

ನವದೆಹಲಿ: ಕ್ರಿಕೆಟ್ ಜಗತ್ತಿನ ದಂತಕಥೆ ವಿರಾಟ್ ಕೊಹ್ಲಿ (Virat Kohli). ಈ ಹೆಸರು ಕೇಳಿದ್ರೆ ಸಾಕು ಅಭಿಮಾನಿಗಳಲ್ಲಿ ಅದೇನೋ ಒಂದು ಉಲ್ಲಾಸ, ಉತ್ಸಾಹ. ಮೈದಾನದಲ್ಲಿ ವಿರಾಟ್ ಬ್ಯಾಟ್ ಹಿಡಿದು ಕಣಕ್ಕಿಳಿಯುತ್ತಿದ್ದಾರೆ ಎಂದರೆ ಸ್ಟೇಡಿಯಂ ಪೂರ ಅಭಿಮಾನಿಗಳು ಹುಚ್ಚೆದ್ದು ಕುಣಿಯಲು ಪ್ರಾರಂಭಿಸುತ್ತಾರೆ. ತಮ್ಮ ವಿಭಿನ್ನ ಬ್ಯಾಟಿಂಗ್ ವೈಖರಿಯಿಂದಲೇ ಕ್ರಿಕೆಟ್ ಪ್ರಿಯರ ಗಮನಸೆಳೆಯುವ ಕಿಂಗ್ ಕೊಹ್ಲಿ, ಎದುರಾಳಿ ಬೌಲರ್ಗಳ ಬೆವರಿಳಿಸುವಲ್ಲಿ ನಿಸ್ಸೀಮರು. ದಾಖಲೆಗಳ ಸರದಾರನಾಗಿ ಮೆರೆಯುತ್ತಿರುವ ವಿರಾಟ್ ಅಂದು ಭಾರತೀಯ ಕ್ರಿಕೆಟ್ಗೆ (Team India) ಎಂಟ್ರಿ ಕೊಡುವ ಮೊದಲು ತಾವು ಎದುರಿಸಿದ ಒಂದು ಕಹಿ ಘಟನೆಯೊಂದರ ಬಗ್ಗೆ ಇದೀಗ ಮುಕ್ತವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಹಿಂದು ಮಹಾಗಣಪತಿ ಶೋಭಾಯಾತ್ರೆ
ಸಾಮಾನ್ಯವಾಗಿ ರಾಜಕೀಯ ವಲಯದಲ್ಲಿ, ಸರ್ಕಾರಿ ಹುದ್ದೆಗಳನ್ನು ಪಡೆಯುವ ನಿಟ್ಟಿನಲ್ಲಿ ಲಂಚ ಎಂಬ ಪದಗಳು ತಾಂಡವವಾಡುತ್ತದೆ. ಲಂಚ ಕೊಟ್ಟರೇ ಕೇಳಿದ್ದೆಲ್ಲಾ ನಿಮಗೆ, ಅದೆಂಥಾ ಸ್ಥಾನವನ್ನಾದರೂ ಕೊಡುತ್ತಾರೆ ಇಲ್ಲವೇ ಕೊಡಿಸುತ್ತಾರೆ. ನಿನ್ನ ಬಳಿ ಲಂಚ ಕೊಡುವ ಸಾಮರ್ಥ್ಯ ಇಲ್ವಾ? ಹಾಗಿದ್ರೆ, ಖಂಡಿತ ಸೀಟು ಇಲ್ಲ, ಸ್ಥಾನವೂ ಇಲ್ಲ ಎಂದು ಹೇಳಿ ಹೊರ ನೂಕುತ್ತಾರೆ. ಅಸಲಿಗೆ ಇಂದು ಯಶಸ್ವಿ ಕ್ರಿಕೆಟಿಗರಾಗಿ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿರುವ 'ರನ್ ಮಷಿನ್'ರ ಜೀವನದಲ್ಲಿಯೂ ಈ ಲಂಚ ಅನ್ನೋ ಕರಿನೆರಳಿತ್ತು ಎಂಬುದೇ ಸದ್ಯ ಶಾಕಿಂಗ್ ವಿಚಾರ. ಟೀಮ್ ಇಂಡಿಯಾ ಸೇರುವ ಮುನ್ನ ವಿರಾಟ್ ಕೊಹ್ಲಿ ದೆಹಲಿ ರಣಜಿ ಟ್ರೋಫಿ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
2006-07ರಲ್ಲಿ ದೆಹಲಿಗಾಗಿ ರಣಜಿ ಟ್ರೋಫಿಯಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದ ವಿರಾಟ್, ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ ನೇರವಾಗಿ ಭಾರತೀಯ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ಆದರೆ, ಅಂದು ದೆಹಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವಿರಾಟ್ರನ್ನು ರಾತ್ರೋ ರಾತ್ರಿ ತಂಡದಿಂದ ಕೈಬಿಡಲಾಗಿತ್ತು. ಅದಕ್ಕೆ ಕಾರಣ ಲಂಚ. ಸದ್ಯ ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಜತೆ ಮನಬಿಚ್ಚಿ ಮಾತನಾಡಿರುವ ಕಿಂಗ್ ಕೊಹ್ಲಿ, ಲಂಚ ಅನ್ನೋ ಪದ ನನ್ನ ಜೀವನದಲ್ಲಿಯೂ ಕೇಳಿಬಂದಿತ್ತು ಎಂದಿದ್ದಾರೆ.
