ಅಂತ್ಯಸಂಸ್ಕಾರಕ್ಕೆಂದು ತಯಾರಿ ನಡೆಸುತ್ತಿರುವಾಗ ಕಣ್ಣು ತೆರೆದ ಮಹಿಳೆ

Funeral
Published on

ನವದೆಹಲಿ: ಇನ್ನೇನು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿಕೊಳ್ಳಬೇಕು ಅಷ್ಟರೊಳಗೆ ಆ ವ್ಯಕ್ತಿಗೆ ಥಟ್ಟನೆ ಎಚ್ಚರವಾಗುವ ಅಥವಾ ಕಣ್ಣು ಮಿಟುಕಿಸುವ ಘಟನೆಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ ಅಲ್ಲವೇ, ಇದೀಗ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ ಅವರು ಬದುಕುಳಿದ ಘಟನೆ ಒಡಿಶಾದ ಬರ್ಹಮ್‌ಪುರದಲ್ಲಿ ನಡೆದಿದೆ.

ಫೆಬ್ರವರಿ 01ರಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಬುಜ್ಜಿ ಅಮ್ಮ (52) ಶೇ. 50ರಷ್ಟು ಸುಟ್ಟ ಗಾಯಗಳಿಂದ ಎಂಕೆಸಿಜಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ತೀವ್ರ ಸುಟ್ಟ ಗಾಯಗಳಾಗಿದ್ದರಿಂದ ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಆರ್ಥಿಕ ಪರಿಸ್ತಿತಿಯಿಂದಾಗಿ ಕುಟುಂಬಸ್ಥರು ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸಲು ಹಿಂಜರಿಯುತ್ತಿದ್ದರು.

ಫೆಬ್ರವರಿ 13ರಂದು ಆಕೆ ಉಸಿರಾಟವನ್ನು ನಿಲ್ಲಿಸಿದಾಳೆ ಎಂದು ಭಾವಿಸಿದ ಕುಟುಂಬಸ್ಥರು ಊರಿನವರಿಗೆ ವಿಚಾರವನ್ನು ಮುಟ್ಟಿಸಿ ಅಂತ್ಯಸಂಸ್ಕಾರಕ್ಕಾಗಿ ಸಕಲ ತಯಾರಿಯನ್ನು ಮಾಡಿಕೊಂಡಿದ್ದರು. ಆರ್ಥಿಕ ಮುಗ್ಗಟಿನಿಂದ ಬಳಲುತ್ತಿದ್ದ ಕುಟುಂಬಕ್ಕೆ ಗ್ರಾಮಸ್ಥರೆ ಸಹಾಯ ಮಾಡಿದ್ದು, ಅಂತಿಮ ವಿಧಿ ವಿಧಾನಕ್ಕಾಗಿ ಸಕಲ ತಯಾರಿ ಮಾಡಿಕೊಂಡಿದ್ದರು.

ಇನ್ನೇನು ಆಕೆಯ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕು ಎನ್ನುಷ್ಟರಲ್ಲೇ ಆಕೆ ಕಣ್ಣು ತೆರೆದು ಮಾತನಾಡಲು ಪ್ರಾರಂಭಿಸಿದ್ದು, ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಹಾಗೂ ಗ್ರಾಮದವರು ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಚಿಕಿತ್ಸೆಯನ್ನು ಮುಂದುವರೆಸಿದ್ದು, ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net