

ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ನ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ) ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಎರಡೂ ಸಂಸ್ಥೆಗಳು ಚೀನಾದ ರಾಯಭಾರ ಕಚೇರಿಯಿಂದ ವಂತಿಗೆ ಪಡೆದುಕೊಂಡಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಏನಿದು ಎಫ್ಸಿಆರ್ಎ? ವಿದೇಶಿ ವಂತಿಗೆ ಪಡೆಯಲು ಯಾರು ಅರ್ಹರು? ಎಂಬಿತ್ಯಾದಿ ವಿವರಗಳು ಇಲ್ಲಿವೆ.
ನೆಹರು-ಗಾಂಧಿ ಕುಟುಂಬದೊಂದಿಗೆ ಸಂಬಂಧ ಇರುವ ಸಂಸ್ಥೆಗಳಾದ ರಾಜೀವ್ ಗಾಂಧಿ ಫೌಂಡೇಶನ್ (ಆರ್ಜಿಎಫ್) ಮತ್ತು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ನ (ಆರ್ಜಿಸಿಟಿ) ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ) ಪರವಾನಗಿಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ರದ್ದುಗೊಳಿಸಿದೆ. ಚೀನಾದ ರಾಯಭಾರ ಕಚೇರಿಯಿಂದ ಹಣ ಪಡೆದಿದೆ ಎಂದು ಬಿಜೆಪಿ ಆರೋಪಿಸಿದ ಹಿನ್ನೆಲೆಯಲ್ಲಿ 2020ರಲ್ಲಿ ಗೃಹ ಸಚಿವಾಲಯ ರಚಿಸಿದ್ದ ಅಂತರ-ಸಚಿವಾಲಯ ಸಮಿತಿ ನಡೆಸಿದ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಬಿಜೆಪಿ ಆರೋಪ-ಸಮಿತಿ ರಚನೆ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ), ಎಫ್ಸಿಆರ್ಎ ಮತ್ತು ಆದಾಯ ತೆರಿಗೆಯ ಶಂಕಿತ ಉಲ್ಲಂಘನೆ ಹಿನ್ನೆಲೆಯಲ್ಲಿ ಆರ್ಜಿಎಫ್ ಮತ್ತು ಆರ್ಜಿಸಿಟಿ ಪಡೆದ ಹಣದ ಕುರಿತಂತೆ ಈ ಸಮಿತಿ ತನಿಖೆ ನಡೆಸಿತು. ಆರ್ಜಿಎಫ್ ಮತ್ತು ಆರ್ಜಿಸಿಟಿ ಎರಡರ ನೇತೃತ್ವವನ್ನೂ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಹಿಸಿರುವುದರಿಂದ ಮತ್ತು ಕಾಂಗ್ರೆಸ್ನ ಉನ್ನತ ನಾಯಕರಾದ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಮತ್ತು ಪಿ. ಚಿದಂಬರಂ ಸದಸ್ಯರಾಗಿರುವುದರಿಂದ ಈ ಪ್ರಕರಣ ಕುತೂಹಲಕ್ಕೆ ಕಾರಣವಾಯಿತು.
2020ರ ಜೂನ್ 25ರಂದು ಬಿಜೆಪಿಯು ಆರ್ಜಿಎಫ್ ಸ್ವೀಕರಿಸಿದ ದೇಣಿಗೆಯನ್ನು ಪ್ರಶ್ನಿಸಿತು. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಲ್ಲದ ಅಧ್ಯಯನಗಳನ್ನು ನಡೆಸುವುದಕ್ಕಾಗಿ 2005-06ರಲ್ಲಿ ಚೀನಾ ರಾಯಭಾರ ಕಚೇರಿಯಿಂದ 2.48 ಕೋಟಿ ರೂಪಾಯಿಯನ್ನು ಈ ಫೌಂಡೇಶನ್ ತೆಗೆದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದರು.