"ಅಂದು ನನ್ನ ಜೀವನದಲ್ಲಿ ಒಂದೊಳ್ಳೆ ಅವಕಾಶವಿತ್ತು. ನಾನು ಅಂಡರ್-14 ದೆಹಲಿ ತಂಡಕ್ಕೆ ಆಯ್ಕೆಯಾಗಿದ್ದೆ. ಆದ್ರೆ, ಕಾರಣಾಂತರಗಳಿಂದ ನನ್ನನ್ನು ಮಧ್ಯರಾತ್ರಿ 1 ಗಂಟೆಗೆ ತಂಡದಿಂದ ದಿಢೀರ್ ಎಂದು ಕೈಬಿಡಲಾಯಿತು. ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ, ಏನಾಗುತ್ತದೆ ಎಂಬುದರ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಅಸಲಿಗೆ ನನ್ನ ಜಾಗಕ್ಕೆ ಬೇರೊಬ್ಬರನ್ನು ಹಾಕಿಕೊಂಡಿದ್ದರು. ಕಾರಣ, ಅವರು ಹಣ ಕೊಟ್ಟಿದ್ದರು ಎಂದು. ಈ ವಿಷಯ ನನ್ನ ತಂದೆಯ ಗಮನಕ್ಕೆ ಕೂಡ ಬಂದಿತು. ಲಂಚ ಕೊಟ್ಟರೆ ನಿಮ್ಮ ಮಗನನ್ನು ಎರಡು ಪಂದ್ಯಗಳ ಬಳಿಕ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ನಮ್ಮ ತಂದೆಗೆ ಆಮಿಷವೊಡ್ಡಿದ್ದರು. ಇದರಿಂದ ಅಸಮಾಧಾನಗೊಂಡ ನನ್ನಪ್ಪ, ನಾನು ಒಂದು ರೂಪಾಯಿ ಕೂಡ ಕೊಡೋದಿಲ್ಲ. ತನ್ನ ಪ್ರತಿಭೆಯಿಂದ ಆತನಿಗೆ ಆಡಲು ಸಾಧ್ಯವಾದರೆ ಆಡಲಿ, ಇಲ್ಲದಿದ್ದರೇ ಬೇಡವೇ ಬೇಡ ಎಂದಿದ್ದರು. ತಂದೆಯ ಆ ಮಾತುಗಳು ಇಂದಿಗೂ ನನ್ನಲ್ಲಿ ಹಸಿರಾಗಿದೆ" ಎಂದು ಹೇಳಿದರು.
ಇದಾದ ನಂತರ ನಡೆದಿದ್ದೆಲ್ಲಾ ಇತಿಹಾಸ. ದೆಹಲಿ ತಂಡದ ಮೂಲಕ ದೇಶಕ್ಕೆ ತಾನೊಬ್ಬ ಅದ್ಭುತ ಕ್ರಿಕೆಟಿಗನಾಗಿ ಹೊರಹೊಮ್ಮುವ ಭರವಸೆ ಮೂಡಿಸಿದ ವಿರಾಟ್, 2006ರಲ್ಲಿ ಕರ್ನಾಟಕ ತಂಡದ ಎದುರು ರಣಜಿ ಪಂದ್ಯವನ್ನಾಡಿದರು. ಇದೇ ಸಂದರ್ಭದಲ್ಲಿ ತಮ್ಮ ತಂದೆಯ ಸಾವಿನ ಸುದ್ದಿಯನ್ನು ಕೇಳಿದ ಕೊಹ್ಲಿ, ಪಂದ್ಯವನ್ನು ಅರ್ಧಕ್ಕೆ ಬಿಡದೆ, ಎದುರಾಳಿ ಟೀಮ್ ವಿರುದ್ಧ ಆಕರ್ಷಕ 90 ರನ್ ಸಿಡಿಸಿದ್ದರು. ಇದು ಅವರ ಗಟ್ಟಿ ನಿರ್ಧಾರ, ಮಾನಸಿಕ ಸಾಮರ್ಥ್ಯ, ಆಟದ ಬದ್ಧತೆ ಏನು ಎಂಬುದನ್ನು ಸಾಬೀತುಪಡಿಸಿತು. ಇಂದು ವಿಶ್ವ ಕ್ರಿಕೆಟ್ನಲ್ಲಿ ತಮ್ಮದೇ ಒಂದು ಅಧ್ಯಾಯವನ್ನು ಹುಟ್ಟುಹಾಕಿರುವ ವಿರಾಟ್ ಕೊಹ್ಲಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯ ಚಿಲುಮೆಯಾಗಿರುವುದು ನಿಜಕ್ಕೂ ಖುಷಿಯ ಸಂಗತಿ,(ಏಜೆನ್ಸೀಸ್).