

| ರಾಘವ ಶರ್ಮ ನಿಡ್ಲೆ ನವದೆಹಲಿ
ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸಿಎಂ ಸ್ಥಾನಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಆಯ್ಕೆ ಮಾಡುವ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿತ್ತು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಖುದ್ದು ಜೋಶಿಯವರೇ ಸಿಎಂ ಸ್ಥಾನ ನಿರಾಕರಿಸಿದರು ಎಂದು ಪಕ್ಷದ ಉನ್ನತ ಮೂಲಗಳಿಂದ ವಿಜಯವಾಣಿಗೆ ಖಚಿತ ಮಾಹಿತಿ ಲಭ್ಯವಾಗಿದೆ.
ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಜೋಶಿಯವರನ್ನು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ತಮ್ಮ ಕಚೇರಿಗೆ ಕರೆಸಿಕೊಂಡು, ಸರ್ಕಾರದ ನಾಯಕತ್ವ ವಹಿಸಿಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ, ಸದ್ಯ ಕರ್ನಾಟಕದಲ್ಲಿರುವ ರಾಜಕೀಯ ವಾತಾವರಣಕ್ಕೆ ಪೂರಕವಾಗಿರುವ ಮತ್ತು ಬಿಜೆಪಿಗೆ ಅಪಾಯಕಾರಿ ಎನಿಸದ ತೀರ್ಮಾನ ಕೈಗೊಳ್ಳುವುದೇ ಸೂಕ್ತ. ಪ್ರಭಾವಿ ಸಮುದಾಯ ಎನಿಸಿಕೊಂಡಿರುವ ