

ಉತ್ತರಪ್ರದೇಶ: ಅಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ತನ್ನ ಕೈಯಿಂದ ಸ್ಮಾರ್ಟ್ಫೋನ್ ಕಿತ್ತುಕೊಂಡ ಪತಿಯ ವಿರುದ್ಧ ತೀವ್ರ ಕೋಪಗೊಂಡಿದ್ದು, ಸಿಟ್ಟು ತೀರಿಸಿಕೊಳ್ಳಲು ಗಂಡನಿಗೆ ಕರೆಂಟ್ ಶಾಕ್ ಕೊಟ್ಟು ಹಿಂಸಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಜೂನ್ 1ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ಪಾಸ್ ವಿತರಣೆ
ಘಟನೆಯ ವಿವರ: ಮೊಬೈಲ್ ಫೋನ್‌ನಲ್ಲಿ ಹೆಚ್ಚು ಸಮಯ ವ್ಯಯಿಸಬೇಡ. ಯಾರ ಜತೆಗೆ ಅಷ್ಟೊಂದು ಫೋನ್‌ನಲ್ಲಿ ಮಾತನಾಡ್ತಿದ್ದೀಯಾ? ಅದರ ಬದಲಿಗೆ ಬೇರೆ ಯಾವುದಾದರು ಕೆಲಸ ಮಾಡು. ಅದನ್ನು ಹೊರತುಪಡಿಸಿ, ಮೊಬೈಲ್ ಗೀಳಿಗೆ ಸಿಲುಕಬೇಡ, ಇದು ನಿನ್ನ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಗಂಡ ತನ್ನ ಹೆಂಡತಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾನೆ. ಇಷ್ಟು ತಿಳಿ ಹೇಳಿದರೂ ಸಹ ಫೋನ್ ಬಿಡದ ಪತ್ನಿಯ ವಿರುದ್ಧ ಸಿಟ್ಟಿಗೆದ್ದ ಪತಿ, ಆಕೆಯ ಕೈಯಿಂದ ಮೊಬೈಲ್ ಕಸಿದು, ಉಪಯೋಗಿಸದಂತೆ ಎಚ್ಚರಿಸಿದ್ದಾನೆ. ಇಷ್ಟಕ್ಕೆ ಕುಪಿತಗೊಂಡ ಮಹಿಳೆ, ಮೊದಲು ಗಂಡನಿಗೆ ಮದ್ದು ನೀಡಿ ನಿದ್ರೆಗೆ ಜಾರುವಂತೆ ಮಾಡಿ, ಆನಂತರ ಹಾಸಿಗೆಗೆ ಕಟ್ಟಿ ಹಾಕಿದ್ದಾಳೆ.
ಮಂಚಕ್ಕೆ ಕಟ್ಟಿ ಹಾಕಿ, ದೊಣ್ಣೆಯಿಂದ ಗಂಡನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಲ್ಲದೇ, ಆತನಿಗೆ ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ್ದಾಳೆ. ತಂದೆಯನ್ನು ಕಾಪಾಡಲು ಓಡೋಡಿ ಬಂದ 14 ವರ್ಷದ ಮಗನನ್ನು ಸಹ ಥಳಿಸಿದ ಮಹಿಳೆ, ಇಬ್ಬರನ್ನು ಅಮಾನುಷವಾಗಿ ಹಿಂಸಿಸಿದ್ದಾಳೆ. ಸದ್ಯ ಸಫಾಯ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಪ್ರದೀಪ್ ಸಿಂಗ್ ( ಮಹಿಳೆಯ ಪತಿ), ವಿಪರೀತ ದೂರವಾಣಿ ಕರೆಯಲ್ಲಿ ತೊಡಗಿದ್ದ ನನ್ನ ಹೆಂಡತಿಯಿಂದ ಫೋನ್ ಕಸಿದಿದ್ದೇ ಇಷ್ಟೆಲ್ಲಾ ತೊಂದರೆಗೆ ಕಾರಣ ಎಂದು ಹೇಳಿಕೊಂಡಿದ್ದಾರೆ.
ಆರೋಪಿ ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 328 (ವಿಷದ ಮೂಲಕ ನೋವುಂಟು ಮಾಡುವುದು ಇತ್ಯಾದಿ) ಮತ್ತು 506 (ಅಪರಾಧದ ಬೆದರಿಕೆ) ಅಡಿಯಲ್ಲಿ ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).