

ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಎಂಟು ತಿಂಗಳ ಮಗವಿನೊಂದಿಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಆರತಿ (22) ಮೃತ ದುರ್ದೈವಿ. ಕಟ್ಟಡದ ಎರಡನೇ ಅಂತಸ್ತಿನಿಂದ ಜಿಗಿದು ಒದ್ದಾಡುತ್ತಿದ್ದ ಆರತಿ ಮತ್ತು ಮಗುವನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆರತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆದರೆ, ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ ಬಿಹಾರ ಮೂಲದ ಬಿಮಲ್ ಕುಮಾರ್ ಎಂಬಾತ ಕೆಲವು ವರ್ಷಗಳ ಹಿಂದೆ ತನ್ನ ಪತ್ನಿ ಆರತಿ ಜತೆ ಹೈದರಾಬಾದ್ಗೆ ವಲಸೆ ಬಂದಿದ್ದ. ದಂಪತಿ ಆಗಾಗ ಜಗಳವಾಡುತ್ತಿದ್ದರು. ಅದೇ ರೀತಿ ಸೋಮವಾರ ರಾತ್ರಿ ಇಬ್ಬರ ನಡುವೆ ತೀವ್ರ ವಾಗ್ವಾದ ಜರುಗಿತ್ತು. ಜಗಳ ವಿಕೋಪಕ್ಕೆ ತಿರುಗಿ, ಅದರಿಂದ ಮನನೊಂದ ಆರತಿ ತನ್ನ ಮಗುವಿನ ಜತೆ ಕಟ್ಟದಿಂದ ಜಿಗಿದಳು.
ಆರತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಏನು ಅರಿಯದ ಕಂದಮ್ಮ ಗಂಭೀರ ಗಾಯಗೊಂಡು ಅದೃಷ್ಟವಶಾತ್ ಬದುಕುಳಿದಿದೆ. ಸದ್ಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ.
ಈ ಸಂಬಂಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್)