ಲಡಾಖ್ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಬೆಳವಣಿಗೆಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ರಾಹುಲ್ ಗಾಂಧಿ ಪ್ರಶ್ನಿಸಿದ ಕಾರಣಕ್ಕಾಗಿ ಎಫ್ಸಿಆರ್ಎ ಉಲ್ಲಂಘನೆ ಆರೋಪಗಳನ್ನು ಮಾಡಲಾಗಿದೆ ಎಂಬ ಟೀಕೆಗಳು ಬಿಜೆಪಿ ವಿರುದ್ಧ ವ್ಯಕ್ತವಾದವು. 2005-06ರಲ್ಲಿ ಆರ್ಜಿಎಫ್ಗೆ ನೀಡಿದ ದೇಣಿಗೆಗಳ ಖಾತೆ ಹಾಗೂ ಭಾರತ-ಚೀನಾ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಆರ್ಜಿಎಫ್ ಅಧ್ಯಯನ ನಡೆಸಿ ಭಾರತಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಸೂಚಿಸಿದ ವಾರ್ಷಿಕ ವರದಿಯನ್ನು ಬಿಜೆಪಿ ನಾಯಕರು ಆರೋಪಕ್ಕೆ ಪುಷ್ಟಿಯಾಗಿ ಉಲ್ಲೇಖಿಸಿದ್ದಾರೆ.
2005-06ರ ಆರ್ಜಿಎಫ್ ವಾರ್ಷಿಕ ವರದಿ ಚೀನಾದ ರಾಯಭಾರ ಕಚೇರಿಯನ್ನು ಪಾಲುದಾರ ಸಂಸ್ಥೆಗಳು ಮತ್ತು ದಾನಿಗಳಲ್ಲಿ ಒಂದೆಂದು ಉಲ್ಲೇಖಿಸಿದೆ. ಆರ್ಜಿಎಫ್ನ ಅಂಗಸಂಸ್ಥೆಯಾದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಕಾಂಟೆಂಪರರಿ ಸ್ಟಡೀಸ್ (ಆರ್ಜಿಐಸಿಎಸ್) ದಾನಿಗಳ ಪಟ್ಟಿಯಲ್ಲಿ ಚೀನಾದ ಹೆಸರು ಕೂಡ ಇದೆ.
ವಿದೇಶಿ ಕೊಡುಗೆ ಸ್ವೀಕಾರ ಹಾಗೂ ಬಳಕೆಯನ್ನು ಎಫ್ಸಿಆರ್ಎ ನಿಯಂತ್ರಿಸುತ್ತದೆ. ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕಾರಕವಾದ ಚಟುವಟಿಕೆಗಳಿಗೆ ಹಣ ಬಳಸಿಕೊಳ್ಳುವ ವ್ಯಕ್ತಿಗಳು, ಸಂಘಗಳು ಅಥವಾ ಕಂಪನಿಗಳು ವಿದೇಶಿ ಕೊಡುಗೆ ಸ್ವೀಕರಿಸುವುದನ್ನು ನಿಷೇಧಿಸುತ್ತದೆ. ಸ್ವತಂತ್ರ ಸಂಘ- ಸಂಸ್ಥೆಗಳ ಮೂಲಕ ಹಣ ರವಾನಿಸಿ ವಿದೇಶಿ ಶಕ್ತಿಗಳು ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂಬ ಆತಂಕದ ಹಿನ್ನೆಲೆಯಲ್ಲಿ 1976ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ಕಾನೂನನ್ನು ಜಾರಿಗೊಳಿಸಲಾಯಿತು.
ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿ ಅಥವಾ ಎನ್ಜಿಒ ಈ ಕಾಯ್ದೆಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ದೆಹಲಿಯ ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ವಿದೇಶಿ ನಿಧಿಯ ಸ್ವೀಕೃತಿಗಾಗಿ ಬ್ಯಾಂಕ್ ಖಾತೆ ತೆರೆಯಬೇಕು ಮತ್ತು ಉಲ್ಲೇಖಿಸಿದ ಉದ್ದೇಶಕ್ಕೆ ಮಾತ್ರ ಆ ಹಣ ಬಳಸಬೇಕು. ಕಡ್ಡಾಯವಾಗಿ ವಾರ್ಷಿಕ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. ಅಲ್ಲದೆ, ಹಣವನ್ನು ಮತ್ತೊಂದು ಎನ್ಜಿಒಗೆ ವರ್ಗಾಯಿಸಬಾರದು.
