

ಪಟನಾ: ಗಂಗಾ ನದಿಗೆ ಬಿದ್ದ ಮಹಿಳೆಯೊಬ್ಬಳು 12 ಗಂಟೆಗಳ ಕಾಲ ನೀರಿನಲ್ಲೇ ಇದ್ದು, ನಂತರ ಮೀನುಗಾರರಿಂದ ರಕ್ಷಿಸಲ್ಪಟ್ಟ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ನೀರಿಗೆ ಬಿದ್ದ ಸ್ಥಳದಿಂದ ಸುಮಾರು 10 ಕಿ.ಮೀ ದೂರದಲ್ಲಿ ಆಕೆ ಪತ್ತೆಯಾಗಿದ್ದಾಳೆ.
ಮಹಿಳೆ ನದಿಗೆ ಬಿದ್ದ ಮಾರನೇ ದಿನ ರಾಘೋಪುರ ಪಿಪಾ ಸೇತುವೆಯಿಂದ ಸುಮಾರು 10 ಕಿ.ಮೀ ದೂರದಲ್ಲಿ ಮೀನುಗಾರರು ಮೀನು ಹಿಡಿಯಲು ಸಜ್ಜಾಗುತ್ತಿರುವಾಗ, ಏನೋ ನದಿಯಲ್ಲಿ ತೇಲಿಕೊಂಡು ಬರುವುದು ಕಂಡುಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಮೀನುಗಾರರು, ತೇಲಿಬರುತ್ತಿದ್ದುದ್ದರ ಹತ್ತಿರ ಹೋಗಿದ್ದಾರೆ. ಆಗ ಅದು ಮಹಿಳೆಯ ದೇಹ ಎನ್ನುವುದು ತಿಳಿದುಬಂದಿದೆ. ತಕ್ಷಣ ದೇಹವನ್ನು ದಡಕ್ಕೆ ಎಳೆದುತರಲಾಗಿದೆ. ಬರೋಬ್ಬರಿ 12 ಗಂಟೆಗಳ ಕಾಲ ತಣ್ಣನೆ ನೀರಲಿದ್ದರೂ ಮಹಿಳೆಯಿನ್ನೂ ಉಸಿರಾಡುತ್ತಲೇ ಇದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್)