ಇದೊಂದು ಮೆಂಟಲ್​ ಕೇಸ್…​! ಶಾಹೀನ್ ಅಫ್ರಿದಿಗೆ ಚಳಿಬಿಡಿಸಿದ ಪಾಕ್ ಕ್ರಿಕೆಟ್ ಅಭಿಮಾನಿಗಳು

shaheen afridi roasted online
Published on

ಲಾಹೋರ್​: ಪಾಕಿಸ್ತಾನ ಕ್ರಿಕೆಟ್ (Pakistan Cricket)​ ತಂಡದ ಆಟಗಾರರ ನಡುವೆ ಒಗ್ಗಟ್ಟಿಲ್ಲ, ಗೆಲುವಿನತ್ತ ಒಂದೇ ಮನಸ್ಥಿತಿ ಇಲ್ಲ ಎಂಬುದು ಇದೀಗ ಮತ್ತಷ್ಟು ಸ್ಪಷ್ಟವಾಗುತ್ತಿದ್ದು, ಅದಕ್ಕೆ ಇತ್ತೀಚಿನ ಬೆಳವಣಿಗಗಳೇ ಸಾಕ್ಷಿಯಾಗಿದೆ. ಅದ್ಯಾಕೋ ತಂಡದಲ್ಲಿನ ಆಂತರಿಕ ಸಮಸ್ಯೆಗಳು ದಿನೇ ದಿನೇ ಭುಗಿಲೇಳುತ್ತಿವೆಯೇ ಹೊರತು ಬಗೆಹರಿಯುವ ಯಾವ ಲಕ್ಷಣಗಳು ಕಂಡುಬರುತ್ತಿಲ್ಲ. ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್ ಕೋಚ್​ ಗ್ಯಾರಿ ಕರ್ಸ್ಟನ್, ವೇಗಿ ಶಾಹೀನ್ ಅಫ್ರಿದಿಗೆ (Shaheen Afridi) ಕೆಲಸದ ಹೊರೆ ಹೆಚ್ಚಾಗಿದೆ. ಇದು ಬೌಲರ್​ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಗ್ಯಾರಿ ಅಭಿಪ್ರಾಯಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅಫ್ರಿದಿ, ಅಂತಹ ಯಾವ ಸಮಸ್ಯೆಯೂ ನನಗಿಲ್ಲ ಎಂದು ಪಾಕ್​ನ ಮಾಜಿ ಹಿರಿಯ ಆಟಗಾರರನ್ನು ಹೋಲಿಸಿ ಮಾತನಾಡಿದ್ದರು.

ಶಾಹೀನ್ ಕೊಟ್ಟ ಹೇಳಿಕೆ

“ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ಅತಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ್ದೇನೆ ಎಂದು ನೀವು ನನಗೆ ಹೇಳುತ್ತಿದ್ದೀರಾ. ಹಾಗೆ ನೋಡಿದರೆ ಹಿರಿಯ ಮಾಜಿ ಕ್ರಿಕೆಟಿಗರಾದ ವಾಸೀಮ್ ಅಕ್ರಮ್ ಮತ್ತು ವಕಾರ್ ಯೂನಿಸ್, ತಮ್ಮ ಕಾಲದಲ್ಲಿ ಏನು ಮಾಡಿದರು ಎಂಬುದನ್ನು ನೀವೊಮ್ಮೆ ಗಮನಿಸಬೇಕು. ಆಗ ಯಾವುದೇ ಹೊರೆಯ ಸಮಸ್ಯೆ ಇರಲಿಲ್ಲ. ಕಳೆದ ವರ್ಷದಲ್ಲಿ ನಾವ್ಯಾಕೆ ಒತ್ತಡ ಮತ್ತು ಗಾಯಗಳ ಬಗ್ಗೆಯೇ ಹೆಚ್ಚು ಚರ್ಚಿಸುತ್ತಿದ್ದೇವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಆಟಗಾರರ ಮೇಲೆ ಅವಲಂಬಿತವಾಗಿರುತ್ತದೆ. ನೀವಿಲ್ಲಿ ಮಾನಸಿಕವಾಗಿ ಸದೃಢವಾಗಿರಬೇಕು ಅಷ್ಟೇ” ಎಂದು ಕೋಚ್​ ಮಾತಿಗೆ ಖಡಕ್​ ತಿರುಗೇಟು ನೀಡಿದ್ದರು.

ನೆಟ್ಟಿಗರು ಗರಂ

ಸದ್ಯ ಶಾಹೀನ್​ ಕೊಟ್ಟ ಹೇಳಿಕೆಗಳು ಪಾಕ್ ಕ್ರಿಕೆಟ್ ಅಭಿಮಾನಿಗಳಿಗೆ ಇಷ್ಟವಾದಂತೆ ಕಂಡುಬಂದಿಲ್ಲ. ಹಿರಿಯ ಮಾಜಿ ಆಟಗಾರರ ಹೆಸರನ್ನು ಉಲ್ಲೇಖಿಸಿ, ಅವರ ಬೌಲಿಂಗ್ ಮತ್ತು ತನ್ನ ಬೌಲಿಂಗ್​ ಅನ್ನು ಹೋಲಿಸಿ ಮಾತನಾಡಿದ ಅಫ್ರಿದಿಯನ್ನು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ಎಂಬ ಪದ ಕೇಳುತ್ತಿದ್ದಂತೆ ಜಾಲತಾಣಗಳಲ್ಲಿ ಶಾಹೀನ್ ವಿರುದ್ಧ ತೀವ್ರ ಕಿಡಿಕಾರಿರುವ ಫ್ಯಾನ್ಸ್, ಹಿರಿಯ ಆಟಗಾರರು ನಿನ್ನಂತೆ ಇರಲಿಲ್ಲ. ಅವರೆಲ್ಲಾ ಒಂದೇ ದಿನ ಒಬ್ಬೊಬ್ಬರು 30 ಓವರ್​ಗಳನ್ನು 140 ವೇಗದ ಸರಾಸರಿಯಲ್ಲಿ ಬೌಲಿಂಗ್​ ಮಾಡಿದ್ದು ಇದೆ. ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸಿ ಮಾತನಾಡುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಕೆಲವರು, 'ಅವರು ದಿಗ್ಗಜ ಆಟಗಾರರು, ನಿನ್ನಂತಲ್ಲ. ಅವರು ನಿವೃತ್ತಿ ಹೊಂದಿದಾಗ ನೀನಿನ್ನು ಚಿಕ್ಕ ಹುಡುಗ. ಅವರಿಗೆ ಯಾವ ಸಮಸ್ಯೆ ಇರಲಿಲ್ಲ ಎಂದು ನೀನು ಹೇಗೆ ಹೇಳಲು ಸಾಧ್ಯ?' ಎಂದು ಪ್ರಶ್ನಿಸಿದರೆ, ಮತ್ತೊಬ್ಬರು ಇದೊಂದು ಮೆಂಟಲ್​ ಕೇಸ್​ ಎಂದು ವ್ಯಂಗ್ಯವಾಡಿದ್ದಾರೆ.(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net