ಕಾನೂನಿಗೆ ತಿದ್ದುಪಡಿ
2010ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಎಫ್ಸಿಆರ್ಎಗೆ ತಿದ್ದುಪಡಿ ಮಾಡಲಾಯಿತು. ಈ ಕಾನೂನನ್ನು 2020ರಲ್ಲಿ ಪ್ರಸ್ತುತ ಸರ್ಕಾರವು ಮತ್ತೊಮ್ಮೆ ತಿದ್ದುಪಡಿ ಮಾಡಿತು. ಎನ್ಜಿಒಗಳು ಪಡೆಯುವ ವಿದೇಶಿ ನಿಧಿಯ ಸ್ವೀಕೃತಿ ಮತ್ತು ಬಳಕೆಯ ಮೇಲೆ ಬಿಗಿಯಾದ ನಿಯಂತ್ರಣ ಮತ್ತು ಪರಿಶೀಲನೆ ಕೈಗೊಳ್ಳಲು ಇದು ಸರ್ಕಾರಕ್ಕೆ ಹೆಚ್ಚಿನ ಬಲ ನೀಡಿತು. ಈ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
ಆರ್ಜಿಎಫ್ ಮತ್ತು ಆರ್ಜಿಸಿಟಿ ಕಾನೂನಿನ ಅನುಸಾರವೇ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಯಶಸ್ಸಿನಿಂದ ಬಿಜೆಪಿ ಗಲಿಬಿಲಿಗೊಂಡು ಸಮಸ್ಯೆಗಳ ಮೇಲಿನ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಇದಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಜೈರಾಮ್ ರಮೇಶ ಟೀಕಿಸಿದ್ದಾರೆ.
ವಿದೇಶಿ ನಿಧಿಯನ್ನು ಸ್ವೀಕರಿಸಲು ಬಯಸುವ ಎನ್ಜಿಒಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ನಿರ್ದಿಷ್ಟ ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ಧಾರ್ವಿುಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹೊಂದಿರುವ ವ್ಯಕ್ತಿಗಳು ಅಥವಾ ಸಂಘಗಳಿಗೆ ಎಫ್ಸಿಆರ್ಎ ನೋಂದಣಿ ನೀಡಲಾಗುತ್ತದೆ. ಗೃಹ ವ್ಯವಹಾರಗಳ ಸಚಿವಾಲಯವು ಅರ್ಜಿದಾರರ ಪೂರ್ವಾಪರಗಳ ಬಗ್ಗೆ ಇಂಟೆಲಿಜೆನ್ಸ್ ಬ್ಯೂರೋ ಮೂಲಕ ವಿಚಾರಣೆ ನಡೆಸಿದ ನಂತರ ನಿರ್ಧಾರ ಕೈಗೊಳ್ಳುತ್ತದೆ. ಸಚಿವಾಲಯವು 90 ದಿನಗಳ ಒಳಗಾಗಿ ಅರ್ಜಿಯನ್ನು ಅನುಮೋದಿಸಬೇಕು ಅಥವಾ ತಿರಸ್ಕರಿಸಬೇಕು. ಎಫ್ಆರ್ಸಿಎ ನೋಂದಣಿ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಎನ್ಜಿಒಗಳು ನೋಂದಣಿಯ ಅವಧಿ ಮುಗಿದ ಆರು ತಿಂಗಳೊಳಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಯಾವುದೇ ಎನ್ಜಿಒದಿಂದ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಕಂಡುಬಂದಲ್ಲಿ ಅದರ ಎಫ್ಸಿಆರ್ಎ ನೋಂದಣಿ ರದ್ದುಗೊಳಿಸುವ ಹಕ್ಕನ್ನು ಸರ್ಕಾರ ಹೊಂದಿದೆ. ಎನ್ಜಿಒ ನೋಂದಣಿಯನ್ನು ಒಮ್ಮೆ ರದ್ದುಗೊಳಿಸಿದರೆ, ಅದು ಮೂರು ವರ್ಷಗಳವರೆಗೆ ಮರು-ನೋಂದಣಿಗೆ ಅರ್ಹವಾಗಿರುವುದಿಲ್ಲ. ರದ್ದತಿ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲು ಅವಕಾಶವಿದೆ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಪತ್ರಕರ್ತರು ಅಥವಾ ಪತ್ರಿಕೆ ಮತ್ತು ಮಾಧ್ಯಮ ಪ್ರಸಾರ ಕಂಪನಿಗಳು, ನ್ಯಾಯಾಧೀಶರು ಮತ್ತು ಸರ್ಕಾರಿ ನೌಕರರು, ಶಾಸಕಾಂಗ ಮತ್ತು ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಪದಾಧಿಕಾರಿಗಳು ಮತ್ತು ರಾಜಕೀಯ ಸ್ವರೂಪದ ಸಂಸ್ಥೆಗಳು ವಿದೇಶಿ ಹಣ ಸ್ವೀಕರಿಸುವುದನ್ನು ಕಾಯ್ದೆ ನಿಷೇಧಿಸುತ್ತದೆ.