

ಬೆಂಗಳೂರು: ಶಾಪಿಂಗ್ಗೆ ಹೊರಟ ಮಹಿಳೆಯೊಬ್ಬರು ಕೆಎಸ್ಆರ್ಟಿಸಿ ಬಸ್ ಅಡಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಪ್ರಕರಣ ನಡೆದಿದೆ. ರಾಜಧಾನಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಬಳಿ ಈ ಅವಘಡ ನಡೆದಿದೆ.
ಹೆಬ್ಬಾಳ ಬಳಿಯ ಕೆಂಪಾಪುರ ನಿವಾಸಿ ಲತಾ ಎಂಬಾಕೆ ಮೃತಪಟ್ಟವರು. ಎರಡು ಬೈಕ್ಗಳಲ್ಲಿ ಕುಟುಂಬಸ್ಥರು ಬೈಕ್ನಲ್ಲಿ ಬಂದಿದ್ದು, ಒಂದು ಬೈಕ್ನಲ್ಲಿ ಪತಿ ಜತೆ ಲತಾ ಪ್ರಯಾಣಿಸುತ್ತಿದ್ದರು. ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆಯಿಂದ ಇಳಿಯುವ ವೇಳೆ ವೇಗವಾಗಿ ಬಲಕ್ಕೆ ಬಂದಿರುವ ಬಸ್ನ ಹಿಂಭಾಗ ದ್ವಿಚಕ್ರ ವಾಹನಕ್ಕೆ ತಾಗಿದ್ದು, ಇಬ್ಬರೂ ಬಿದ್ದಿದ್ದರು. ಆಗ ಲತಾ ಮೇಲೆ ಬಸ್ ಸಾಗಿ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನೊಂದು ದ್ವಿಚಕ್ರ ವಾಹನದಲ್ಲಿ ಪುತ್ರಿ ಪ್ರಯಾಣಿಸುತ್ತಿದ್ದಳು. ಪತಿ ಹಾಗೂ ಪುತ್ರಿಯ ಎದುರೇ ಲತಾ ಸಾವಿಗೀಡಾದರು.
ಚಿಕ್ಕಬಳ್ಳಾಪುರದ ಚಿಂತಾಮಣಿ ಡಿಪೋಗೆ ಸೇರಿದ ಈ ಬಸ್, ಬೆಂಗಳೂರಿನ ಚಿಂತಾಮಣಿ ಕಡೆಗೆ ಸಾಗುತ್ತಿತ್ತು. ಪ್ರಕರಣ ಸಂಬಂಧ ಚಾಲಕ-ನಿರ್ವಾಹಕ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.