More

    ಕೇಂದ್ರದಿಂದ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯ ಸ್ಪಷ್ಟ: ಸಚಿವ ಕೃಷ್ಣಬೈರೇಗೌಡ ಆಕ್ರೋಶ

    ಬೆಂಗಳೂರು: ಬರ ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಕೇಳಿದ್ದಕ್ಕಿಂತ ಅತಿ ಕಡಿಮೆ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯ ಮಾಡಿರುವುದು ಸ್ಪಷ್ಟವೆಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ನಿಯಮಾವಳಿ ಪ್ರಕಾರವೇ ಕೇಂದ್ರ ಸರ್ಕಾರಕ್ಕೆ ಒಟ್ಟು 18,172 ಕೋಟಿ ರೂ.ಗಳ ಬರ ನೆರವು ಕೇಳಿದ್ದರೆ, ಅನಧಿಕೃತ ಮಾಹಿತಿ ಪ್ರಕಾರ 3,454 ಕೋಟಿ ರೂ ಬಿಡುಗಡೆಗೆ ಆದೇಶ ಹೊರಡಿಸಿದೆ. ಕರ್ನಾಟಕದ ಭವನದ ನಮ್ಮ ಸ್ಥಾನಿಕ ಆಯುಕ್ತರು ಸಂಪರ್ಕಿಸಿ ಈ ಕುರಿತು ಕೇಳಿದಾಗ ಕೇಂದ್ರ ಹಣಕಾಸು ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

    ಸದ್ಯ ರಜಾ ದಿನಗಳಿರುವ ಕಾರಣ ಆದೇಶ ಬರುವಲ್ಲಿ ತಡವಾಗಿರಬಹುದು. ರಾಜ್ಯ ಸರ್ಕಾರ ಅಧಿಕೃತ ಆದೇಶ,‌ ಹಣ ಬಿಡುಗಡೆಯಾದ ಒಂದು ವಾರ ಅಥವಾ 10 ದಿನಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಬೆಳೆ ನಷ್ಟ ಪರಿಹಾರ ಜಮಾ ಮಾಡಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.

    ಹೋರಾಟಕ್ಕೆ ಒಂದು ಹಂತದ ಜಯ

    ಕೇಂದ್ರದ ಅನ್ಯಾಯ, ತಾರತಮ್ಯ ಧೋರಣೆ, ನಿರ್ಲಕ್ಷ್ಯದ ವಿರುದ್ಧ ರಾಜ್ಯ ಸರ್ಕಾರ ನಡೆಸಿದ ಕಾನೂನು ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ.  ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಚರ್ಚೆಯಿದ್ದು, ಕೇಂದ್ರ ಪರ ವಕೀಲರೇ ನೀಡಲಿರುವ ಉತ್ತರ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸುತ್ತೇವೆ.

    ಕೇಂದ್ರ ಸರ್ಕಾರ ಒಂದೇ ಕಂತಿನಲ್ಲಿ ಬರ ಪರಿಹಾರ ಮೊತ್ತ ಸರಿ ಮಾಡುತ್ತದೋ ಅಥವಾ ಇನ್ನೊಂದು ಕಂತಿನಲ್ಲಿ ನೀಡುತ್ತದೆಯೋ ಗೊತ್ತಿಲ್ಲ. ಪರಿಹಾರ ಮೊತ್ತ ನಿಗದಿಯಲ್ಲಿ ಕೇಂದ್ರ ಸರ್ಕಾರಕ್ಕೆ ವಿವೇಚನಾಧಿಕಾರವಿದೆ. ಆದರೆ, ಪ್ರಕಟಿತ ಮೊತ್ತವು ಸಾಲದು, ಕೇಳಿದ್ದರಲ್ಲಿ ಶೇಕಡ 25ರಷ್ಟು ಹಣ ನೀಡಿದಂತಾಗಲಿದೆ. ಬೇರೆ ವಿಷಯಗಳಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ.  ನಾವು ಕೇಂದ್ರ ಸರ್ಕಾರಕ್ಕೆ ಸಲಾಂ ಹೊಡೆಯಲ್ಲ, ಗುಲಾಮಗುರಿಗೆ ಇರುವವರಲ್ಲ. ಭಿಕ್ಷಾಪಾತ್ರೆ ಹಿಡಿದು ನಿಂತಿಲ್ಲವೆಂದು ಕೃಷ್ಣಬೈರೇಗೌಡ ಖಡಕ್ ಆಗಿ ಹೇಳಿದರು.

    ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಇನ್ನೊಂದು ಕಂತಿನಲ್ಲಿ ಪರಿಹಾರ ನೀಡುತ್ತಾರೆಯೆ ? ಎಂಬುದನ್ನು ಕೇಳುತ್ತೇವೆ. ಈಗ ಘೋಷಿತ 3,454‌ ಕೋಟಿ ರೂ ಮಾತ್ರ ಕೊಡುತ್ತೇವೆ. ಇನ್ನೊಂದು ಕಂತಿನಲ್ಲಿ ನೀಡಲ್ಲವೆಂದು ಸ್ಪಷ್ಟಪಡಿಸಿದರೆ, ನಿಗದಿತ ಮೊತ್ತ ಬಿಡುಗಡೆಯಾದ ಬಳಿಕ ಅಧಿಕಾರಿಗಳು ಮತ್ತು ಕಾನೂನು ತಜ್ಞರ ತಂಡದ ಜತೆಗೆ ಚರ್ಚಿಸಿ, ಸುಪ್ರೀಂ ಕೋರ್ಟ್ ನಲ್ಲಿ‌ ಮತ್ತೆ ಪ್ರಶ್ನೆ ಮಾಡುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದರು.

    ಒಂದಂತೂ ನಿಜ, ನಾವು ಧೈರ್ಯ ಮಾಡಿ ಸುಪ್ರೀಂ ಕೋರ್ಟ್ ಕದ ತಟ್ಟದಿದ್ದರೆ ರಾಜ್ಯಕ್ಕೆ ಬರ ಪರಿಹಾರ ನೆರವು ಬರುತ್ತಲೇ ಇದ್ದಿಲ್ಲ. ಮನವಿ ಸಲ್ಲಿಸಿ, ಅಂತಿಮ ಘಟ್ಟದ ನಿರ್ಣಯವಾಗಿ ನಾಲ್ಕು ತಿಂಗಳು ಕಳೆದರೂ ತಟಸ್ಥವಾಗಿತ್ತು. ಬರ ಪರಿಹಾರ ಕೊಡುವ ಇಚ್ಛೆ, ಮನಸ್ಸು ಕೇಂದ್ರಕ್ಕೆ ಇದ್ದಿಲ್ಲವೆಂದು ಕೃಷ್ಣಬೈರೇಗೌಡ ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts