More

    ಕಾಂಪೌಂಡ್ ಕುಸಿದು ಕಾರ್ಮಿಕ ಸಾವು

    ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಕೆಪಿಟಿಸಿಎಲ್‌ನ 110 ಕೆವಿ ವಿದ್ಯುತ್ ಸ್ಟೇಷನ್‌ನ ಸುತ್ತಲೂ ಹಾಲೋ ಬ್ಲಾಕ್‌ಗಳಿಂದ ಕಟ್ಟಿದ್ದ ಕಾಂಪೌಂಡ್ ಸೋಮವಾರ ಸಂಜೆ ಕುಸಿದು ಬಿದ್ದು ವಿಜಯನಗರ ಜಿಲ್ಲೆ ಹರಪನಹಳ್ಳಿಯ ವೆಲ್ಡಿಂಗ್ ಕಾರ್ಮಿಕ ಬಸಲಿಂಗಯ್ಯ ಶಾಸಿ (40) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

    ಕಾಂಪೌಂಡ್ ಕೆಳಗೆ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ. ಕಾಂಪೌಂಡ್ ಗೋಡೆ ಮತ್ತು ಗೋಡೆಯ ಕೆಳಗಿದ್ದ ಅಪಾರ ಪ್ರಮಾಣದ ಮಣ್ಣು ಮೈಮೇಲೆ ಬಿದ್ದಿದೆ. ಸಹ ಕಾರ್ಮಿಕರು ಹಾಲೋ ಬ್ಲಾಕ್‌ಗಳನ್ನು ತೆಗೆದು ರಕ್ಷಿಸಲು ನಡೆಸಿದ ಎಲ್ಲ ಪ್ರಯತ್ನಗಳು ವಿಲಗೊಂಡವು.

    ಸ್ಟೇಷನ್ ಕಾಮಗಾರಿಯನ್ನು ಬೆಂಗಳೂರು ಮೂಲದ ಕುಮಾರ ಇಲೆಕ್ಟ್ರಿಕಲ್ ಕನ್ಸ್‌ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. ಹೊಸಪೇಟೆ ಭಾಗದ ಕಾರ್ಮಿಕರು ಕಟ್ಟಡ ಕಾರ್ಯದಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಕೆಪಿಟಿಸಿಎಲ್‌ನ ಕಾರ್ಯಪಾಲಕ ಇಂಜಿನಿಯರ್ ಸುನಂದಾ ಜಂಬಗಿ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.

    ಕಾಂಪೌಂಡ್ ಪಕ್ಕದಲ್ಲೇ ಅವೈಜ್ಞಾನಿಕವಾಗಿ ತಗ್ಗು ತೆಗೆದದ್ದು ಮತ್ತು ಕಾಂಪೌಂಡ್‌ಗೆ ಸರಿಯಾದ ಪ್ರಮಾಣದಲ್ಲಿ ಕ್ಯೂರಿಂಗ್ ಮಾಡದಿರುವುದು ಈ ಅವಘಡಕ್ಕೆ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಸ್ಥಳಕ್ಕೆ ಗುತ್ತಿಗೆದಾರ ಮತ್ತು ಇಂಜಿನಿಯರ್ ಬರುವವರೆಗೂ ಶವವನ್ನು ಹೊರತೆಗೆಯಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

    ಮೃತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಅವರು ಬರುವ ತನಕ ಶವ ಯಥಾಸ್ಥಿತಿಯಲ್ಲೇ ಇರಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು, ಶವವನ್ನು ಮಣ್ಣಿನಿಂದ ಹೊರತೆಗೆಯಲು ಮುಂದಾದ ಅಗ್ನಿಶಾಮಕ ದಳದವರಿಗೆ ತಡೆ ಒಡ್ಡಿದರು

    ರಾತ್ರಿ 7.30 ಗಂಟೆಯಾದರೂ ಶವವನ್ನು ಹೊರತೆಗೆದಿರಲಿಲ್ಲ. ಮುದ್ದೇಬಿಹಾಳ ಪೊಲೀಸ್ ಠಾಣೆ ಕ್ರೈಂ ಪಿಎಸ್‌ಐ ಎಸ್.ಎನ್.ನಾಯಕ, ಎಎಸ್‌ಐ ಕೆ.ಎಸ್.ಅಸ್ಕಿ ಪೊಲೀಸರೊಂದಿಗೆ ಧಾವಿಸಿ ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts