More

    ಕಸಬ್​ನನ್ನು​ ಗುರುತಿಸಿದ ಅಪ್ರಾಪ್ತೆ ಈಗ 24ರ ಯುವತಿ! ದೇವಿಕಾಳ ಹೋರಾಟದ ಬದುಕೇ ಒಂದು ಸ್ಫೂರ್ತಿ

    ಮುಂಬೈ: ದೇಶದ ಮೇಲೆ ನಡೆದ ಅತಿ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾದ ಮುಂಬೈ ದಾಳಿ (26/11 ದಾಳಿ)ಗೆ ನಾಳೆ 15 ವರ್ಷ ತುಂಬಲಿದೆ. ನವೆಂಬರ್​ 26 ದೇಶದ ಇತಿಹಾಸದಲ್ಲೇ ಕರಾಳ ದಿನವಾಗಿ ಉಳಿದಿದೆ. ಅದಕ್ಕೆ ಕಾರಣ 2008ರ ನವೆಂಬರ್​ 26ರಂದು ಮುಂಬೈ ಮೇಲೆ ನಡೆದ ಅತಿ ಭೀಕರ ದಾಳಿ. ಆ ದಿನ ಜನನಿಬಿಡ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಭಯೋತ್ಪಾದಕ ಅಜ್ಮಲ್ ಕಸಬ್​ನಿಂದ ಗುಂಡೇಟು ತಿಂದ 24 ವರ್ಷದ ದೇವಿಕಾ ರೋಟವಾನ್, ನನಗೆ ಈ ದಿನವನ್ನು ನೆನಪು ಮಾಡಿಕೊಳ್ಳಲು ಕರಾಳ ವಾರ್ಷಿಕೋತ್ಸವದ ಅವಶ್ಯಕತೆಯೇ ಇಲ್ಲ ಎಂದಿದ್ದಾರೆ.

    ದಾಳಿ ನಡೆದಾಗ ದೇವಿಕಾಗೆ ಕೇವಲ 9 ವರ್ಷ. ಈ ಘಟನೆಗೆ ಸಾಕ್ಷಿಯಾದ ಅತಿ ಕಿರಿಯ ಸಂತ್ರಸ್ತೆ ಎನಿಸಿಕೊಂಡಿದ್ದಾರೆ. ದಾಳಿಯ ನೇತೃತ್ವದ ವಹಿಸಿದ್ದ ಮೋಸ್ಟ್​ ವಾಂಟೆಡ್​ ಉಗ್ರ ಅಜ್ಮಲ್​ ಕಸಬ್​ನನ್ನು ಗುರುತು ಹಿಡಿದಿದ್ದು ಇದೇ ದೇವಿಕಾ ಎಂಬುದು ಇತಿಹಾಸದ ಪುಟಗಳಲ್ಲಿ ಸೇರಿದೆ. ಇದೀಗ 15 ವರ್ಷಗಳ ಹಿಂದೆ ನಡೆದ ಘೋರ ದಾಳಿಯ ಭೀಕರತೆಯ ಬಗ್ಗೆ ದೇವಿಕಾ ಮಾಧ್ಯಮಗಳ ಮುಂದೆ ಮೆಲಕು ಹಾಕಿದ್ದಾರೆ.

    ಕೆಲಸಕ್ಕಾಗಿ ಹುಡುಕಾಟ
    ಅಂದಹಾಗೆ ದೇವಿಕಾ ಸದ್ಯ ಮುಂಬೈನ ಬಾಂದ್ರಾದ ಚೇತನಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಾರೆ. ಸಂಪಾದನೆ ಮಾಡಿ ಕುಟುಂಬಕ್ಕೆ ಆಧಾರವಾಗಲು ಕೆಲಸ ಹುಡುಕಲು ಆರಂಭಿಸಿದ್ದಾರೆ. ಆಕೆಯ ಮುಂದೆ ಹಲವು ಭರವಸೆಗಳಿದ್ದವು. ಆದರೆ ಅಂತಿಮವಾಗಿ ತನ್ನನ್ನು ತಾನೇ ನೋಡಿಕೊಳ್ಳಬೇಕಿದೆ ಎನ್ನುತ್ತಾರೆ ದೇವಿಕಾ.

