

ನವದೆಹಲಿ: ಇಡೀ ದೇಶದಲ್ಲಿ ಆಕ್ರೋಶ ಭುಗಿಲೇಳಲು ಕಾರಣವಾಗಿರುವ ಕೋಲ್ಕತ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ಮಂಗಳವಾರ (ಆ.20) ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪರಿಸ್ಥಿತಿಯ ಬದಲಾವಣೆಗೆ ದೇಶವು ಮತ್ತೊಂದು ಅತ್ಯಾಚಾರವನ್ನು ನಿರೀಕ್ಷಿಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ನಡೆದುಕೊಂಡ ರೀತಿ ಹಾಗೂ ಘಟನೆ ನಡೆದ ಕೋಲ್ಕತ್ತದ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.
ಈ ಘಟನೆಯನ್ನು ಇಡೀ ವ್ಯವಸ್ಥೆಯ ವೈಫಲ್ಯ ಎಂದು ಉನ್ನತ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದೇಶದಲ್ಲಿ ವೈದ್ಯಕೀಯ ವೃತ್ತಿಗಳು ಹಿಂಸೆಗೆ ಗುರಿಯಾಗುತ್ತಿವೆ. ಈ ಸಮಾಜದಲ್ಲಿ ಬೇರೂರಿರುವ ಪಿತೃಪ್ರಭುತ್ವದ ಪಕ್ಷಪಾತದಿಂದಾಗಿ, ಮಹಿಳಾ ವೈದ್ಯರೇ ಹೆಚ್ಚು ಹಿಂಸೆಗೆ ಗುರಿಯಾಗುತ್ತಿದ್ದಾರೆ. ಹೆಚ್ಚು ಹೆಚ್ಚು ಮಹಿಳೆಯರು ಉದ್ಯೋಗಗಳಿಗೆ ಸೇರ್ಪಡೆಗೊಳ್ಳುತ್ತಿದ್ದಂತೆ, ಈ ನೆಲದ ಮೇಲಿನ ಪರಿಸ್ಥಿತಿ ಬದಲಾಗಲು ರಾಷ್ಟ್ರವು ಮತ್ತೊಂದು ಅತ್ಯಾಚಾರಕ್ಕಾಗಿ ಕಾಯುವುದನ್ನು ನಿರೀಕ್ಷೆ ಮಾಡುವುದಿಲ್ಲ ಎಂದು ಸಿಜೆಐ ಚಂದ್ರಚೂಡ್ ಬೇಸರ ಹೊರಹಾಕಿದರು.
ವಿಚಾರಣೆಯ ಸಂದರ್ಭದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಆಸ್ಪತ್ರೆಯ ಆಡಳಿತ ಮತ್ತು ಸ್ಥಳೀಯ ಪೊಲೀಸರ ಕ್ರಮಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದರು. ಶವವನ್ನು ಅಂತ್ಯಸಂಸ್ಕಾರಕ್ಕೆ ಹಸ್ತಾಂತರಿಸಿದ ಮೂರು ಗಂಟೆಗಳ ನಂತರ ಏಕೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗಂಭೀರ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಕೇಳಿತು.
ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲರು ಏನು ಮಾಡುತ್ತಿದ್ದರು? ಎಫ್‌ಐಆರ್ ದಾಖಲಿಸಿಲ್ಲ, ಶವವನ್ನು ಪಾಲಕರಿಗೆ ತಡವಾಗಿ ಹಸ್ತಾಂತರಿಸಲಾಗಿದೆ. ಪೊಲೀಸರು ಏನು ಮಾಡುತ್ತಿದ್ದರು? ಆಸ್ಪತ್ರೆಯಲ್ಲೇ ಇಷ್ಟೊಂದು ಗಂಭೀರ ಅಪರಾಧ ನಡೆದಿದ್ದರೂ ಅವರೆಲ್ಲ ಏನು ಮಾಡುತ್ತಿದ್ದ? ದುಷ್ಕರ್ಮಿಗಳು ಆಸ್ಪತ್ರೆಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆಯೇ? ಎಂದು ಸಿಜೆಐ ಚಂದ್ರಚೂಡ್ ಪ್ರಶ್ನೆಗಳ ಸುರಿಮಳೆಗೈದರು.
ಇನ್ನು ಈ ಘಟನೆ ನಡೆದ ಎರಡು ದಿನಗಳ ನಂತರ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದ ಸಂದೀಪ್ ಘೋಷ್ ಅವರನ್ನು ಸಿಬಿಐ ಪರಿಶೀಲನೆಗೆ ಒಳಪಡಿಸಿದೆ.
ಏನಿದು ಪ್ರಕರಣ?
