Pavala Syamala: ಹಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತೆಲುಗು ಚಿತ್ರರಂಗದ ಜನಪ್ರಿಯ ಹಿರಿಯ ನಟಿ ಪಾವಲಾ ಶ್ಯಾಮಲಾ, ಆರ್ಥಿಕ ಬಿಕ್ಕಟ್ಟು ಮತ್ತು ಅನಾರೋಗ್ಯ ಸಮಸ್ಯೆಯಿಂದ ಇದೀಗ ಮತ್ತೇ ಪರದಾಡುವಂತ ಸ್ಥಿತಿ ತಲುಪಿದ್ದಾರೆ. ಒಂದೆಡೆ ಹಣಕಾಸಿನ ತೊಂದರೆ ಉಸಿರುಗಟ್ಟಿಸಿದರೆ, ಆರೋಗ್ಯ ಸಮಸ್ಯೆ ಜೀವವನ್ನೇ ಕೊನೆಗೊಳಿಸುವಂತೆ ದೂಡುತ್ತಿರುವುದು ಇದೀಗ ನಟಿಯ ಕಣ್ಣೀರಿಗೆ ಕಾರಣವಾಗಿದೆ.
ಸಾಯುವ ನಿರ್ಧಾರ
ಆರಂಭದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹಿರಿಯ ನಟಿ, ನಂತರದಲ್ಲಿ ಅನಾಥಾಶ್ರಮಕ್ಕೆ ಸ್ಥಳಾಂತರಗೊಂಡು, ಸದ್ಯ ಅಲ್ಲಿಯೇ ವಾಸ ಮಾಡುತ್ತಿದ್ದಾರೆ ಎಂದು ಸಿನಿ ವರದಿಯೊಂದು ಉಲ್ಲೇಖಿಸಿದೆ. ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿ, ಅತ್ಯುತ್ತಮ ನಟಿ ಎಂಬ ಖ್ಯಾತಿ ಗಳಿಸಿರುವ ಶ್ಯಾಮಲಾ, ಈ ಹಿಂದೆಯೂ ಇದೇ ರೀತಿಯ ಆರೋಗ್ಯ ಸಮಸ್ಯೆಯ ಹಿನ್ನಲೆ ಚಿತ್ರರಂಗದ ನಟರ ಬಳಿ ಸಹಾಯಹಸ್ತ ಕೋರಿದ್ದರು. ನಟಿಯ ಮನವಿಗೆ ಅಂದು ಸ್ಪಂದಿಸಿದ್ದ ಮೆಗಾಸ್ಟಾರ್ ಚಿರಂಜೀವಿ ಸಹಾಯಹಸ್ತ ನೀಡಿದ್ದರು. ಆದರೆ, ಇದೀಗ ಮತ್ತೆ ನಟಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸಾಯುವ ನಿರ್ಧಾರ ಕೈಗೊಂಡರೆ ಬಹುಶಃ ಕೆಲವರಿಗೆ ನೆಮ್ಮದಿ ದೊರೆಯುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ.
ಉಸಿರಾಡಲು ಕಷ್ಟವಾಗಿದೆ
ವರ್ಷಗಳಿಂದ ಸಹಾಯಕ್ಕಾಗಿ ಕಾಯುತ್ತಿರುವ ನಟಿಗೆ ಯಾರಾದರೂ ಒಬ್ಬರು ಸಹಾಯ ಮಾಡುತ್ತಿದ್ದಾರೆ. ಆದರೆ, ಆ ಹಣ ಅವರ ಔಷಧಿ ಖರ್ಚಿಗೆ ಸಾಲುತ್ತಿಲ್ಲ ಎಂದು ಹೇಳಿದ್ದಾರೆ. ಈಗ ಮತ್ತೊಮ್ಮೆ ಸಹಾಯಹಸ್ತ ಕೋರಿರುವ ಪಾವಲಾ ಶ್ಯಾಮಲಾ, “ನಾನು ಕಳೆದ ಐವತ್ತು ವರ್ಷಗಳಿಂದ ಕಲಾವಿದೆಯಾಗಿ ಜೀವಿಸಿದ್ದೇನೆ. ಈ ಮೂರು ವರ್ಷಗಳಿಂದ ನನಗೆ ಜೀವನ ನಡೆಸಲು ತೀರ ಕಷ್ಟವಾಗಿದೆ. ಅದು ನಿಮಗೆಲ್ಲರಿಗೂ ತಿಳಿದಿದೆ. ನಾನು ಹಲವು ಸಂದರ್ಶನಗಳನ್ನು ನೀಡಿದ್ದೇನೆ. ಸಹಾಯಕ್ಕೆ ಕೋರಿದ್ದೇನೆ. ಆದರೆ, ಯಾರೂ ಕೂಡ ಪ್ರತಿಕ್ರಿಯಿಸಿಲ್ಲ. ಹೇಗೋ ಇಲ್ಲಿಯವರೆಗೆ ಇದನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಈಗ ನನಗೆ ಉಸಿರಾಡಲೂ ಕಷ್ಟವಾಗುತ್ತಿದೆ” ಎಂದಿದ್ದಾರೆ.
ನಾನು ಸತ್ತರೇ ನಿಮಗೆ ನೆಮ್ಮದಿಯೇ?
“ನನ್ನ ಮಗುವಿನ ಬಗ್ಗೆ ನನಗೆ ದುಃಖವಿದೆ. ಒಬ್ಬಳು ಕಲಾವಿದೆ ವಿಷ ಕುಡಿದು ಸತ್ತರೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆಯೇ? ನಾನು ಹಲವು ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದೇನೆ. ಮೆಗಾಸ್ಟಾರ್ ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು, ಜೂ. ಎನ್ಟಿಆರ್ ಸೇರಿದಂತೆ ಮುಂತಾದವರ ಜತೆ ನಟಿಸಿದ್ದೇನೆ. ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಸಾಯುವ ಸ್ಥಿತಿ ತಲುಪಿದ್ದೇನೆ” ಎಂದು ಹೇಳಿದ್ದಾರೆ.
ನನ್ನಲ್ಲಿ ಶಕ್ತಿ ಇಲ್ಲ
“ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕಾರಣ ನಾನು ತುಂಬಾ ಸಂಕಷ್ಟದಲ್ಲಿದ್ದೇನೆ. ನನ್ನ ಪರಿಸ್ಥಿತಿ ಬಗ್ಗೆ ಯಾರಿಗೂ ಸ್ಪಂದಿಸುವ ಮನಸ್ಸಿಲ್ಲವೇ? ನಾನು ಈ ರೀತಿ ಅನಾಥಳಾಗಿ ಸಾಯುವುದನ್ನು ನೋಡುತ್ತಿರಿಯೇ? ಯಾರ ಹೃದಯವೂ ಕರಗುವುದಿಲ್ಲವೇ? ನನ್ನ ಈ ಕಷ್ಟದ ಪರಿಸ್ಥಿತಿ ಯಾರಿಗಾದರೂ ಗೊತ್ತಿದೆಯೇ? ಸದ್ಯದ ಪರಿಸ್ಥಿತಿಯಲ್ಲಿ ನನಗೆ ಹೆಚ್ಚು ಮಾತನಾಡುವ ಶಕ್ತಿ ಇಲ್ಲ” ಎಂದು ಹೇಳುತ ಸಹಾಯಕ್ಕಾಗಿ ಕೋರಿದ್ದಾರೆ,(ಏಜೆನ್ಸೀಸ್).