

ಡೆಹ್ರಾಡೂನ್: ಇತ್ತೀಚಿನ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಕಠಿಣ ಕಾನೂನಿನ ಅವಶ್ಯಕತೆಯಿದೆ. ಇದರ ನಡುವೆ ಅತ್ಯಾಚಾರ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ ಎಂದು ಉತ್ತರಾಖಂಡ ಹೈಕೋರ್ಟ್ ಅಬಿಪ್ರಾಯಪಟ್ಟಿದೆ.
ಮಣಿಪುರದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣೀಗೆ ಮಾಡಿರುವುದು ಈ ಕಾಲದಲ್ಲಿ ನಡೆದಿದೆಯಾ ಎಂದು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಪೀಠ ಹೇಳಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬರು ದೈಹಿಕ ಸಂಪರ್ಕ ಬೆಳೆಸಿ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಶರದ್ ಕುಮಾರ್ ಶರ್ಮಾ ಅವರಿದ್ದ ಏಕಸದಸ್ಯ ಪೀಠವು ಮಹಿಳೆಯರು ಭಾರತ ದಂಡ ಸಂಹಿತೆ(IPC Section) 376(ಅತ್ಯಾಚಾರ) ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ಕ್ರಮದ ಅವಶ್ಯಕತೆಯಿದೆ ಎಂದು ಹೇಳಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದಾರೆ.
2005ರಲ್ಲಿ ಮಹಿಳೆಯೊಬ್ಬರಿಗೆ ವ್ಯಕ್ತಿಯ ಪರಿಚಯವಾಗಿದ್ದು, ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಪರಿವರ್ತನೆಗೊಂಡು ಪರಸ್ಪರ ಸಮ್ಮತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಕೆಲ ದಿನಗಳ ಬಳಿಕ ಇಬ್ಬರ ನಡುವೆ ವಿಚಾರ ಒಂದಕ್ಕೆ ಗಲಾಟೆಯಾಗಿದ್ದು ಸಂಬಂಧದಲ್ಲಿ ಬಿರುಕು ಮೂಡಿದೆ.
ಆ ನಂತರ ವ್ಯಕ್ತಿಯೂ ಬೇರೊಂದು ಮಹಿಳೆಯನ್ನು ಮದುವೆಯಾಗಿ ಆಕೆಯ ಜೊತೆ ಸಂಸಾರ ಮಾಡಲು ಶುರು ಮಾಡಿದ್ದಾನೆ. ಇದಾದ ಬಳಿಕವೂ ತನ್ನ ಜೊತೆ ಸಂಬಂಧ ಮುಂದುವರೆಸಿ ಹಲವು ಬಾರಿ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರು ಪರಸ್ಪರ ಸಮ್ಮತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿರುವುದು ಕಂಡು ಬಂದಿದೆ. ಇದೇ ವೇಳೆ ದೂರುದಾರ ಮಹಿಳೆಯೂ ವ್ಯಕ್ತಿಗೆ ಮದುವೆಯಾದ ಬಳಿಕವೂ ಆತನ ಜೊತೆ ಸಂಬಂಧ ಮುಂದುವರೆಸಲು ಯತ್ನಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಈ ಕುರಿತು ಮಾತನಾಡಿದ ನ್ಯಾಯಮೂರ್ತಿ ಶರದ್ ಕುಮಾರ್ ಶರ್ಮಾ ಅತ್ಯಾಚಾರ ನಡೆಸಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲ. ಇಲ್ಲಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ಬೆಳೆಸಿ ಅತ್ಯಾಚಾರ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಆಧುನಿಕ ಸಮಾಜದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ಮಹಿಳೆಯ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಶರದ್ ಕುಮಾರ್ ಶರ್ಮಾ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.