    2008ರ ನವೆಂಬರ್ 26ರಂದು ದೇವಿಕಾ, ತನ್ನ ತಂದೆ ಮತ್ತು ಸಹೋದರನೊಂದಿಗೆ ರೈಲು ಹತ್ತಲು ಮುಂಬೈನ ಅತ್ಯಂತ ಜನನಿಬಿಡ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಆಕೆಯ ಬಲಗಾಲಿಗೆ ಗುಂಡು ಹಾರಿಸಲಾಯಿತು. ಆಗ ದೇವಿಕಾ ತುಂಬಾ ಚಿಕ್ಕವಳಾಗಿದ್ದರೂ, ಆ ಭಯಾನಕ ದಿನದ ಪ್ರತಿಯೊಂದು ಕ್ಷಣವನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಎತ್ತ ನೋಡಿದರು ಸುತ್ತಲೂ ಗುಂಡಿನ ಮೊರೆತವಿತ್ತು. ಜನರು ದಿಢೀರನೇ ನೆಲಕ್ಕೆ ಕುಸಿದು ಬೀಳುತ್ತಿದ್ದರು ಮತ್ತು ಇತರರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಓಡಾಡುತ್ತಿದ್ದರು ಹಾಗೂ ಸುತ್ತಲೂ ಬಿದ್ದಿದ್ದ ಅನೇಕ ದೇಹಗಳಿಂದ ರಕ್ತವು ಹರಿಯುತ್ತಿತ್ತು ಎಂದು ಭೀಕರತೆಯನ್ನು ದೇವಿಕಾ ವಿವರಿಸಿದ್ದಾರೆ.

    ನನ್ನ ಯಾತನೆ ಯಾರಿಗೂ ತಿಳಿದಿಲ್ಲ
    ದೇವಿಕಾ ಈಗಲೂ ಕೆಲವೊಮ್ಮೆ ತನ್ನ ಕಾಲಿನಲ್ಲಿ ಗುಂಡಿನ ನೋವನ್ನು ಅನುಭವಿಸುತ್ತಾರೆ. ಅದರಲ್ಲೂ ಕೆಲವೊಮ್ಮೆ ರಾತ್ರಿಯಲ್ಲಿ ಎಷ್ಟು ನೋವಿರುತ್ತದೆ ಅಂದರೆ, ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನನ್ನ ಸುತ್ತಲೂ ಏನಾಗುತ್ತಿದೆ ಮತ್ತು ಏಕೆ ನಡೆಯುತ್ತಿದೆ ಎಂಬ ಸುಳಿವು ಘಟನೆ ನಡೆದ ಸಂದರ್ಭದಲ್ಲಿ ನನಗೆ ಇರಲಿಲ್ಲ. ಕಾಲ ಕ್ರಮೇಣ ತಿಳಿದುಕೊಂಡಾಗ ಭಯೋತ್ಪಾದನೆಯನ್ನು ಕೊನೆಗೊಳಿಸಲು ಐಪಿಎಸ್ ಅಧಿಕಾರಿಯಾಗಲು ನಿರ್ಧರಿಸಿರುವುದಾಗಿ ದೇವಿಕಾ ಹೇಳುತ್ತಾರೆ. ಆದರೆ ಜೀವನ ನಾವು ಅಂದುಕೊಂಡತ್ತಲ್ಲ, ನನ್ನ ಕನಸನ್ನು ನನಸಾಗಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಸದ್ಯಕ್ಕೆ ನನ್ನ ಕುಟುಂಬವನ್ನು ಬೆಂಬಲಿಸಲು ನಾನು ಉದ್ಯೋಗವನ್ನು ಹುಡುಕುತ್ತಿದ್ದೇನೆ. ಏನೂ ಸಾಧಿಸದೇ ತುಂಬಾ ದೊಡ್ಡದಾಗಿ ಮಾತನಾಡುತ್ತಿದ್ದಾಳೆ ಎಂದು ಜನರು ನನ್ನತ್ತ ಬೊಟ್ಟು ಮಾಡಬಹುದು. ಆದರೆ, ಆ ಸಂದರ್ಭದಲ್ಲಿ ನಾನು ಎದುರಿಸಿದ ಹೋರಾಟದ ಬಗ್ಗೆ ಮತ್ತು ಇಷ್ಟು ವರ್ಷಗಳ ಕಾಲದ ಯಾತನೆ ಬಗ್ಗೆ ಯಾರೊಬ್ಬರಿಗೂ ತಿಳಿದಿಲ್ಲ. ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗಲು ಸಹ ಸ್ಥಳವಿಲ್ಲ ಎನ್ನುತ್ತಾರೆ ದೇವಿಕಾ.

    ಆಸ್ಪತ್ರೆಯಲ್ಲೇ ಹೆಚ್ಚು ಸಮಯ
    ದೀರ್ಘಕಾಲದ ಅನಾರೋಗ್ಯದಿಂದ 2006ರಲ್ಲಿ ದೇವಿಕಾ ತನ್ನ ತಾಯಿಯನ್ನು ಕಳೆದುಕೊಂಡರು. ಆಕೆಯ ತಂದೆ 26/11 ದಾಳಿಯ ಮೊದಲು ಡ್ರೈಫ್ರೂಟ್ಸ್ ಮಾರಾಟ ಮಾಡುತ್ತಿದ್ದರು. ಆದರೆ, ದಾಳಿ ಬಳಿಕ ದೇವಿಕಾಳ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿ ಸುತ್ತಾಟ ನಡೆಸಿದ್ದರಿಂದ ಅವರ ವ್ಯವಹಾರವು ಕೂಡ ನಿಂತುಹೋಯಿತು. ದೇವಿಕಾಗೆ ಇಬ್ಬರು ಹಿರಿಯ ಸಹೋದರರಿದ್ದಾರೆ. ಅದರಲ್ಲಿ ಒಬ್ಬರು ತನ್ನ ಕುಟುಂಬದೊಂದಿಗೆ ಪುಣೆಯಲ್ಲಿ ವಾಸಿಸುತ್ತಿದ್ದರೆ, ಇನ್ನೊಬ್ಬರು ಬೆನ್ನುಹುರಿಯಲ್ಲಿನ ಸೋಂಕಿನಿಂದ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಗುಂಡೇಟು ತಿಂದ ಬಳಿಕ ಮೂರು ವರ್ಷಗಳಲ್ಲಿ ಚೇತರಿಸಿಕೊಂಡ ದೇವಿಕಾ 2014ರಲ್ಲಿ ಮತ್ತೆ ಕ್ಷಯಾ ಕಾಯಿಲೆಯಿಂದ ಬಳಲಿದರು. ಈ ವೇಳೆಯೂ ಆಸ್ಪತ್ರೆಗೆ ಅಲೆದಾಡಬೇಕಾಯಿತು.

    ಜವಾಬ್ದಾರಿ ಹಂಚಿಕೊಳ್ಳಲು ಬಯಸುತ್ತೇನೆ
    11 ವರ್ಷದವಳಿದ್ದಾಗ ಭಯೋತ್ಪಾದಕನನ್ನು ಗುರುತಿಸಿದ ಮತ್ತು ಈಗಾಗಲೇ ಆರು ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವಿಗೆ ತನ್ನ ಜೀವನ ಸಾಮಾನ್ಯವಾಗಿರಲಿಲ್ಲ. ಆ ರಾತ್ರಿಯ ಕರಾಳತೆ, ಅವಳಿಗೆ ಚುಚ್ಚಿದ ಗುಂಡು, ಕಸಬ್‌ನನ್ನು ಆಕೆ ಹೇಗೆ ನೋಡಿದಳು ಮತ್ತು ನ್ಯಾಯಾಲಯದಲ್ಲಿ ಅವನನ್ನು ಗುರುತಿಸಿದ ದಿನ ಎಲ್ಲವನ್ನೂ ದೇವಿಕಾ ಸುಲಭವಾಗಿ ವಿವರಿಸುತ್ತಾರೆ. 11ನೇ ವಯಸ್ಸಿನಲ್ಲಿ ಔಪಚಾರಿಕ ಶಾಲಾ ಶಿಕ್ಷಣವನ್ನು ದೇವಿಕಾ ಪ್ರಾರಂಭಿಸಿದರು ಮತ್ತು ಅನಾರೋಗ್ಯ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಕಾರಣಗಳಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆ ಎದುರಿಸುವಷ್ಟರಲ್ಲಿ ಕೆಲವು ವರ್ಷಗಳ ಅಂತರವನ್ನು ಅನುಭವಿಸಿದರು. ರಾಜ್ಯ ಸರ್ಕಾರದಿಂದ ಒಂದು ಮನೆಗಾಗಿ ದೇವಿಕಾ ಕುಟುಂಬ ಈಗಲೂ ಕಾನೂನು ಹೋರಾಟ ಮಾಡುತ್ತಿದೆ. ಆದಾಗ್ಯೂ, ಕೋರ್ಟ್​ ಕೇಸ್​ ನಡುವೆ ದೇವಿಕಾ ಕುಟುಂಬವು ಬಾಂದ್ರಾದ ಕೊಳೆಗೇರಿಯ ಚಾಲ್‌ನಿಂದ ಸಾಂತಾಕ್ರೂಜ್‌ನ ವಸತಿ ಕಟ್ಟಡದಲ್ಲಿರುವ 1ಬಿಎಚ್​ಕೆ ಫ್ಲಾಟ್‌ಗೆ ಸ್ಥಳಾಂತರಗೊಂಡಿತು. ಈ ಫ್ಲಾಟ್​ ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದೇವೆ ಎಂದಿರುವ ದೇವಿಕಾ, ಅಂಗವಿಕಲನಾಗಿರುವ ನನ್ನ ಸಹೋದರ ಸ್ಟೇಷನರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬಕ್ಕಾಗಿ ಸಂಪಾದಿಸುತ್ತಾನೆ. ಇದರ ನಡುವೆ ನಮ್ಮ ತಂದೆಗೆ ಈಗ ವಯಸ್ಸಾಗಿರುವುದರಿಂದ ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿರುವುದರಿಂದ ನಾನು ಶೀಘ್ರದಲ್ಲೇ ಜವಾಬ್ದಾರಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ದೇವಿಕಾ ಹೇಳಿದ್ದಾರೆ.

