

ಮುಂಬೈ: ತನ್ನ ಹುಟ್ಟುಹಬ್ಬ ಆಚರಿಸಲು ದುಬೈಗೆ ಕರೆದೊಯ್ಯಲಿಲ್ಲ ಅಂತ ತಾಳಿ ಕಟ್ಟಿದ ಗಂಡನನ್ನೇ ಮಹಿಳೆಯೊಬ್ಬಳು ಕೊಲೆ ಮಾಡಿರುವ ದುರಂತ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ನಿಖಿಲ್ ಖನ್ನಾ (36) ಕೊಲೆಯಾದ ದುರ್ದೈವಿ. 38 ವರ್ಷದ ರೇಣುಕಾ ಕೊಲೆ ಮಾಡಿದ ಆರೋಪಿ. ಕಳೆದ ಶುಕ್ರವಾರ ಪುಣೆಯ ವನವಾಡಿಯಲ್ಲಿರುವ ಪೋಶ್ ರೆಸಿಡೆನ್ಶಿಯಲ್ ಸೊಸೈಟಿಯ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಅವರ ಮೂಗಿನ ಮೇಲೆ ಬಲವಾಗಿ ಗುದ್ದಿದ್ದರಿಂದ ತೀವ್ರ ರಕ್ತಸ್ರಾವಗೊಂಡು ಮೃತಪಟ್ಟಿದ್ದಾರೆ.
ತನಿಖೆಯ ಪ್ರಕಾರ ಕಟ್ಟಡ ನಿರ್ಮಾಣದ ಉದ್ಯಮಿಯಾಗಿದ್ದ ನಿಖಿಲ್ ಮತ್ತು ರೇಣುಕಾ ಆರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತನ್ನ ಹುಟ್ಟುಹಬ್ಬದ ಆಚರಣೆಗೆಂದು ದುಬೈಗೆ ಕರೆದುಕೊಂಡು ಹೋಗಲಿಲ್ಲ ಎಂಬ ಕೋಪದ ಜತೆಗೆ ಕೆಲವು ಸಂಬಂಧಿಕರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವ ಆಸೆಗೆ ನಿಖಿಲ್ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಅಸಮಾಧಾನವೂ ಇತ್ತು. ಇದರೊಂದಿಗೆ ಮದುವೆ ವಾರ್ಷಿಕೋತ್ಸವ ಮತ್ತು ಇತರ ಸಂದರ್ಭಗಳಲ್ಲಿಯೂ ಕೂಡ ದುಬಾರಿ ಉಡುಗೊರೆಗಳನ್ನು ನಿರೀಕ್ಷಿಸಿದ್ದ ರೇಣಾಕಾಗೆ ಬರೀ ನಿರಾಸೆಯೇ ಎದುರಾಗುತ್ತಿತ್ತು. ಇಬ್ಬರ ನಡುವೆ ಹಲವು ಬಾರಿ ಜಗಳವೂ ನಡೆದಿದೆ. ಆದರೆ, ಶುಕ್ರವಾರ ಇಬ್ಬರ ಜಗಳ ತಾರಕ್ಕೇರಿ ತಾಳ್ಮೆ ಕಳೆದುಕೊಂಡ ರೇಣುಕಾ ಪತಿಯ ಮೂಗಿಗೆ ಬಲವಾಗಿ ಗುದ್ದಿದ್ದರಿಂದ ಹಲ್ಲುಗಳು ಮುರಿದು, ಮೂಗಿನಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ವನವಾಡಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಹಾಗೂ ಘಟನೆಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ತನಿಖೆ ಕೈಗೊಳ್ಳಲಾಗಿದೆ. ವನವಾಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ರೇಣುಕಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ರೇಣುಕಾ ಅವರನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)