

ಕೇರಳ: ಇತ್ತೀಚೆಗಷ್ಟೇ ಗಾಯಕಿ ಅಮೃತಾ ಸುರೇಶ್ (Amrutha Suresh) ಹಾಗೂ ಅವರ ಮಾಜಿ ಪತಿ, ನಟ ಬಾಲ (Bala) ಅವರ ಪುತ್ರಿ ಅವಂತಿಕ ತಂದೆಯ ಮಾತುಗಳಿಂದ ತೀವ್ರ ಬೇಸತ್ತು, ವಿಡಿಯೋ ಸಂದೇಶ ಹಂಚಿಕೊಂಡಿದ್ದರು. ನಿನ್ನ ಪ್ರೀತಿಸಲು ಒಂದೇ ಒಂದು ಕಾರಣವೂ ಉಳಿದಿಲ್ಲ. ಈತನ ಮಾತನ್ನು ಯಾರೂ ಸಹ ನಂಬಬೇಡಿ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಥಮ ಬಾರಿಗೆ ಮಾಜಿ ಪತಿಯ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅಮೃತಾ, ದಾಂಪತ್ಯ ಜೀವನದಲ್ಲಿ ತಾನು ಅನುಭವಿಸಿದ ಚಿತ್ರಹಿಂಸೆಯನ್ನು ಎಳೆ ಎಳೆಯಾಗಿ ವಿಡಿಯೋ ಮುಖೇನ ಬಟಾಬಯಲು ಮಾಡಿದ್ದಾರೆ.
ಮಗಳ ಮಾತಿನ ನಂತರ ಒಂದಷ್ಟು ಜನರಿಗೆ ನಾನು ಸ್ಪಷ್ಟನೆ ಕೊಡಬೇಕು ಎಂದು ನಿರ್ಧರಿಸಿ ವಿಡಿಯೋ ಮಾಡಿದ ಅಮೃತಾ ಸುರೇಶ್, "2019ರಲ್ಲಿ ನಾನು ವಿಚ್ಛೇದನ ಪಡೆದುಕೊಂಡೆ. ಅಂದಿನಿಂದ ಇಂದಿನವರೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನೆಲ್ಲಿಯೂ ಮಾತನಾಡಿಲ್ಲ, ಪ್ರತಿಕ್ರಿಯೆಯೂ ನೀಡಿಲ್ಲ. ಆದ್ರೆ, ನನ್ನ ಮಗಳ ಸಲುವಾಗಿ ಪ್ರಥಮ ಬಾರಿಗೆ ಮಾತನಾಡುತ್ತಿದ್ದೇನೆ. ಮಗಳು ಅವಂತಿಕ ಆ ರೀತಿ ಸಿಡಿದೇಳಲು ನಾನೇ ಕಾರಣ ಎಂದು ಒಂದಷ್ಟು ಮಂದಿ ಹೇಳಿದರು. ಪುತ್ರಿಯ ಬ್ರೈನ್ವಾಶ್ ಮಾಡಿದ್ದಾರೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಅಸಲಿಗೆ ನಾನ್ಯಾಕೆ ಹಾಗೆ ಮಾಡಲಿ? ಆತ ನಡೆದುಕೊಂಡಿರುವ ರೀತಿ, ಕೊಟ್ಟ ಹಿಂಸೆಗಳು ಅವಳಿಗೆ ಚೆನ್ನಾಗಿ ನೆನಪಿದೆ" ಎಂದರು.
"ಬಾಲಾ ಹೇಳಿದ್ದೆಲ್ಲಾ ಸುಳ್ಳು. ಇಷ್ಟು ದಿನ ನಾನು ಮೌನವಾಗಿದ್ದ ಕಾರಣ ನೀವು ಒಂದು ಕಥೆ ಮಾತ್ರ ಕೇಳಿದ್ದೀರಿ. ನನ್ನ ಮಗಳಿಗೆ ಇಂದಿಗೂ ನೆಮ್ಮದಿಯಿಲ್ಲ. ನಿಮ್ಮ ತಂದೆ ಎಲ್ಲಿ? ತಾಯಿ ಕೆಟ್ಟವಳಾ ಎಂದು ಕೇಳ್ತಾರೆ. ಶಾಲೆಗೆ ಹೋದರೂ, ಕಾರ್ಯಕ್ರಮಕ್ಕೆ ಭೇಟಿ ಕೊಟ್ಟರೂ ಇಂತಹ ಪ್ರಶ್ನೆಗಳಿಂದ ಮುಕ್ತಿಯಿಲ್ಲ. ಅಷ್ಟಕ್ಕೂ ಅಂತಹ ತಪ್ಪು ನಾನೇನು ಮಾಡಿದೆ? 18 ವರ್ಷಕ್ಕೆ ಮೊದಲ ಬಾರಿಗೆ ಪ್ರೀತಿಯಲ್ಲಿ ಬಿದ್ದ ನಾನು, ಆತನನ್ನು ಮದುವೆಯಾದೆ. ಅವನೊಟ್ಟಿಗೆ ಮನೆಯಲ್ಲಿದ್ದ ಅಷ್ಟು ದಿನಗಳಲ್ಲಿ ಬಹುತೇಕ ದಿನಗಳು ರಕ್ತದಲ್ಲಿ ಬಿದ್ದು ಒದ್ದಾಡಿದ್ದೇನೆ. ಈ ವಿಷಯವನ್ನು ಮನೆಯವರಿಗೆ ಹೇಳೋಣ ಎಂದರೆ ಪ್ರೀತಿಸಿ ಮದುವೆಯಾದ ಕಾರಣಕ್ಕೆ ಪೋಷಕರು ತಿರುಗಿ ನೋಡಲು ಕೂಡ ಇಚ್ಛಿಸಲಿಲ್ಲ. ಹೀಗಿದ್ದಾಗ ಏನೇಳಲಿ? ಯಾರಿಗೇಳಲಿ" ಎಂದು ಅಳಲು ತೋಡಿಕೊಂಡರು.
"ವಿವಾಹವಾದ ಬಳಿಕ ನನಗೆ ಗೊತ್ತಾಗಿದ್ದು, ನಾನು ಸುಳ್ಳುಗಳಿಗೆ ಮೋಸ ಹೋದೆ ಎಂದು. ನನ್ನನ್ನು ಮದುವೆಯಾಗುವ ಮುಂಚೆಯೇ ಬಾಲಾ ಯಾರೋ ಒಬ್ಬರನ್ನು ಅದಾಗಲೇ ಮದುವೆಯಾಗಿದ್ದ. ಈ ಸ್ಫೋಟಕ ಸಂಗತಿ ನನಗೆ ಗೊತ್ತಾಗಿದ್ದೇ ನಮ್ಮಿಬ್ಬರ ಎಂಗೇಜ್ಮೆಂಟ್ ಬಳಿಕ. ತಕ್ಷಣವೇ ಈ ಸಂಬಂಧವನ್ನು ಮುರಿದು, ವಾಪಾಸ್ ಮನೆಗೆ ಬಾ ಎಂದು ಪೋಷಕರು ಬುದ್ಧಿ ಹೇಳಿದರು. ಇಷ್ಟಾದರೂ ಮನಸ್ಸು ಬದಲಾಯಿಸದ ನಾನು, ಆತನನ್ನೇ ಮದುವೆಯಾಗುವೆ ಎಂದು ಹೇಳಿದೆ. ಯಾವಾಗ ನನ್ನ ಮಗಳ ಮೇಲೆ ದೌರ್ಜನ್ಯ ಶುರುವಾಯಿತೋ ಅಂದೇ ನಾನು ಆ ಮನೆಯಿಂದ ಹೊರಬಂದೆ. ಅವನಿಂದ ಜೀವನಾಂಶವು ಕೇಳಿದ್ದೆ. ಆದ್ರೆ, ಆತ ಪುತ್ರಿಯನ್ನು ಬಲವಂತವಾಗಿ ಕರೆದೊಯ್ದ ಬಳಿಕ ಅದ್ಯಾವುದು ನನಗೆ ಬೇಡ, ನನ್ನ ಮಗಳು ಮಾತ್ರ ಸಾಕು ಎಂದು ಸುಮ್ಮನಾದೆ" ಎಂದು ಹೇಳಿದರು.
"ಅಂದು ಬಾಲ ಆಸ್ಪತ್ರೆಯಲ್ಲಿದ್ದಾಗ ಎಲ್ಲರೂ ಅವನಿಗಾಗಿ ಪ್ರಾರ್ಥಿಸಿದರು. ಆದ್ರೆ, ನನಗೆ ಆತ ಹೊಡೆದ ಗಾಯದ ಗುರುತು ಇಂದಿಗೂ ಮಾಸಿಲ್ಲ. ಈಗಲೂ ಸಹ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಆ ಹೊಡೆತದಿಂದ ಆದ ಆಘಾತ ಮರೆಯಲಾಗದು. ಆಂತರಿಕ ರಕ್ತಸ್ರಾವದಿಂದಾಗಿ ನಾನು ಹಲವಾರು ಬಾರಿ ಚಿಕಿತ್ಸೆಗೆ ಒಳಗಾಗಿದ್ದೇನೆ. ನನ್ನ ದೇಹದಲ್ಲಿರುವ ಕಲೆಗಳನ್ನು ತೆಗೆದುಹಾಕಲು ಇಂದಿಗೂ ಕೆಲವು ರೀತಿಯ ಟ್ರೀಟ್ಮೆಂಟ್ ಪಡೆಯುತ್ತಿದ್ದೇನೆ. ಹೇಗಾದರೂ ಮಾಡಿ ಬದುಕಬೇಕು. ನನ್ನ ಬಳಿ ಹಣವಿದ್ದರೆ ಸ್ವಂತ ಮನೆ ಖರೀದಿಸುತ್ತಿದ್ದೆ. ಆದ್ರೆ, ಈಗಿಲ್ಲ. ಕೆಲವರು ನನ್ನನ್ನು ನಿಷ್ಪ್ರಯೋಜಕ ತಾಯಿ ಎಂದು ಬಿಂಬಿಸಿದರು. ಇಷ್ಟೆಲ್ಲಾ ಆದ ಬಳಿಕ ನಾನಿನ್ನು ಏಕಾಂಗಿಯಾಗಿದ್ದೇನೆ. ಆತ ಮಾತ್ರ ಮತ್ತೊಂದು ಮದುವೆಯಾಗಿ ಪತ್ನಿಯೊಂದಿಗಿದ್ದಾನೆ. ಹೀಗಿದ್ದರೂ ಸಹ ನಾನೇ ಕೆಟ್ಟವಳು" ಎಂದು ಅಮೃತ ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).