

ಆಸ್ತಿ ನೋಂದಣಿಗೆ ಡಿಜಿಟಲ್ ಖಾತಾ ಕಡ್ಡಾಯ ಮಾಡಿರುವುದರ ಪರಿಣಾಮವಾಗಿ ಸಾರ್ವಜನಿಕರು ತೊಂದರೆಗೆ ಒಳಗಾಗುವಂತಾಗಿದೆಯಲ್ಲದೆ, ಸರ್ಕಾರಕ್ಕೂ ಸಾವಿರಾರು ಕೋಟಿ ರೂ.ಗಳಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ನಷ್ಟವಾಗುವ ಅಪಾಯ ತಲೆದೋರಿದೆ. ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿಗೆ ಡಿಜಿಟಲ್ ಖಾತಾ (ಇ-ಖಾತಾ) ಕಡ್ಡಾಯ ಮಾಡಿರುವುದರಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಇಳಿಕೆಯಾಗಿ ಬರೋಬ್ಬರಿ 5 ಸಾವಿರ ಕೋಟಿ ರೂ. ಖೋತಾ ಆಗುವ ಆತಂಕ ಎದುರಾಗಿದೆ. ಬಿಡಿಎ, ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಲೇಔಟ್ ಆಗಿದ್ದರೂ ಮತ್ತು ಎ ಖಾತಾ ಇದ್ದರೂ ಡಿಜಿಟಲ್ ಖಾತಾ ಕಡ್ಡಾಯವಾಗಿದೆ. ಇದರಿಂದ ಸಬ್ ರಿಜಿಸ್ಟ್ರಾರ್ನಲ್ಲಿ ರಿಜಿಸ್ಟ್ರೇಷನ್ ಶೇಕಡ 70 ಭಾಗ ಸ್ಥಗಿತವಾಗಲಿದೆ.
ನಿವೇಶನ, ಕಟ್ಟಡ, ಮನೆ, ವಿಲ್ಲಾ, ಫ್ಲ್ಯಾಟ್ ಸೇರಿ ಸ್ಥಿರಾಸ್ತಿಗಳ ನೋಂದಣಿಗೆ ಸೋಮವಾರದ (ಅಕ್ಟೋಬರ್ 7) ನಂತರ ಡಿಜಿಟಲ್ ಖಾತಾ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯ ಕಾವೇರಿ 2.0 ಸಾಫ್ಟ್ವೇರ್ನಲ್ಲಿ ಭೌತಿಕ ಅಥವಾ ಕೈಬರಹದ ಖಾತಾಗಳ ಅಪ್ಲೋಡ್ಗೆ ಅವಕಾಶವೇ ಇರುವುದಿಲ್ಲ. ಡಿಜಿಟಲ್ ಖಾತಾ ಇದ್ದರಷ್ಟೇ ರಿಜಿಸ್ಟ್ರೇಷನ್ಗೆ
ಅರ್ಜಿ ಸಲ್ಲಿಸಬಹುದು. ಆಸ್ತಿ ನೋಂದಣಿ ವಿಷಯದಲ್ಲಿ ಏಕರೂಪತೆ ತರಲು ಮತ್ತು ತೆರಿಗೆ ಸುಧಾರಣೆ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತಂದಿರುವುದೇನೋ ಸರಿಯಾದ ನಿರ್ಧಾರವೇ. ಆದರೆ ಇದನ್ನು ತರಾತುರಿಯಲ್ಲಿ ಮತ್ತು ಅವೈಜ್ಞಾನಿಕ ರೀತಿಯಲ್ಲಿ ಜಾರಿಗೊಳಿಸಲು ಹೊರಟಿರುವುದು ಸಮಸ್ಯೆಗೆ ಕಾರಣವಾಗಿದೆ. ಕಂದಾಯ ನಿವೇಶನಗಳನ್ನು ಹೊಂದಿರುವವರು ಸಾಮಾನ್ಯವಾಗಿ ಕೆಳಮಧ್ಯಮ ವರ್ಗದವರು ಅಥವಾ ಬಡವರೇ ಇರುತ್ತಾರೆ. ಏಕಾಏಕಿ ಡಿಜಿಟಲ್ ಖಾತಾ ಕಡ್ಡಾಯಗೊಳಿಸುವುದರಿಂದ ಆ ವರ್ಗದವರಿಗೆ ತೊಂದರೆಯಾಗುತ್ತದೆ.
