

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಡಾ ಪ್ರಕರಣದಲ್ಲಿ ರಾಜ್ಯ ರಾಜಕೀಯ ಹುದುಗಿರುವ ಹೊತ್ತಿನಲ್ಲೇ ರಾಜ್ಯದಲ್ಲಿ ಉಪಸಮರಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ. ಮುಂದಿನ ವಾರದಲ್ಲಿ ಉಪ ಚುನಾವಣೆ ದಿನಾಂಕ ಘೋಷಣೆಯಾಗಬಹುದೆಂಬ ಸುಳಿವರಿತ ರಾಜಕೀಯ ಪಕ್ಷಗಳು ತೆರೆಮರೆ ಕೆಲಸ ಆರಂಭಿಸಿವೆ.
ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಸವರಾಜ ಬೊಮ್ಮಾಯಿ, ಸಂಡೂರಿನಿಂದ ಆಯ್ಕೆಯಾಗಿದ್ದ ತುಕಾರಾಂ, ಚನ್ನಪಟ್ಟಣದಿಂದ ಆಯ್ಕೆಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ತೆರಳಿದ ಕಾರಣಕ್ಕೆ ಚುನಾವಣೆ ನಡೆಯಲಿದೆ.
ಈ ಮೂರು ಕ್ಷೇತ್ರ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ವಿಷಯ. ಗೆದ್ದುಕೊಂಡ ಕ್ಷೇತ್ರದ ಜತೆಗೆ ಇತರ ಕ್ಷೇತ್ರದಲ್ಲೂ ಹಿಡಿತ ಸಾಧಿಸುವ ಮೂಲಕ ರಾಜಕೀಯ ಸಂದೇಶ ಕಳಿಸುವುದು ರಾಜಕೀಯ ನಾಯಕರ ಪ್ರಮುಖ ಗುರಿಯಾಗಿದೆ. ಲೋಕಸಭೆ ಚುನಾವಣೆ ಬಳಿಕ ಕೊಂಚ ವಿಶ್ರಾಂತಿಯಲ್ಲಿದ್ದ ಪಕ್ಷದ ಸಂಘಟನೆಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಚುನಾವಣೆಗೆ ಸಜ್ಜುಮಾಡಬೇಕಾದ ಸವಾಲಿದೆ. ಪಕ್ಷದ ಇತರ ಕಡೆಗಳ ಪ್ರಮುಖ ನಾಯಕರನ್ನು ಈ ಮೂರು ಕ್ಷೇತ್ರದಲ್ಲಿ ಜವಾಬ್ದಾರಿ ನೀಡುವ ಪೂರ್ವ ತಯಾರಿ ಆರಂಭವಾಗಿದ್ದು ಆ ಮೂಲಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೋಬಳಿ, ಗ್ರಾಪಂ, ಗ್ರಾಮ ಹಾಗೂ ವಾರ್ಡ್ಗಳಿಗೆ ವಿವಿಧ ಹಂತದ ನಾಯಕರಿಗೆ ಜವಾಬ್ದಾರಿ ನೀಡಲು ಸಿದ್ಧತೆ ನಡೆದಿದೆ.
ಸರ್ಕಾರಕ್ಕೆ ಸವಾಲು: ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಸಮೀಪಿಸುತ್ತಿದೆ, ಗ್ಯಾರಂಟಿ ಯೋಜನೆ ಮನೆ ಮನೆ ತಲುಪಿದೆ. ಇಂತಹ ವಾತಾವರಣದಲ್ಲಿ ಈ ಉಪ ಚುನಾವಣೆ ಸರ್ಕಾರದ ಪಾಲಿಗೆ ಜನರ ನಾಡಿಮಿಡಿತ ಅರಿಯುವ ಒಂದು ಸಣ್ಣ ಪರೀಕ್ಷೆಯೂ ಆಗಿರಲಿದೆ. ಇದೇ ಕಾರಣಕ್ಕೆ ಮುಂದಿನ 4-5 ದಿನದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಅಥವಾ ಉದ್ಘಾಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.
