೋ-ಬರ್ವ ಪ್ರದೇಶ; ಸುಂಡಾಲೆಂಡ್, ನಿಕೋಬಾರ್ ದ್ವೀಪ

ಜೀವವೈವಿಧ್ಯದ ನೆಲೆವೀಡು...

ಭಾರತದುದ್ದಕ್ಕೂ ಕಾಣಸಿಗುವ ಜೀವ ವೈವಿಧ್ಯತೆಯ ಲೋಕ ಕರ್ನಾಟಕದಲ್ಲೂ ಪ್ರತಿಬಿಂಬಿತವಾಗಿದೆ. ಪ್ರತಿ ಜಿಲ್ಲೆಯಲ್ಲೂ ಸಸ್ಯ, ಪಶು, ಪಕ್ಷಿಗಳ ಜೀವ ಸಂಕುಲ ಹೇರಳವಾಗಿದೆ.

  • ರಾಜ್ಯದಲ್ಲಿರುವ ಒಟ್ಟು ಪ್ರಭೇದಗಳು 1.2 ಲಕ್ಷ
  • ಹೂ ಬಿಡುವ ಪ್ರಭೇದ 4,500
  • ವೈದ್ಯಕೀಯ ಗುಣವುಳ್ಳ ಸಸ್ಯ ಪ್ರಭೇದ 1,493
  • ಪಕ್ಷಿಗಳು 508
  • ಸಸ್ತನಿ 150
  • ಸರಿಸೃಪ 156
  • ಉಭಯವಾಸಿ ಪ್ರಭೇದ 135
  • ಮೀನುಗಳು (ಸಾಗರವಾಸಿ) 405
  • ಮೀನುಗಳು (ಶುದ್ಧ ನೀರು) 289
  • ಚಿಟ್ಟೆಗಳು 330
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net