

ತಡೆಪಲ್ಲಿ: ಭಾವನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ಸೋಮವಾರ ನಡೆದಿದೆ.
ಗೀತಾ ಸುರೇಖಾ ಮೃತ ದುರ್ದೈವಿ. ಪಶ್ಚಿಮ ಗೋದಾವರಿ ಜಿಲ್ಲೆಯ ಮುಘಳ್ತೂರ್ ವಲಯದ ಪೆರುಪಾಳ್ಯಂ ಮೂಲದ ನಿವಾಸಿಯಾದ ಸುರೇಖಾ 12 ವರ್ಷಗಳ ಹಿಂದೆ ತಡೆಪಲ್ಲಿ ವಲಯದ ಉಂದಾವಳ್ಳಿ ಗ್ರಾಮದ ಜೊನ್ನಾ ಆದಿಶೇಷು ಎಂಬುವರ ಕಿರಿಯ ಮಗ ಶ್ರೀನಿವಾಸ್ ರಾವ್ನನ್ನು ಮದುವೆಯಾಗಿದ್ದರು. ಇಬ್ಬರ ವೈವಾಹಿಕ ಜೀವ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ.
ಶ್ರೀನಿವಾಸ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶ್ರೀನಿವಾಸ್ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡ ಸಹೋದರ ಶಿವಶಂಕರ್, ಸುರೇಖಾ ಮೇಲೆ ತನ್ನ ವಕ್ರದೃಷ್ಟಿ ಬೀರಿದ್ದ. ತನ್ನ ಆಸೆಯನ್ನು ಈಡೇರಿಸುವಂತೆ ಆಕೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದ ಸುರೇಖಾ ಜನವರಿ 15ರಂದು ವಿಷ ಸೇವನೆ ಮಾಡಿದ್ದಳು. ಅದೇ ದಿನ ಪಕ್ಕದ ವಿಜಯವಾಡದಲ್ಲಿ ನೆಲೆಸಿರುವ ಸುರೇಖಾಳ ಸಹೋದರ ಆಕೆ ಅನೇಕ ಬಾರಿ ಕರೆ ಮಾಡಿದ್ದರು. ಆದರೆ, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ರಾಮಕೃಷ್ಣ ಅದೇ ದಿನ ಸಂಜೆ 4 ಗಂಟೆ ಸುಮಾರಿಗೆ ಸುರೇಖಾ ಮನೆಗೆ ತೆರಳಿ ನೋಡುವಷ್ಟರಲ್ಲಿ ವಿಷ ಸೇವನೆ ಮಾಡಿ ಸುರೇಖಾ ಪ್ರಜ್ಞೆ ಕಳೆದುಕೊಂಡಿದ್ದಳು.
ಇತ್ತ ಮಕ್ಕಳನ್ನು ಸಹ ಶಿವಶಂಕರ್ ಬೆದರಿಸಿದ್ದ. ಅಮ್ಮನ ಸ್ಥಿತಿ ಕಂಡು ಕಣ್ಣೀರಿಡುತ್ತಿದ್ದ ಮಕ್ಕಳ ರಾಮಕೃಷ್ಣ ಮುಂದೆ ಏನು ನಡೆಯಿತು ಎಂಬುದನ್ನು ವಿವರಿಸಿದರು. ಇದಾದ ಬೆನ್ನಲ್ಲೇ ಸುರೇಖಾಳನ್ನು ವಿಜಯವಾಡದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸುರೇಖಾ ಸಾವಿಗೀಡಾಗಿದ್ದಾರೆ. ಆಕೆಯ ಸಾವಿಗೆ ಭಾವ ಶಿವಶಂಕರ್ ಮತ್ತು ತಂದೆ ಆದಿಶೇಷಲು ಕಾರಣ ಎಂದು ಆರೋಪಿಸಿರುವ ಸುರೇಖಾ ಸಂಬಂಧಿಕರು ಪ್ರಕರಣ ದಾಖಲಿಸಿಕೊಳ್ಳಲು ಒತ್ತಾಯಿಸಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೂ ಸಹ ಪಡೆದಿದ್ದಾರೆ. ಆದರೆ, ತಾಯಿಯನ್ನು ಕಳೆದುಕೊಂಡ ಮಕ್ಕಳಿಬ್ಬರು ತಬ್ಬಲಿಗಳಾಗಿದ್ದಾರೆ. (ಏಜೆನ್ಸೀಸ್)