ಕಾಂಗ್ರೆಸ್ ಗುರಿ: ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ತುಕಾರಾಂ ಗೆಲುವು ಸಾಧಿಸಿದ ಬಳಿಕ ಬಳ್ಳಾರಿ ಸಂಸದರಾದರು. ಇದೀಗ ಈ ಕ್ಷೇತ್ರ ಉಳಿಸಿಕೊಳ್ಳಲು ತುಕಾರಾಂ ಕುಟುಂಬಕ್ಕೆ ಟಿಕೆಟ್ ಕೊಡಬೇಕೆಂಬ ಚರ್ಚೆ ಪಕ್ಷದಲ್ಲಿದೆ. ಈ ಕ್ಷೇತ್ರದ ಜತೆ ಚನ್ನಪಟ್ಟಣದ ಮೇಲೆ ವಿಶೇಷ ನಿಗಾವಹಿಸಿದೆ. ಶಿಗ್ಗಾವಿಯಲ್ಲೂ ಗೆಲುವು ಸಾಧಿಸುವ ಬಯಕೆ ಹೊಂದಿದೆ. ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಕಣಕ್ಕಿಳಿಯುತ್ತಾರೆಂಬ ಮಾತು ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಮಾತ್ರ ನಿರಂತರವಾಗಿ ಚನ್ನಪಟ್ಟಣದಲ್ಲಿ ಸಕ್ರಿಯರಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಾದ ಮೈತ್ರಿಯನ್ನು ಉಪ ಚುನಾವಣೆಯಲ್ಲೂ ವಿಸ್ತರಿಸಲು ಬಿಜೆಪಿ ಹಾಗೂ ಜೆಡಿಎಸ್ ಬಯಸಿವೆ. ಜೆಡಿಎಸ್ ಶತಾಯಗತಾಯ ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ಳಬೇಕೆಂಬ ಆಸೆ ಹೊಂದಿದೆ. ಕಾರ್ಯಕರ್ತರೊಬ್ಬರು ಕಣಕ್ಕಿಳಿಯುತ್ತಾರೆಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದರೂ, ಅವರೇ ಕಣಕ್ಕಿಳಿಯುವ ಸಾಧ್ಯತೆಯೂ ಇಲ್ಲದಿಲ್ಲ. ಶಿಗ್ಗಾಂವಿಯಿಂದ ಬಸವರಾಜ ಬೊಮ್ಮಾಯಿ ಪುತ್ರರ ಹೆಸರು ಕೇಳಿಬರುತ್ತಿದೆ. ಸಂಡೂರಿನಿಂದ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗೇ ಪುನಃ ಅವಕಾಶ ನೀಡಲಾಗುತ್ತೋ ಅಥವಾ ಹೊಸಬರಿಗೆ ಅವಕಾಶವೇ ಎಂದು ಸ್ಪಷ್ಟವಾಗಿಲ್ಲ.
ಲೋಕಸಭೆ ಚುನಾವಣೆಯಲ್ಲಾದ ಮೈತ್ರಿಯನ್ನು ಉಪ ಚುನಾವಣೆಯಲ್ಲೂ ವಿಸ್ತರಿಸಲು ಬಿಜೆಪಿ ಹಾಗೂ ಜೆಡಿಎಸ್ ಬಯಸಿವೆ. ಜೆಡಿಎಸ್ ಶತಾಯಗತಾಯ ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ಳಬೇಕೆಂಬ ಆಸೆ ಹೊಂದಿದೆ. ಕಾರ್ಯಕರ್ತರೊಬ್ಬರು ಕಣಕ್ಕಿಳಿಯುತ್ತಾರೆಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದರೂ, ಅವರೇ ಕಣಕ್ಕಿಳಿಯುವ ಸಾಧ್ಯತೆಯೂ ಇಲ್ಲದಿಲ್ಲ. ಶಿಗ್ಗಾಂವಿಯಿಂದ ಬಸವರಾಜ ಬೊಮ್ಮಾಯಿ ಪುತ್ರರ ಹೆಸರು ಕೇಳಿಬರುತ್ತಿದೆ. ಸಂಡೂರಿನಿಂದ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗೇ ಪುನಃ ಅವಕಾಶ ನೀಡಲಾಗುತ್ತೋ ಅಥವಾ ಹೊಸಬರಿಗೆ ಅವಕಾಶವೇ ಎಂದು ಸ್ಪಷ್ಟವಾಗಿಲ್ಲ.
ಮೈಸೂರು: ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರವಿದೆಯೋ ಅಲ್ಲಿ ಕೇಂದ್ರ ಸರ್ಕಾರ ಇ.ಡಿ., ಸಿಬಿಐ ಹಾಗೂ ರಾಜಭವನದ ಕಚೇರಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಷ್ಟ್ರಪತಿ ಅಥವಾ ರಾಜ್ಯಪಾಲರು ಸಂವಿಧಾನದ ಪ್ರಕಾರ ಕೆಲಸ ಮಾಡಲು ನಾಮಾಂಕಿತರಾದವರು. ಚುನಾವಣೆ ಮೂಲಕ ಆಯ್ಕೆಯಾದವರಲ್ಲ. ಆದರೆ, ಜನಪ್ರತಿನಿಧಿಗಳು ಚುನಾವಣೆ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿ ಪ್ರಮುಖರು. ಇಂತಹ ಪ್ರಮುಖ ವ್ಯತ್ಯಾಸವಿರುವಾಗ ಯಾವುದೇ ರಾಜ್ಯಪಾಲರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ವಿಷಯದ ಕುರಿತು ರಾಷ್ಟ್ರಾದ್ಯಂತ ಚರ್ಚೆ ಅವಶ್ಯಕತೆ ಇದೆ ಎಂದರು.
ಇಡಿ ಮತ್ತು ಸಿಬಿಐ ದುರ್ಬಳಕೆಯಾಗುತ್ತಿರು ವುದು ಆಪರೇಷನ್ ಕಮಲದ ಭಾಗವಾಗಿರ ಬಹುದೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಇಡೀ ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರವಿದೆಯೋ, ಅಲ್ಲಿ ಕೇಂದ್ರ ಸರ್ಕಾರ ಇಡಿ, ಸಿಬಿಐ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು
ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡಲಾಗುವುದು. ನನಗಿರುವ ಜನಬೆಂಬಲದಿಂದ ಬೆದರಿರುವ ಪ್ರತಿಪಕ್ಷಗಳು, ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲ ಬಾರಿ. ಪ್ರಕರಣವನ್ನು ನಾನು ಕಾನೂನು ಭಾಗದಲ್ಲಿ ಎದುರಿಸುತ್ತೇನೆ ಎಂದು ಹೇಳಿದರು.
ಮುಡಾ ವಿಚಾರದಲ್ಲಿ ನಾನು ತಪ್ಪು ಮಾಡಿಲ್ಲ. ತಪ್ಪು ಮಾಡಿಲ್ಲವಾದ್ದರಿಂದ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಜಾಮೀನಿನ ಮೇಲಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆಯೇ? ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿವೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಗೋದ್ರಾ ಘಟನೆಗೆ ಸಂಬಂಧಪಟ್ಟಂತೆ ಮೋದಿ ರಾಜೀನಾಮೆ ನೀಡಿದ್ದರಾ? ನಮ್ಮ ಸರ್ಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ ಎಂದರು.
