ಫೆಬ್ರವರಿಗೆ ಮೇಲ್ಸೇತುವೆ ಲೋಕಾರ್ಪಣೆ

kk
Published on

ಚನ್ನಪಟ್ಟಣ: ಎಲೆಕೇರಿ ರೈಲ್ವೆ ಮೇಲ್ಸೇತುವೆ ಈ ಭಾಗದ ಅಗತ್ಯವಾಗಿದ್ದು, ಈ ಕಾಮಗಾರಿ ಶೀಘ್ರ ಮುಕ್ತಾಯಗೊಂಡು ಮುಂಬರುವ ಫೆಬ್ರವರಿಯಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಸಂಸದ ಡಾ. ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಕಾಮಗಾರಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲುಮಾರ್ಗದಲ್ಲಿ ಪ್ರತಿನಿತ್ಯ 46 ರೈಲುಗಳು ಓಡಾಟ ನಡೆಸುತ್ತಿವೆ. ಪ್ರತಿಬಾರಿ ರೈಲ್ವೆ ಗೇಟ್ ಮುಚ್ಚುವ ಕಾರಣ ಈ ಭಾಗದ ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲ ಆಗುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ ತಡವಾದ ಕಾರಣ ಈ ಕಾಮಗಾರಿ ವಿಳಂಬವಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ಮುಂಬರುವ ಫೆಬ್ರವರಿಯಲ್ಲಿ ಲೋಕಾರ್ಪಣೆಯಾಗಲಿದೆ. ಎಲೆಕೇರಿ ಗ್ರಾಮದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಕೈವಾಕ್ ನಿರ್ಮಾಣಕ್ಕೂ ಸಂಬಂಧಿಸಿದವರ ಜತೆ ಚರ್ಚಿಸಲಾಗುವುದು ಎಂದರು.

ಇದಕ್ಕೂ ಮುನ್ನ ಎಲೆಕೇರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯ ಬಗ್ಗೆ ರೈಲ್ವೆ ಅಧಿಕಾರಿಗಳಿಂದ ಸಂಸದರು ಮಾಹಿತಿ ಪಡೆದರು. ನಗರದ ಎಲೆಕೇರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಹಲವರು ಸಂಸದರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಲವು ವರ್ಷದ ಕನಸು! : ಈ ವೇಳೆ ಸಂಸದರಿಗೆ ಕಾಮಗಾರಿಯ ಮಾಹಿತಿ ನೀಡಿದ ಸ್ಥಳೀಯರು, ನಗರದ ರೈಲ್ವೆ ಲೆವೆಲ್ ಕ್ರಾಸಿಂಗ್ 47ರ ಮೇಲ್ಸೇತುವೆ ಕಾಮಗಾರಿ ಈ ಭಾಗದ ಹಲವು ವರ್ಷಗಳ ಕನಸು. 2013ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ.50 ರ ಅನುಪಾತದಂತೆ ಪ್ರಾರಂಭಗೊಂಡ ಕಾಮಗಾರಿಯು 11 ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ.

ಎಲೆಕೇರಿ, ರಾಂಪುರ, ಕೋಮನಹಳ್ಳಿ, ಪಾರೆದೊಡ್ಡಿ, ದೇವರ ಹೊಸ ಹಳ್ಳಿ, ಚೋಳ ಮಾರನಹಳ್ಳಿ, ಕನ್ನಮಂಗಲ ಸೇರಿ ಹಲವು ಗ್ರಾಮಗಳ ಜನತೆ ನಗರವನ್ನು ಸಂಪರ್ಕಿಸಲು ಈ ಎಲ್.ಸಿ. 47 ರೈಲ್ವೆ ಗೇಟ್ ಆಧಾರವಾಗಿದೆ. ಪ್ರತಿನಿತ್ಯ ಹತ್ತಾರು ರೈಲುಗಳು ಸಂಚರಿಸುವ ಕಾರಣ ದಿನದ ಹಲವು ಗಂಟೆ ಗೇಟ್ ಮುಚ್ಚಿರುತ್ತದೆ. ಇದು ಈ ಭಾಗದ ಜನರಿಗೆ ತೊಂದರೆಯಾಗಿದ್ದು, ಈ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡುವಂತೆ ಸಂಸದರಿಗೆ ಮನವಿ ಸಲ್ಲಿಸಿದರು. ಇದೇವೇಳೆ, ಎಲೆಕೇರಿ ನಿವಾಸಿಗಳು ಮೇಲ್ಸೇತುವೆ ನಮ್ಮ ಗ್ರಾಮದಿಂದ ಹೊರಭಾಗದಲ್ಲಿದ್ದು, ನಗರದಿಂದ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಗೇಟ್ ಬಳಿಯೇ ಸ್ಕೈ ವಾಕ್ ನಿರ್ಮಿಸಿಕೊಡುವಂತೆ ಸಂಸದರಿಗೆ ಮನವಿ ಸಲ್ಲಿಸಿದರು. ಇದರೊಂದಿಗೆ, ನಗರದ ಸಾರ್ವಜನಿಕ ವಿದ್ಯಾಸಂಸ್ಥೆ ಪದಾಧಿಕಾರಿಗಳು ರೈಲ್ವೆ ಮೇಲ್ಸುತುವೆ ಕಾಮಗಾರಿಗೆ ನಮ್ಮ ಸಂಸ್ಥೆಯ ಆಸ್ತಿ ಸ್ವಾಧೀನವಾಗಿದ್ದು, ಪರಿಹಾರ ದೊರಕಿಲ್ಲ ಎಂದು ಸಂಸದರ ಗಮನ ಸೆಳೆದರು.

ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕಾಮಗಾರಿ ವಿಳಂಬವಾಗಿದೆ. ಆದರೆ, ಸದ್ಯ ಕಾಮಗಾರಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಸಂಸದರಿಗೆ ಮಾಹಿತಿ ನೀಡಿದರು. ಕಾಮಗಾರಿಯನ್ನು ಶೀಘ್ರ ಮುಗಿಸಿ ಸಾರ್ವಜನಿಕರ ಅನುಕೂಲಕ್ಕೆ ಒದಗಿಸಿ ಎಂದು ಸಂಸದರು ಸೂಚಿಸಿದರು.

ಸಂಸದರಿಗೂ ತಟ್ಟಿದ ಬಿಸಿ! : ನಗರದ ಎಲೆಕೇರಿ ರೈಲ್ವೆಗೇಟ್ ಸಮಸ್ಯೆಯ ಬಿಸಿ ಸಂಸದರಿಗೂ ತಟ್ಟಿತು. ಕಾಮಗಾರಿ ವೀಕ್ಷಣೆಗೆ ತೆರಳುವ ವೇಳೆಯೇ ರೈಲ್ವೆ ಗೇಟ್ ಬಂದಾಯಿತು. ಒಟ್ಟಿಗೆ ಮೂರು ರೈಲುಗಳ ಕ್ರಾಸಿಂಗ್ ಇದ್ದ ಕಾರಣ ಸಂಸದರು ಹಲವು ನಿಮಿಷಗಳ ಕಾಲ ಕಾಐಬೇಕಾಯಿತು. ಆದರೆ, ಗೇಟ್ ತೆರೆಯುವುದಕ್ಕೆ ಇನ್ನೂ ಕಾಲಾವಕಾಶ ಇರುವುದನ್ನು ಅರಿತ ಅವರು, ಸುಮಾರು ಅರ್ಧ ಕಿಮೀ ನಡೆದುಕೊಂಡೇ ಕಾಮಗಾರಿ ಸ್ಥಳಕ್ಕೆ ತೆರಳಿದರು. ಸ್ಥಳೀಯ ಮುಖಂಡರು ಅವರ ದಾರಿಯನ್ನೇ ಅನುಸರಿಸಿದರು. ಇದೇವೇಳೆ ತುರ್ತು ಸಂದರ್ಭದಲ್ಲಿ ಈ ಭಾಗದ ಜನರ ಗತಿಯೇನು? ಎಂದು ಆತಂಕ ವ್ಯಕ್ತಪಡಿಸಿದ ಸಂಸದರು, ಈ ಕಾಮಗಾರಿ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ತವ್ಯಕ್ಕೆ ಓಕೆ.., ರಾಜಕೀಯದಿಂದ ದೂರ?: ಕಾಮಗಾರಿ ವೀಕ್ಷಣೆ ವೇಳೆ ಡಾ.ಮಂಜುನಾಥ್ ತಮ್ಮ ವೃತ್ತಿಪ್ರೀತಿ ಮೆರೆಯುವ ಮೂಲಕ ಪ್ರಶಂಸೆಗೆ ಒಳಗಾದರು. ಸಂಸದರು ಬರುವ ವಿಚಾರ ತಿಳಿದು ಹೃದಯ ಸಮಸ್ಯೆ ಇರುವ ಮಹಿಳಾ ರೋಗಿಯೊಬ್ಬರು ತಮ್ಮ ವೈದ್ಯಕೀಯ ದಾಖಲೆಗಳನ್ನು ಕೈಯಲ್ಲಿ ಹಿಡಿದು ನಿಂತಿದ್ದರು. ಆಕೆಯನ್ನು ಕಂಡ ಸಂಸದರು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ಔಷಧ ಚೀಟಿ ಬರೆದುಕೊಟ್ಟರು. ಯಾವುದೇ ಸಮಸ್ಯೆಯಿಲ್ಲ, ನಿನ್ನ ಧೈರ್ಯವೇ ಉತ್ತಮ ಔಷಧ ಎಂದು ಭರವಸೆ ತುಂಬಿದರು. ಇದೇವೇಳೆ ಪತ್ರಕರ್ತರು ಸಿದ್ದರಾಮಯ್ಯ ಪ್ರಕರಣದ ಬಗ್ಗೆ ಪ್ರಶ್ನೆ ಕೇಳುತ್ತಲೇ ನಮ್ಮ ಪಕ್ಷದ ನಾಯಕರು ಏನು ತೀರ್ಮಾನ ಮಾಡುತ್ತಾರೋ ನನ್ನದು ಅದೇ ಎಂದಷ್ಟೇ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net