ವಿವಾದದಿಂದ 2 ಚಿತ್ರಗಳು ಬ್ಯಾಕ್ ಟು ಬ್ಯಾಕ್​ ಸೋಲು! ಕಡೆಗೂ ಕಂಗಾಲಾಗಿದ್ದ ನಟನಿಗೆ ಸಿಕ್ತು ಗೆಲುವಿನ ಭರವಸೆ

ವಿಜಯವಾಣಿ-2024-08-20T134735.008
Published on

ಆಂಧ್ರಪ್ರದೇಶ: ಕಳೆದ ಒಂದು ತಿಂಗಳಿಂದ ಟಾಲಿವುಡ್​ ಚಿತ್ರರಂಗದಲ್ಲಿ ಹರಿದಾಡುತ್ತಿರುವ ದೊಡ್ಡ ವಿವಾದವೊಂದು ಇದೀಗ ದಿನದಿಂದ ದಿನಕ್ಕೆ ಹಲವು ಸ್ವರೂಪ ಪಡೆಯುತ್ತಿದೆ. ಲವ್​ ತ್ರಿಕೋನ ಆರೋಪದಡಿ ಸಿಲುಕಿದ ತೆಲುಗು ಯುವ ನಟ ರಾಜ್ ತರುಣ್, ಪ್ರೇಯಸಿ ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ತನ್ನ ವಿರುದ್ಧ ನೀಡಿದ ವಂಚನೆ ದೂರಿನಡಿ ಭಾರೀ ಅವಮಾನ, ಸೋಲುಗಳನ್ನು ಅನುಭವಿಸಿದರು. ಸದ್ಯ ವ್ಯಾಪಕ ಟೀಕೆ, ಟ್ರೋಲ್​ಗಳಿಗೆ ಆಹಾರವಾಗಿರುವ ರಾಜ್​, ವಿವಾದಕ್ಕೆ ಸಿಲುಕುವ ಮುನ್ನ ಎರಡು ಬಿಗ್​ ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಂಡಿದ್ದರು. ಈ ಚಿತ್ರಗಳ ಮೂಲಕ ಒಳ್ಳೆಯ ಸಕ್ಸಸ್​ ನೋಡೋಣ ಎಂದು ಅಪಾರ ಕನಸು ಹೊತ್ತಿದ್ದ ನಟನಿಗೆ ಆಗಿದ್ದು ಭಾರೀ ಮುಖಭಂಗ. ಕಾರಣ, ಈ 2 ಸಿನಿಮಾಗಳು ಕಾಂಟ್ರೋವರ್ಸಿ ಸಮಯದಲ್ಲಿಯೇ ತೆರೆಕಂಡು, ಚಿತ್ರಮಂದಿರದಿಂದ ಕೆಲವೇ ದಿನಗಳಲ್ಲಿ ಕಿಕ್ ಔಟ್ ಆಯಿತು. ಸರಣಿ ಸೋಲುಗಳಿಂದ ಮತ್ತು ಆರೋಪಗಳಿಂದ ಕಂಗಾಲಾಗಿದ್ದ ನಟನಿಗೆ ಇದೀಗ ಗೆಲುವಿನ ಭರವಸೆ ಚಿಗುರೊಡೆದಿದೆ.

'ಪುರುಷೋತ್ತಮುಡು' ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದೇ ಆದರೂ ಚಿತ್ರರಸಿಕರಿಂದ ನಿರೀಕ್ಷಿಸಿದ ಪ್ರತಿಕ್ರಿಯೆಗಳನ್ನು ಪಡೆಯಲಿಲ್ಲ. ಬದಲಿಗೆ ನಟನ ವಿರುದ್ಧ ಹಿಗ್ಗಾಮುಗ್ಗಾ ಟ್ರೋಲ್​, ಮೀಮ್​ಗಳು ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿತ್ತು. ನಟಿ ಲಾವಣ್ಯಗೆ ಅನ್ಯಾಯ ಮಾಡಿರುವ ಆರೋಪದಡಿ ಸಿಲುಕಿರುವ ರಾಜ್​ ತರುಣ್​ರ ವಿವಾದವನ್ನೇ ಅಸ್ತ್ರವನ್ನಾಗಿಸಿಕೊಂಡ ಚಿತ್ರತಂಡ ಅದೇ ಸಮಯಕ್ಕೆ ಆತ ನಟಿಸಿದ್ದ ಎರಡು ಚಿತ್ರವನ್ನು ದಿಢೀರ್​ ತೆರೆಗೆ ತಂದಿತು. ಕಾಂಟ್ರೋವರ್ಸಿ ಅಲೆಯಲ್ಲಿ ಒದ್ದಾಡುತ್ತಿದ್ದ ರಾಜ್​ ತರುಣ್​ಗೆ ಈ ಸಿನಿಮಾಗಳು ಗೆಲುವು ತಂದುಕೊಡಲಿದೆ, ಕೊಂಚ ಮಟ್ಟಿಗಾದರೂ ರಿಲೀಫ್ ಕೊಡಲಿದೆ ಎಂದೇ ಚಿತ್ರರಂಗದವರು ನಿರೀಕ್ಷಿಸಿದ್ದರು. ಆದ್ರೆ, ಅದೆಲ್ಲವೂ ಚಿತ್ರದ ಸೋಲಿನ ಮೂಲಕ ತಲೆಕೆಳಗಾಯಿತು.

ಸದ್ಯ ಇತ್ತ ತನ್ನ ಮೇಲಿರುವ ವಂಚನೆ ಆರೋಪದಿಂದ ಮುಕ್ತಿ ಪಡೆಯದ ರಾಜ್​ ತರುಣ್​, ಅತ್ತ ಎರಡು ಸಿನಿಮಾಗಳ ಹೀನಾಯ ಸೋಲಿನಿಂದಲೂ ಭಾರೀ ಹತಾಶೆಗೆ ಒಳಗಾಗಿದ್ದಾರೆ. “ಪುರುಷೋತ್ತಮುಡು” ಮತ್ತು “ತಿರಂಭದ್ರಾಸಾಮಿ” ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡದೆ, ವ್ಯಾಪಕ ಟೀಕಗಯಿಂದಲೇ ಥಿಯೇಟರ್​ಗಳಿಂದ ಹೊರಬಂದಿತು. ಆದ್ರೆ, ಇದೀಗ ರಾಜ್ ತರುಣ್ ಅಭಿನಯದ ಮತ್ತೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ನಿನ್ನೆಯಷ್ಟೇ ಅದರ ಟ್ರೇಲರ್​ ಬಿಡುಗಡೆಗೊಂಡಿದೆ.

ಸದ್ಯ ನೋಡುಗರನ್ನು ನಗೆಗಡಲಲ್ಲಿ ತೇಲಿಸಿರುವ 'ಭಲೇ ಉನ್ಮಾದೆ' ಚಿತ್ರದ ಟ್ರೇಲರ್​, ಸಿಕ್ಕಾಪಟ್ಟೆ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿಯೇ ಇಷ್ಟು ನಗಿಸುತ್ತಿದೆ ಎಂದರೆ ಸಿನಿಮಾ ಪೂರ ಮಜಾ ತುಂಬಿದೆ ಎಂದು ಸಿನಿಪ್ರಿಯರು ಊಹಿಸಿದ್ದಾರೆ. ಈ ರೀತಿ ನೋಡುವುದಾದರೆ ಖಂಡಿತ ಮೂರನೇ ಚಿತ್ರ ನಟನಿಗೆ ಗೆಲುವು ತಂದುಕೊಡುವುದು ಬಹುತೇಕ ಖಚಿತ ಎಂಬ ಭರವಸೆ ಇದೀಗ ಮೂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net