ಶ್ರೀಕೃಷ್ಣ ದೇವರನ್ನೇ ಮದುವೆಯಾದ ಎಲ್​ಎಲ್​ಬಿ ವಿದ್ಯಾರ್ಥಿನಿ!

Lord Krishna in Auraiya
Published on

ಉತ್ತರಪ್ರದೇಶ: 30 ವರ್ಷದ ಯುವತಿಯೊಬ್ಬಳು ತನ್ನ ಇಚ್ಛೆಯಂತೆ ಶ್ರೀಕೃಷ್ಣ ದೇವರನ್ನು ಮದುವೆಯಾಗಿದ್ದಾಳೆ. ಕಾನೂನು ಪದವಿ ವ್ಯಾಸಾಂಗ ಮಾಡುತ್ತಿರುವರ ರಕ್ಷಾ, ಶ್ರೀಕೃಷ್ಣ ದೇವರನ್ನು ಶ್ರದ್ಧೆಯಿಂದ ಪೂಜಿಸುತ್ತಿದ್ದಳು. ಹೀಗಾಗಿ ಕೃಷ್ಣನ ಮೇಲಿನ ಭಕ್ತಿ ಸದಾ ಕಾಲಕ್ಕೂ ಇರಬೇಕೆನ್ನುವ ಉದ್ಧೇಶದಿಂದ ಶ್ರೀಕೃಷ್ಣನನ್ನು ಮದುವೆಯಾಗಿದ್ದಾಳೆ. ಈ ಅಪರೂಪದ ಮದುವೆಗೆ ಉತ್ತರ ಪ್ರದೇಶದ ಔರ್ರೈಯಾ ಜಿಲ್ಲೆಯ ಜನರು ಸಾಕ್ಷಿಯಾಗಿದ್ದಾರೆ.

ಶ್ರೀಕೃಷ್ಣ ದೇವರನ್ನು ಮದುವೆಯಾಗಲು ನಿರ್ಧರಿಸಿದ ಬಗ್ಗೆ ರಕ್ಷಾ, ತನ್ನ ತಂದೆಯ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ತನ್ನ ಮಗಳ ನಿರ್ಧಾರವನ್ನು ಬೆಂಬಲಿಸಿ, ರಂಜಿತ್ ಸಿಂಗ್ ಸೋಲಂಕಿ ಮದುವೆ ಆಯೋಜನೆ ಮಾಡಿದ್ದಾರೆ. ಅದ್ಧೂರಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ, ರಕ್ಷಾಳ ಕುಟುಂಬಸ್ಥರು, ಆಪ್ತರು ಪಾಲ್ಗೊಂಡು ಆಶೀರ್ವದಿಸಿದ್ದಾರೆ.

ವಧು ರಕ್ಷಾ, ಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಳೆ. ಇದೇ ವೇಳೆ ಆಕೆಯ ಕುಟುಂಬಸ್ಥರು ಆರತಿ ಬೆಳಗಿದ್ದಾರೆ. ಬಳಿಕ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ವಿಶಿಷ್ಟ ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಬಳಿಕ ವಧು ರಕ್ಷಾ, ಕೃಷ್ಣನ ಮೂರ್ತಿಯೊಂದಿಗೆ ಸುಖಚೈನ್‌ಪುರ ಪ್ರದೇಶದಲ್ಲಿನ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ಅಲ್ಲಿಂದ ತನ್ನ ಪತಿ ಶ್ರೀಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡು ತವರಿಗೆ ಬಂದಿದ್ದಾರೆ.

ಸದ್ಯ ಈ ವಿಭಿನ್ನ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ರಕ್ಷಾ ಶ್ರೀಕೃಷ್ಣ ದೇವರನ್ನು ವರಿಸಿರುವ ಫೋಟೋಗಳು ವೈರಲ್ ಆಗುತ್ತಿವೆ. ರಕ್ಷಾಳ ದೃಢ ನಿರ್ಧಾರದ ಬಗ್ಗೆ ಜನರು ಮೆಚ್ಚುಗೆ ತಿಳಿಸಿ, ಆಶೀರ್ವದಿಸುತ್ತಿದ್ದಾರೆ.

ನನಗೆ ಬಾಲ್ಯದಿಂದಲೂ ಶ್ರೀಕೃಷ್ಣ ಮೇಲೆ ಅಪಾರವಾದ ಭಕ್ತಿ ಇದ್ದು, ಪೂಜಿಸಿಕೊಂಡು ಬರುತ್ತಿದ್ದೆ. ಅನೇಕ ದಿನಗಳಿಂದ ಶ್ರೀಕೃಷ್ಣನನ್ನು ವರಿಸುವ ಬಗ್ಗೆ ಕನಸು ಕಾಣುತ್ತಿದ್ದೆ. ಇದೀಗ ಶ್ರೀಕೃಷ್ಣ ದೇವರನ್ನೇ ವರಿಸಿದ್ದೇನೆ. ನನ್ನ ನಿರ್ಧಾರವನ್ನು ಎಲ್ಲರೂ ಬೆಂಬಲಿಸಿ, ಆಶೀರ್ವದಿಸಿರುವುದು ಸಂತಸ ತಂದಿದೆ ಎಂದು ವಧು ರಕ್ಷಾ ಹೇಳಿಕೊಂಡಿರುವುದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net