

ಚಂಡೀಗಢ: ಪ್ರವಾಹದ ಸಮಸ್ಯೆಯಿಂದ ಆಕ್ರೋಶಗೊಂಡ ಮಹಿಳೆಯೊಬ್ಬಳು ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬಂದಿದ್ದ ಜನನಾಯಕ್ ಜನತಾ ಪಾರ್ಟಿಯ ಶಾಸಕ ಈಶ್ವರ್ ಸಿಂಗ್ ಅವರ ಕಪಾಳಕ್ಕೆ ಬಾರಿಸಿರುವ ಘಟನೆ ಹರಿಯಾಣದ ಘುಲಾ ಎಂಬಲ್ಲಿ ಬುಧವಾರ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉಕ್ಕಿ ಹರಿಯುತ್ತಿರುವ ಘಾಗ್ಗರ್ ನದಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಶಾಸಕರು ವೀಕ್ಷಿಸಲು ಬಂದಿದ್ದ ಸಂದರ್ಭದಲ್ಲಿ ಅವರೊಂದಿಗೆ ವಾಗ್ವಾದಕ್ಕೆ ಇಳಿದ ಮಹಿಳೆ, ನೀನು ಈಗ ಬಂದ್ರಿ? ಎಂದು ಕಪಾಳಕ್ಕೆ ಬಾರಿಸಿದ ದೃಶ್ಯ ವಿಡಿಯೋದಲ್ಲಿದೆ.
ಸಣ್ಣ ಅಣೆಕಟ್ಟೊಂದು ಒಡೆದು ಪ್ರವಾಹ ಸ್ಥಿತಿ ಎದುರಾಗಿದೆ. ಅದನ್ನು ವೀಕ್ಷಿಸಲು ಶಾಸಕ ಈಶ್ವರ್ ಸಿಂಗ್ ಬಂದಿದ್ದರು. ಅಂದಹಾಗೆ ಜನನಾಯಕ್ ಜನತಾ ಪಾರ್ಟಿಯು ಆಡಳಿತರೂಢ ಬಿಜೆಪಿಯ ಮೈತ್ರಿ ಪಕ್ಷವಾಗಿದೆ.
ಸಣ್ಣ ಅಣ್ಣೆಕಟ್ಟು ಒಡೆಯಬಾರದೆಂದು ಮಹಿಳೆ ಭಾವಿಸಿದ್ದಳು. ಆದರೆ, ಇದೊಂದು ಪ್ರಾಕೃತಿಕ ವಿಕೋಪ ಎಂದು ವಿವರಿಸಿದೆ. ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದೆ. ಆದರೂ ಮಹಿಳೆ ನನ್ನ ಕಪಾಳಕ್ಕೆ ಬಾರಿಸಿದರು. ಆಕೆಯನ್ನು ನಾನು ಕ್ಷಮಿಸಿದ್ದೇನೆ. ನಾನು ಅವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಈಶ್ವರ್ ಸಿಂಗ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದಾಗಿ ಉಕ್ಕಿ ಹರಿಯುತ್ತಿರುವ ಘಗ್ಗರ್ ನದಿಯಿಂದ ಪಂಜಾಬ್ ಮತ್ತು ಹರಿಯಾಣದ ಹಲವಾರು ಹಳ್ಳಿಗಳು ಪ್ರವಾಹ ಸ್ಥಿತಿ ಎದುರಿಸುತ್ತಿದ್ದು, ಪರಿಹಾರ ಕ್ರಮಗಳು ನಡೆಯುತ್ತಿವೆ. (ಏಜೆನ್ಸೀಸ್)