ಬೆಂಗಳೂರು: ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚಿಸಿ ಕೊಂಡಿರಿ. ಮುಡಾ ಹಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇ ಗತಿ ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಕರ್ಮ ಹಿಟ್ ಬ್ಯಾಕ್ ಎಂದರೇ ಇದೇ ಅಲ್ಲವೆ ಸಿದ್ದರಾಮಯ್ಯನವರೇ? ಎಂದು ಕೆಣಕಿರುವ ಅವರು, ರಾಜ್ಯದಲ್ಲಿ ಸಿಬಿಐ ಪ್ರವೇಶಕ್ಕೆ ಇದ್ದ ಮುಕ್ತ ಅವಕಾಶವನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ. ಸಿಬಿಐಗೆ ನಿರ್ಬಂಧ ಹಾಕಿರುವುದು ಎಂದರೆ ಮುಡಾ ಅಕ್ರಮ ಒಪ್ಪಿಕೊಂಡಂತೆ ಆಗಿದೆ. ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೕ...ಉಘೕ... ಎನ್ನಲೇಬೇಕು. ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರಖಾಸ್ತು ಮಾಡಿಬಿಟ್ಟಿತು. ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ರಾಜ್ಯ ಪ್ರವೇಶಕ್ಕೆ ಸಿಬಿಐ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ‘ಸಿದ್ದಾಪರಾದ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ ಎಂದು ಟಾಂಗ್ ನೀಡಿದ್ದಾರೆ.
ನವದೆಹಲಿ: ‘ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವ ಮಾತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಅನ್ವಯವಾಗುತ್ತದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ‘ಎಕ್ಸ್’ನಲ್ಲಿ ತಿರುಗೇಟು ನೀಡಿರುವ ಅವರು, ‘‘ಸಿದ್ದರಾಮಯ್ಯನವರೇ, ನಿಮಗೆ ವಾಸ್ತವದ, ಇತಿಹಾಸದ ಅರಿವೇ ಇಲ್ಲ ಅನಿಸುತ್ತದೆ. ಸಂವಿಧಾನದ ದುರುಪಯೋಗ ಮಾಡಿದ್ದು ಕಾಂಗ್ರೆಸ್. ಎಮರ್ಜೆನ್ಸಿ ಹೇರಿ ಪ್ರಜಾತಂತ್ರವನ್ನು ಕಗ್ಗೊಲೆ ಮಾಡಿ, ಜನರ, ಮಾಧ್ಯಮದ ಹಕ್ಕು ದಮನಿಸಿದ್ದು ಇಂದಿರಾ ನೇತೃತ್ವದ ಕಾಂಗ್ರೆಸ್. ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡು 91ಕ್ಕೂ ಹೆಚ್ಚು ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ್ದು ಕಾಂಗ್ರೆಸ್’ ಎಂದು ಹೇಳಿದ್ದಾರೆ.
‘‘ಭ್ರಷ್ಟಾಚಾರ ಮಾಡಿ ಮುಡಾ ಸೈಟುಗಳನ್ನು ಕಬಳಿಸಿ, ಕುಟುಂಬ ಸಮೇತ ಅನ್ಯಾಯ ಮಾಡಿರುವ ನಿಮ್ಮ ಮೇಲೆ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ ನಿರ್ಧಾರವನ್ನು ರಾಜ್ಯದ ಉಚ್ಚ ನ್ಯಾಯಾಲಯವೇ ಎತ್ತಿಹಿಡಿದಿದೆ. ನಿಮಗೆ ನ್ಯಾಯಾಲಯದ ತೀರ್ಪಿನ ಮೇಲೂ ನಂಬಿಕೆ ಇಲ್ಲವೆಂದಲ್ಲವೇ? ದುರಾಡಳಿತದ ನಿಮ್ಮ ಸರ್ಕಾರದ ಮುಖವಾಡ ಜನರ ಮುಂದೆ ಈಗಾಗಲೇ ಕಳಚಿದೆ. ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ’ ಎಂದು ಹೇಳಿದ್ದಾರೆ.