    ತುಂಬಾನೇ ಕಷ್ಟಕರವಾಗಿತ್ತು
    ಕಸಬ್‌ನನ್ನು ಗಲ್ಲಿಗೇರಿಸಲು ಇಷ್ಟು ಸಮಯ ತೆಗೆದುಕೊಂಡಾಗ ಆರಂಭದಲ್ಲಿ ವ್ಯವಸ್ಥೆಯ ಮೇಲೆ ಹೇಗೆ ಕೋಪಗೊಂಡಿದ್ದೆ ಎಂದು ವಿವರಿಸಿದ ದೇವಿಕಾ, ಕಸಬ್​ ಜೈಲಿನಲ್ಲಿ ಚೆನ್ನಾಗಿ ಬದುಕುತ್ತಿದ್ದನು. ಆದರೆ, ಹೊರಗಡೆ ನಮ್ಮ ಜೀವನವು ನಿರಂತರ ಹೋರಾಟವಾಗಿತ್ತು. ಕಸಬ್‌ನನ್ನು ಗುರುತಿಸಿದ ಸಾಕ್ಷಿಗಳಲ್ಲಿ ನನ್ನ ತಂದೆ ಮತ್ತು ನಾನು ಇದ್ದುದರಿಂದ, ನಮ್ಮನ್ನು ಜನರು ವಿಭಿನ್ನವಾಗಿ ನೋಡುತ್ತಿದ್ದರು. ಅಲ್ಲದೆ, ನಾವು ಕೆಲವು ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ ಎಂದು ಜನರು ಭಾವಿಸುತ್ತಾರೆ. ಹೀಗಾಗಿ ನಮ್ಮೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿದ್ದರೆ ಅದು ತಮಗೂ ತೊಂದರೆಯಾಬಹುದು ಅಂತ ನಮ್ಮಿಂದ ಅಂತ ಕಾಯ್ದುಕೊಂಡರು. ಮನೆ, ಶಾಲೆ ಹುಡುಕುವುದು ಮತ್ತು ಸಂಬಂಧಿಕರ ಬೆಂಬಲವನ್ನು ನಿರೀಕ್ಷಿಸುವುದು ತುಂಬಾನೇ ಕಷ್ಟಕರವಾಗಿತ್ತು ಎನ್ನುತ್ತಾರೆ ದೇವಿಕಾ.

    ಯಾವುದೇ ಗ್ಯಾರಂಟಿ ಇಲ್ಲ
    ಉಗ್ರರ ಕುರಿತಾದ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಕಸಬ್​ ಜೀವಂತವಾಗಿ ಇರುವುದು ಎಷ್ಟು ಮುಖ್ಯ ಎಂದು ನನಗೀಗ ತಿಳಿದಿದೆ. ಕಸಬ್​ನನ್ನು ಗಲ್ಲಿಗೇರಿಸಿದ್ದರು ನನಗೆ ನೆಮ್ಮದಿ ಇಲ್ಲ. ಕಸಾಬ್ ಕೇವಲ ಒಬ್ಬ ವ್ಯಕ್ತಿ ಅಷ್ಟೇ. ಆತನನ್ನು ಕೆಲಸಕ್ಕೆ ಮಾತ್ರ ನಿಯೋಜಿಸಲಾಗಿದೆ. ಆದರೆ, ದಾಳಿಯ ಹಿಂದಿರುವ ಸೂತ್ರಧಾರರ ಬಗ್ಗೆ ನಾವೇನು ಮಾಡುತ್ತಿದ್ದೇವೆ? ಅಂತಹ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸದೇ ಹೊರತು, ಮತ್ತೊಂದು ಭಯೋತ್ಪಾದಕ ದಾಳಿ ನಡೆಯುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ದೇವಿಕಾ ಎಚ್ಚರಿಸಿದರು. (ಏಜೆನ್ಸೀಸ್​)

    ಪ್ರವಾಸಿ ಪ್ರಿಯರಿಗೆ ಗುಡ್​ ನ್ಯೂಸ್​: 2024ರಲ್ಲಿ ಇರಲಿವೆ 9 ಲಾಂಗ್​ ವೀಕೆಂಡ್ಸ್​!

    ಜಾತಿಗಣತಿ: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಮರು ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts