

ಕೇರಳ: ಗಾಯಕಿ ಅಮೃತಾ ಸುರೇಶ್ (Amrutha Suresh) ಅವರೊಂದಿಗೆ 2019ರಲ್ಲಿ ದಾಂಪತ್ಯ ಜೀವನ ಮುರಿದುಕೊಂಡ ಮಲಯಾಳಂ ಮತ್ತು ತಮಿಳು ನಟ ಬಾಲಾ (Bala), ಹಲವಾರು ಸಂದರ್ಶನಗಳಲ್ಲಿ ಮಾಜಿ ಪತ್ನಿ ತನ್ನ ಮಗಳನ್ನು ನೋಡಲು, ಮಾತನಾಡಿಸಲು ಬಿಡುತ್ತಿಲ್ಲ. ಒಬ್ಬ ತಂದೆಯಾಗಿ ನನಗೆ ನನ್ನ ಪುತ್ರಿಯನ್ನು ನೋಡುವ ಹಕ್ಕಿದೆ. ಆದ್ರೆ, ಆಕೆಯ ಕುಟುಂಬಸ್ಥರು ಇದ್ಯಾವುದಕ್ಕೂ ಅನುಮತಿ ನೀಡುತ್ತಿಲ್ಲ. ನನ್ನಿಂದ ಅಪ್ಪನ ಹಕ್ಕನ್ನು ಕಸಿಯುತ್ತಿದ್ದಾರೆ ಎಂದು ದೂರಿದ್ದರು. ಈ ವಿಷಯದಿಂದ ತೀವ್ರ ಬೇಸತ್ತ ಮಗಳು, ವಿಡಿಯೋ ಸಂದೇಶದ ಮೂಲಕ ನಿನ್ನ ಪ್ರೀತಿಸಲು ಒಂದೇ ಒಂದು ಕಾರಣವೂ ಇಲ್ಲ ಎಂದು ನೇರವಾಗಿ ತಂದೆಯ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಇದನ್ನೂ ಓದಿ: ಫೆಬ್ರವರಿಗೆ ಮೇಲ್ಸೇತುವೆ ಲೋಕಾರ್ಪಣೆ
ಪೋಷಕರ ವಿಚಾರದಿಂದ ತೀವ್ರ ಮನನೊಂದ ಬಾಲಾ ಮಗಳು, ಕಡೆಗೂ ವಿಡಿಯೋ ಮೂಲಕ ಪ್ರಥಮ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. "ನನ್ನನ್ನು, ನನ್ನ ತಾಯಿ, ಚಿಕ್ಕಮ್ಮ ಮತ್ತು ಅಜ್ಜಿಯನ್ನು ಬಾಧಿಸುವ ಒಂದು ಹಿಂಸಾತ್ಮಕ ವಿಷಯದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಇತ್ತೀಚಿನ ಬೆಳವಣಿಗಗಳಿಂದ ನನ್ನ ಕುಟುಂಬವು ತೀವ್ರ ಬಳಲುತ್ತಿದೆ. ತಂದೆ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ ಕುರಿತು ನಾನಿಲ್ಲಿ ಹೇಳುತ್ತಿದ್ದೀನಿ. ಅವರು (ಬಾಲಾ) ಅನೇಕ ಸಂದರ್ಶನಗಳಲ್ಲಿ ನನ್ನನ್ನು ಪ್ರೀತಿಸ್ತೀನಿ, ಉಡುಗೊರೆಗಳನ್ನು ಕಳುಹಿಸುತ್ತೀನಿ ಎಂದೆಲ್ಲಾ ಹೇಳಿದ್ದಾರೆ. ಅಸಲಿಗೆ ಇದ್ಯಾವುದೂ ನಿಜವಲ್ಲ. ನನ್ನಪ್ಪನನ್ನು ಪ್ರೀತಿಸಲು ನನಗೆ ಯಾವುದೇ ಕಾರಣವಿಲ್ಲ. ಆತ ನನಗೆ ಹಾಗೂ ನನ್ನ ಕುಟುಂಬಕ್ಕೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾನೆ" ಎಂದಿದ್ದಾರೆ.
"ನಾನು ಚಿಕ್ಕವಳಿದ್ದಾಗ ಅವರು ಕುಡಿದು ಮನೆಗೆ ಬಂದು ನನ್ನ ತಾಯಿಯನ್ನು ಹೊಡೆಯುತ್ತಿದ್ದರು. ನಾನಾಗ ಕೇವಲ ಮಗು, ಏನೂ ಮಾಡಲು ಸಾಧ್ಯವಿರಲಿಲ್ಲ. ಇಲ್ಲಿಯವರೆಗೂ ನನ್ನ ತಾಯಿಯೇ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಮತ್ತು ಒಮ್ಮೆಯೂ ನನ್ನನ್ನು ಹೊಡೆದಿಲ್ಲ, ಬಡಿದಿಲ್ಲ. ನನ್ನಪ್ಪ ನನ್ನಮ್ಮನಿಗೆ ತುಂಬಾ ಕಿರುಕುಳ ನೀಡುತ್ತಿದ್ದರು. ಕಂಠಪೂರ್ತಿ ಕುಡಿದು ಮನೆಗೆ ಬಂದು ಗಾಜಿನ ಬಾಟಲಿಯನ್ನು ಎಸೆದ ಘಟನೆ ನನಗೆ ಇನ್ನೂ ನೆನಪಿದೆ. ಆ ದಿನ ನನ್ನ ತಾಯಿ ಅದನ್ನು ತಡೆಯದೆ ಹೋಗಿದ್ದರೆ ಖಂಡಿತ ಬಾಟಲಿ ನನ್ನ ತಲೆಗೆ ಹೊಡೆಯುತ್ತಿತ್ತು. ಒಮ್ಮೆ ನನ್ನನ್ನು ಕೋರ್ಟಿನಿಂದ ಚೆನ್ನೈಗೆ ಎಳೆದೊಯ್ದು ಊಟ ಕೊಡದೆ ರೂಮ್ನಲ್ಲಿ ಕೂಡಿ ಹಾಕಿದ್ದ ಆತ ನನ್ನ ತಾಯಿಗೆ ಕರೆ ಮಾಡಲು ಸಹ ಬಿಡಲಿಲ್ಲ. ಇಂತಹ ಜನರನ್ನು ಎಂದಿಗೂ ನಂಬಬೇಡಿ. ಅವನು ಹೇಳುವುದೆಲ್ಲ ಸುಳ್ಳು,’’ ಎಂದು ವಿಡಿಯೋ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).