ಮತ್ತೊಂದೆಡೆ, ರಾಜ್ಯದ ಗ್ರಾಮೀಣ ಭಾಗದಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಸ್ಥಾಪನೆ ಆಗಿರುವ ಕೈಗಾರಿಕಾ ಎಸ್ಟೇಟ್ಗಳಿಗೂ ಇ-ಸ್ವತ್ತು ಕಂಟಕ ಎದುರಾಗಿದೆ. ಕೈಗಾರಿಕಾ ಇಲಾಖೆಯಿಂದ ಸೇಲ್ ಡೀಡ್ ಹೊಂದಿದ್ದರೂ ಇ-ಸ್ವತ್ತು ದಾಖಲೆ ಇಲ್ಲದ ಕಾರಣ ನಿವೇಶನ ಮೇಲಿನ ಹಕ್ಕು ಸಾಧಿಸಲು ಸಣ್ಣ ಉದ್ಯಮಿಗಳಿಗೆ ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಸಾಲ, ಸಹಾಯಧನ ಮತ್ತಿತರ ಸೌಲಭ್ಯ ಪಡೆಯಲು ತೊಡಕಾಗಿದೆ. ಧಾರವಾಡದ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿನ 6 ಸಾವಿರ ಎಕರೆ ಕೈಗಾರಿಕಾ ಪ್ರದೇಶ, ಬೆಳಗಾವಿಯಲ್ಲಿ 1,500 ಎಕರೆ, ಗದಗನಲ್ಲಿ 250 ಎಕರೆ ಮತ್ತು ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿ ಇಂಥ ಸಮಸ್ಯೆ ಕಂಡುಬಂದಿದೆ. ಅಲ್ಲದೆ, ಗ್ರಾಮಾಂತರ ಭಾಗಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ‘ಇ-ಸ್ವತ್ತು’ ಪಡೆಯಲು ಹಲವು ತಾಂತ್ರಿಕ ತೊಂದರೆಗಳು ಅಡ್ಡಿಯಾಗಿವೆ. ಇಲ್ಲಿ ಮತ್ತೆ ಮಧ್ಯವರ್ತಿಗಳ ಹಾವಳಿ ತಲೆದೋರಿದೆ.
ಮಧ್ಯವರ್ತಿಗಳ ನೆರವಿಲ್ಲದೆ ಇ-ಖಾತಾ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂಥ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ‘ಇ-ಸ್ವತ್ತು’ ತಂತ್ರಾಂಶದ ಹೊಸ ಅವತರಣಿಕೆ ಪರಿಚಯಗೊಂಡ ಕೆಲ ತಿಂಗಳಲ್ಲೇ ತಾಂತ್ರಿಕ ಎಡವಟ್ಟುಗಳು ಎದುರಾಗಿದ್ದು, ಅರ್ಜಿ ಸಲ್ಲಿಕೆಗೆ ಬಹುತೇಕ ಪಂಚಾಯಿತಿಗಳಲ್ಲಿ ತೊಡಕು ಉಂಟಾಗಿದೆ. ಆಸ್ತಿ ನೋಂದಣಿಯಲ್ಲಿ ಮೋಸ ತಪ್ಪಿಸಲು, ಗ್ರಾಹಕರು ಕೊಳ್ಳಲಿರುವ ಅಥವಾ ಮಾರಾಟ ಮಾಡಲಿರುವ ಬಡವಾಣೆಯು ಅಧಿಕೃತವೋ, ಅನಧಿಕೃತವೋ ಎಂದು ತಿಳಿಯಲು, ತೆರಿಗೆ ಪಾವತಿ ಬಗ್ಗೆ ಮಾಹಿತಿ ಪಡೆಯಲು ಇ-ಖಾತಾದಿಂದ ಸಾಧ್ಯವಿದೆ. ಆದರೆ, ಪೂರ್ವತಯಾರಿ ಇಲ್ಲದೆ, ತರಾತುರಿಯಲ್ಲಿ ಇದನ್ನು ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ.