

ಆಂಧ್ರಪ್ರದೇಶ: ನಾನು, ನಮ್ಮ ಹಿರಿಯರು, ನನ್ನ ಮಕ್ಕಳು ಬಾಳಿ ಬದುಕುತ್ತಿರುವ ಮನೆಯನ್ನು ಹೈದ್ರಾ (HYDRA) ಅಧಿಕಾರಿಗಳು ಕೆಡವುತ್ತಾರೆ ಎಂಬ ಭಯದಿಂದ ನರಳುತ್ತಿದ್ದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ (Women Suicide) ಘಟನೆ ಸ್ಥಳೀಯ ನಿವಾಸಿಗಳನ್ನು ಅಚ್ಚರಿಗೆ ದೂಡಿದೆ. ಹೈದ್ರಾ ಹೆಸರಿನಲ್ಲಿ ತಾನು ಕಟ್ಟಿಕೊಂಡ ಕನಸಿನ ಸೂರನ್ನು ಕೆಲವೇ ನಿಮಿಷಗಳಲ್ಲಿ ಮಣ್ಣುಪಾಲು ಮಾಡುತ್ತಾರೆ ಎಂದು ಕೆಲವು ದಿನಗಳಿಂದ ಮನಸ್ಸಿನಲ್ಲಿಯೇ ಕೊರಗುತ್ತಿದ್ದ ಮಹಿಳೆ, ತನ್ನ ಮೂವರು ಹೆಣ್ಣುಮಕ್ಕಳ ಬಳಿ ಕಷ್ಟ ಹಂಚಿಕೊಳ್ಳದೆ ಇದೀಗ ದುಡುಕಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೈದ್ರಾ ಧ್ವಂಸ ಕಾರ್ಯಾಚರಣೆ ಅಡಿಯಲ್ಲಿ ಅಕ್ರಮ ನಿರ್ಮಿತ ಮನೆಗಳನ್ನು ಕೆಡವಲು ಮುಂದಾಗುವ ಅಧಿಕಾರಿಗಳು, ಕಳೆದ ಕೆಲವು ದಿನಗಳ ಹಿಂದೆ ಬುಚ್ಚಮ್ಮ ಎಂಬ ಮಹಿಳೆಯ ಮನೆಗೂ ನೋಟಿಸ್ ನೀಡಿದ್ದಾರೆ. ಈ ಬಡಾವಣೆಯಲ್ಲಿ ಅಕ್ರಮವಾಗಿ ಕಟ್ಟಿಕೊಳ್ಳಲಾದ ಮನೆಗಳ ಪೈಕಿ ನಿಮ್ಮದು ಇದೆ. ಹೀಗಾಗಿ ಶೀಘ್ರವೇ ಸ್ಥಳಾಂತರಗೊಳ್ಳಿ ಎಂದು ಅಧಿಕಾರಿಗಳು ಬುಚ್ಚಮ್ಮ ಮತ್ತು ಆಕೆಯ ಪತಿ ಶಿವಯ್ಯನಿಗೆ ಸೂಚನೆ ಕೊಟ್ಟಿದ್ದರು. ತನ್ನ ಕನಸಿನ ಸೂರು ಕ್ಷಣಮಾತ್ರದಲ್ಲಿ ನೆಲಸಮಗೊಳ್ಳುತ್ತದೆ ಎಂದು ಚಿಂತಿಸುತ್ತಲೇ ದಿನ ತಳ್ಳುತ್ತಿದ್ದ ಮಹಿಳೆ ಭಯದಿಂದಲೇ ಸಾವಿಗೆ ಶರಣಾಗಿದ್ದಾರೆ. ಅಧಿಕಾರಿಗಳ ಒತ್ತಡದಿಂದ ನಮ್ಮ ತಾಯಿ ಮೃತಪಟ್ಟಿದ್ದಾಳೆ, ಈ ಸಾವಿಗೆ ನ್ಯಾಯ ಕೊಡಿಸುವವರು ಯಾರು ಎಂದು ಮಕ್ಕಳು ಕಣ್ಣೀರಿಟ್ಟಿದ್ದಾರೆ.
ಬುಚಮ್ಮನ ಸಾವಿಗೆ ಹೈದ್ರಾ ಅಧಿಕಾರಿಗಳ ಚಿತ್ರಹಿಂಸೆಯೇ ಕಾರಣ ಎಂದು ಕುಟುಂಬಸ್ಥರು ನೇರವಾಗಿ ದೂರಿದ್ದಾರೆ. ಆಕೆಗೆ ಗಂಡು ಮಕ್ಕಳಿಲ್ಲ. ಮೂವರು ಕೂಡ ಹೆಣ್ಣುಮಕ್ಕಳೇ. ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಗಂಡನ ಜತೆ ಹಗಲು-ರಾತ್ರಿ ಎಂದು ನೋಡದೆ ಶ್ರಮಿಸಿ, ಮೂರು ಹೆಣ್ಣುಮಕ್ಕಳನ್ನು ಸಾಕಿದ್ದಾಳೆ. ಪತಿಯ ಜತೆಗೆ ಕೈಜೋಡಿಸಿ ದುಡಿದು, ಬಂದ ಆದಾಯದಲ್ಲಿ ಒಂದೊಂದು ರೂಪಾಯಿ ಹಣವನ್ನು ಉಳಿಸಿ ಈ ಮನೆ ಖರೀದಿ ಮಾಡಿದ್ದಾಳೆ. ಮೂವರ ಮದುವೆಗೂ ಇದೊಂದೇ ಮನೆಯನ್ನು ವರದಕ್ಷಿಣೆಯಾಗಿ ಬರೆದಿಟ್ಟಿದ್ದಾಳೆ. ಹೀಗಿರುವಾಗ ಅಧಿಕಾರಿಗಳು ಮನೆ ಕೆಡವಲು ಬಂದರೆ ಆಕೆ ಏನು ಮಾಡಲು ಸಾಧ್ಯ? ಈ ಸಾವಿಗೆ ಅವರೇ ಕಾರಣ ಎಂದು ಬುಚ್ಚಮ್ಮ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಅತ್ಯಾಚಾರಿಗೆ ಕಠಿಣ ಜೀವಾವಧಿ ಶಿಕ್ಷೆ
ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರ ವಿರುದ್ಧ ಹೈದ್ರಾ ನಿಯಮ ಜಾರಿಗೊಳಿಸಿರುವ ಆಂಧ್ರಪ್ರದೇಶ ಸರ್ಕಾರ, ಅಕ್ರಮ ಅತಿಕ್ರಮಣದ ಹಿನ್ನಲೆ ನೆಲಸಮ ಕಾರ್ಯಾಚರಣೆ ನಡೆಸಲಿದೆ. ಇದರ ಅಡಿಯಲ್ಲಿ ಆಯಾ ಸ್ಥಳಗಳಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಕೆಡವಲು ಮುಂದಾಗುತ್ತದೆ. ಸದ್ಯ ಇದೇ ನಿಯಮದಡಿ ಕುಕಟ್ಪಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿವಾಸಗಳನ್ನು ಅಕ್ರಮವಾಗಿ ಕಟ್ಟಿಕೊಳ್ಳಲಾಗಿದೆ ಎಂದು ಗುರುತಿಸಿದ ಹೈದ್ರಾ, ಅಲ್ಲಿನ ಮನೆ ಮಾಲೀಕರಿಗೆ ಶೀಘ್ರವೇ ನಿವಾಸಗಳನ್ನು ಧ್ವಂಸ ಮಾಡುತ್ತೇವೆ ಸ್ಥಳಾಂತರಗೊಳ್ಳಿ ಎಂದು ನೋಟಿಸ್ ನೀಡಿ ಎಚ್ಚರಿಸಿತ್ತು. ಅಧಿಕಾರಿಗಳ ಗಡುವಿನಿಂದ ಆತಂಕಕ್ಕೊಳಗಾದ ಬೆನ್ನಲ್ಲೇ ಇದೀಗ ಮಹಿಳೆ ಭಯದಿಂದ ಜೀವ ಕಳೆದುಕೊಂಡಿದ್ದಾರೆ,(ಏಜೆನ್ಸೀಸ್).