

ಮಂಗಳೂರು: ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ತೀವ್ರ ಕಿಡಿಕಾರಿದ್ದರು. ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟುಹಿಡಿದ ಬಿಜೆಪಿ ವಿರುದ್ಧ ಇದೀಗ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಎಂಎಲ್ಸಿ ಬಿ.ಕೆ. ಹರಿಪ್ರಸಾದ್, ಇವರದ್ದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಎಂದರು.
"ರಾಜ್ಯಪಾಲರು ರಾಜ ಭವನ ದುರುಪಯೋಗ ಮಾಡ್ತಿದಾರೆ. ಸಂವಿಧಾನದ ಚೌಕಟ್ಟು ಬಿಟ್ಟು ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡಲು ಸಾಧ್ಯವಿಲ್ಲ. ರಾಜ್ಯಪಾಲರು ಅವರ ಪಕ್ಷದ ಅಧ್ಯಕ್ಷರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ಮೂಲಕ ಸರ್ಕಾರ ಕೆಡವುತ್ತಿತ್ತು. ಆದರೆ, ಈಗ ವಾಮಮಾರ್ಗದ ಮುಖೇನ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ" ಎಂದು ಹೇಳಿದರು.
"ಸದ್ಯ ಹೈಕೋರ್ಟ್ ರಿಲೀಫ್ ಕೊಟ್ಟಿದೆ, ನ್ಯಾಯಾಂಗ ಹೋರಾಟ ನಡೀತಿದೆ. ಯಡಿಯೂರಪ್ಪ ಪ್ರಕರಣ 20 ಕೋಟಿ ಚೆಕ್ ಮೂಲಕ ಲಂಚ ಪಡೆದಿರೋದು, ಗಡೀಪಾರಾಗಿದ್ದ ಅಮಿತ್ ಶಾ ಮಂತ್ರಿಯಾಗಿದ್ದು ಹೀಗೆ ಬಿಜೆಪಿ ನಾಯಕರ ಮೇಲೂ ಗಂಭೀರ ಆರೋಪಗಳು ಕೇಳಿಬಂದಿವೆ. ರಾಜ್ಯಪಾಲರು ಈ ಹಿಂದೆ ದಲಿತ ರಾಜಕಾರಣಿ ಆಗಿದ್ದವರು, ಗೆಹ್ಲೋಟ್ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿಯಿದ್ರೆ ಸಂವಿಧಾನ ಬದಲಾವಣೆ ಅಂತ ಯಾಕೆ ಮಾತನಾಡ್ತಿದ್ರು?" ಎಂದು ಪ್ರಶ್ನಿಸಿದರು.
"ನಾವು ಪ್ರತಿಭಟನೆ ಮಾಡಿದ್ದೇವೆ, ಯಾವುದೇ ಗಲಾಟೆ ಮಾಡಿಲ್ಲ. ಐವನ್ ಡಿಸೋಜಾ ಏನು ಹೇಳಿದ್ದಾರೆ ಅಂತ ನನಗೆ ಸರಿಯಾಗಿ ಗೊತ್ತಿಲ್ಲ. ಬಾಂಗ್ಲಾದೇಶ ಮತ್ತು ಭಾರತವನ್ನು ನಾವು ಒಂದು ಮಾಡೋದು ಬೇಡ, ಸಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ನಾವು ಹೋರಾಟ ಮಾಡೋದು ಸರಿಯಲ್ಲ. ಆದರೆ ಅವರು ತೆಗೆದುಕೊಂಡ ನಿರ್ಧಾರದ ವಿರುದ್ದ ಕಾನೂನು ಹೋರಾಟ ಮಾಡ್ತಿದ್ದೀವಿ ಅಷ್ಟೇ" ಎಂದು ಹೇಳಿದರು.