ವಿರಾಮವಿಲ್ಲದೆ ಸುಮಾರು 36 ಗಂಟೆಗಳ ಕಾಲ ವಿಸ್ತರಿಸಿದ ಶಿಫ್ಟ್ ಮತ್ತು ಅಧ್ಯಯನದಿಂದ ಬಳಲಿದ ಬಳಿಕ ಆಗಸ್ಟ್ 9ರಂದು ಆಸ್ಪತ್ರೆಯ ಸೆಮಿನಾರ್ ರೂಮ್ನಲ್ಲಿನ ವೇದಿಕೆಯ ಮೇಲೆ ಸಂತ್ರಸ್ತೆ ಮಲಗಿದ್ದಳು. ಈ ವೇಳೆ ಆಕೆಯ ಮೇಲೆ ಓರ್ವ ಅಥವಾ ಸಾಮೂಹಿಕವಾಗಿ (ಇನ್ನೂ ತನಿಖೆ ನಡೆಯುತ್ತಿದೆ) ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಲೈಂಗಿಕ ದೌರ್ಜನ್ಯ ಬಳಿಕ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮರುದಿನ ಬೆಳಿಗ್ಗೆ ಸೆಮಿನಾರ್ ಹಾಲ್ಗೆ ಬಂದ ಇಂಟರ್ನ್‌ಗಳು ಮತ್ತು ಸಹ ಸ್ನಾತಕೋತ್ತರ ಟ್ರೈನಿ ವೈದ್ಯರು ಆಕೆಯ ದೇಹವನ್ನು ಕಂಡಾಗ ಈ ಪ್ರಕರಣ ಬೆಳಕಿಗೆ ಬಂದಿತು. ಸಂತ್ರಸ್ತೆಯ ಮೃತದೇಹದ ಪಕ್ಕದಲ್ಲೇ ಲ್ಯಾಪ್‌ಟಾಪ್, ನೋಟ್‌ಬುಕ್ ಮತ್ತು ಸೆಲ್‌ಫೋನ್ ಹಾಗೇ ಇತ್ತು.
ಓರ್ವನ ಬಂಧನ
ಸದ್ಯ ಈ ಪ್ರಕರಣದಲ್ಲಿ ಸಂಜೋಯ್ ರಾಯ್ ಎಂಬಾತನನ್ನು ಆಗಸ್ಟ್ 10 ರಂದು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವರದಿಗಳ ಪ್ರಕಾರ ಆರೋಪಿ 2019ರಿಂದ ಕೋಲ್ಕತ್ತ ಪೊಲೀಸರ ವಿಪತ್ತು ನಿರ್ವಹಣಾ ಗುಂಪಿನೊಂದಿಗೆ ನಾಗರಿಕ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದನು. ನಂತರ, ಆತನನ್ನು ಪೊಲೀಸ್ ವೆಲ್ಫೇರ್ ಸೆಲ್ಗೆ ವರ್ಗಾಯಿಸಲಾಯಿತು ಮತ್ತು ಆಸ್ಪತ್ರೆಯಲ್ಲಿನ ಪೊಲೀಸ್ ಔಟ್‌ಪೋಸ್ಟ್‌ಗೆ ನಿಯೋಜಿಸಲಾಯಿಗಿತ್ತು. ಈ ರಾಯ್, ಆಗಾಗ ಕೋಲ್ಕತ್ತ ಪೊಲೀಸ್ ಟೀ ಶರ್ಟ್ ಧರಿಸಿ ಅಧಿಕಾರಿಯಂತೆ ನಟಿಸುತ್ತಿದ್ದನು ಮತ್ತು ಬ್ಯಾರಕ್‌ಗಳಲ್ಲಿ ಉಳಿಯಲು ತಮ್ಮ ಸಂಪರ್ಕಗಳನ್ನು ಬಳಸುತ್ತಿದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ. ಆಸ್ಪತ್ರೆಯಲ್ಲೇ ಈತ ದಂಧೆ ನಡೆಸುತ್ತಿದ್ದ. ರೋಗಿಗಳ ಸಂಬಂಧಿಕರಿಗೆ ಹಾಸಿಗೆ ಕೊಡಿಸುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಹೆಚ್ಚಿನ ತನಿಖೆ ನಡೆದಾಗ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಅರೋಪಿ ರಾಯ್, ಮೊಬೈಲ್ ಫೋನ್‌ನಲ್ಲಿ ಹಲವಾರು ಹಿಂಸಾತ್ಮಕ ಮತ್ತು ಅಶ್ಲೀಲ ಫೋಟೋ ಮತ್ತು ವಿಡಿಯೋಗಳಿವೆ. ಈಗಾಗಲೇ ಆತ ಹಲವು ಬಾರಿ ಮದುವೆ ಆಗಿ ವಂಚನೆ ಮಾಡಿರುವ ಆರೋಪವೂ ಇದೆ.
ಭಾರಿ ಪ್ರತಿಭಟನೆ
ಈ ಭಯಾನಕ ಅಪರಾಧವು ದೇಶದೆಲ್ಲಡೆ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಪಶ್ಚಿಮ ಬಂಗಾಳ ಮತ್ತು ಭಾರತದ ಇತರ ಭಾಗಗಳಲ್ಲಿ ವೈದ್ಯರು ಮತ್ತು ನರ್ಸ್ಗಳು ಭಾರಿ ಮುಷ್ಕರಗಳು ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರನ್ನು ಸಿಬಿಐನಿಂದ ವಿಚಾರಣೆಗೆ ಒಳಪಡಿಸಲಾಗಿದೆ.
ಈ ಘಟನೆಗೆ ಪ್ರತಿಕ್ರಿಯೆಯಾಗಿ, ಪಶ್ಚಿಮ ಬಂಗಾಳ ಸರ್ಕಾರವು ಕೆಲಸದ ಸ್ಥಳಗಳಲ್ಲಿ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಘೋಷಿಸಿದೆ. ಈ ಕ್ರಮಗಳಲ್ಲಿ ಮಹಿಳೆಯರಿಗೆ ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಗೊತ್ತುಪಡಿಸಿದ ವಿಶ್ರಾಂತಿ ಕೊಠಡಿಗಳು ಮತ್ತು ಸಿಸಿಟಿವಿ ಮಾನಿಟರ್ ಒಳಗೊಂಡ ಸುರಕ್ಷಿತ ವಲಯಗಳ ಸ್ಥಾಪನೆಯನ್ನು ಒಳಗೊಂಡಿವೆ. (ಏಜೆನ್ಸೀಸ್)