

Bollywood: ಕಳೆದ ವರ್ಷ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವಲ್ಲಿ ಬಹುತೇಕ ಭಾರತೀಯ ಸಿನಿಮಾಗಳು ಯಶಸ್ವಿಯಾಗಿ, ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗಳನ್ನು ಮೀರಿ ಲಾಭ ಗಳಿಸಿತು. ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಚಿತ್ರಗಳು ಸೋಲಿನ ಲೆಕ್ಕಾಚಾರಗಳನ್ನೆಲ್ಲಾ ಹಿಂದಿಕ್ಕಿ ಉತ್ತಮ ಲಾಭವನ್ನು ನೋಡಿದರೆ, ಬಾಲಿವುಡ್ ಮತ್ತು ಮಾಲಿವುಡ್ ಸಿನಿಮಾಗಳು ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಎಡವಿ, ಒಳ್ಳೆಯ ಆದಾಯ ಗಳಿಸುವುದರಿಂದ ದೂರ ಉಳಿಯಿತು.
ಇದೀಗ ಹೊಸ ವರ್ಷಕ್ಕೆ ಕಾಲಿಟ್ಟಿರುವ ಬಾಲಿವುಡ್, ಸ್ಟಾರ್ ನಟರ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ವರ್ಷದ ಮೊದಲ ತಿಂಗಳಲ್ಲೇ ತಮ್ಮ ಉದ್ಯಮಕ್ಕೆ ಯಾರ ಹಾಗೂ ಯಾವ ಚಿತ್ರ ಕೈಹಿಡಿಯಲಿದೆ ಎಂಬ ಲೆಕ್ಕಾಚಾರಗಳು ಜೋರಾಗಿವೆ. ಈ ಸಾಲಿನಲ್ಲಿ ಇಬ್ಬರು ಸ್ಟಾರ್ಗಳ ಸಿನಿಮಾಗಳೇ ಮುಂಚೂಣಿಯಲ್ಲಿದ್ದು, ಒಂದೇ ದಿನದಂದು ತೆರೆ ಕಾಣುತ್ತಿದೆ. ಹಿರಿಯ ನಟ ಅಜಯ್ ದೇವಗನ್ ಅಭಿನಯದ 'ಆಜಾದ್' ಮತ್ತು ನಟಿ ಕಂಗನಾ ರಣಾವತ್ ನಟನೆಯ 'ಎಮರ್ಜೆನ್ಸಿ' ಚಿತ್ರಗಳು ಅಖಾಡಕ್ಕಿಳಿಯಲು ಸಜ್ಜಾಗಿವೆ.
ಈ ಎರಡು ಸಿನಿಮಾ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಗೆ ಸೇರಿದ್ದೇ ಆದರೂ ಕೆಲವೊಂದು ವಿಚಾರಗಳಿಂದ ಬಾಲಿವುಡ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುವುದು ಖಚಿತ ಎನ್ನಲಾಗಿದೆ. ಹಲವು ಬಾರಿ ಚಿತ್ರೀಕರಣ ಹಾಗೂ ಮುಂದೂಡಿಕೆ ಸಮಸ್ಯೆಗಳನ್ನು ಎದುರಿಸಿರುವ ಕಂಗನಾ ಚಿತ್ರ, ಸಾಕಷ್ಟು ವಿವಾದಗಳ ಜತೆ ನಿಗದಿತ ಸಮಯಕ್ಕೆ ಸಿನಿಮಾವನ್ನು ತೆರೆಗೆ ತರಲು ಪರದಾಡಿತು. ಇದರಿಂದ ಚಿತ್ರಪ್ರೇಮಿಗಳು ಕೂಡ ಬೇಸರಕ್ಕೆ ಒಳಗಾಗಿದ್ದಾರೆ. ಇನ್ನೂ 'ಆಜಾದ್' ಚಿತ್ರಕ್ಕೆ ಸರಿಯಾದ ಪ್ರಚಾರ ಕಾರ್ಯ ಸಿಗದೆ ಇರುವುದು ಸದ್ಯ ಚಿತ್ರತಂಡಕ್ಕೆ ಸೋಲು ನೀಡುವ ಸಾಧ್ಯತೆಗಳನ್ನು ಸೂಚಿಸಿವೆ.
ಇದೆಲ್ಲವನ್ನೂ ಮೀರಿ ಜನವರಿ 17ರಂದು ರಿಲೀಸ್ ಆಗಲಿರುವ ಈ ಎರಡು ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಹೇಗೆ ಕಮಾಲ್ ಮಾಡಲಿದೆ? ಸಿನಿಪ್ರಿಯರು ಹೇಗೆ ಸ್ಟಾರ್ ನಟರ ಚಿತ್ರವನ್ನು ಸ್ವೀಕರಿಸುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಒಂದೇ ದಿನದಂದು ತೆರೆ ಕಾಣುತ್ತಿರುವ ಕಂಗನಾ ಹಾಗೂ ಅಜಯ್ ದೇವಗನ್ ಚಿತ್ರಗಳಿಗೆ ಮೊದಲ ದಿನ ಪ್ಲಸ್ ಆಗಲಿದೆ. ಕಾರಣ, 17ರಂದು ಸಿನಿಮಾ ಲವರ್ಸ್ ಡೇ ಅಂಗವಾಗಿ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಕೇವಲ 99 ರೂ. ಇರಲಿದೆ. ಇದರಿಂದ ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಹಾಜರಾಗುವ ಸಾಧ್ಯತೆಗಳಿವೆ. ಅಸಲಿಗೆ ಈ ಎರಡು ಸಿನಿಮಾಗಳು ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).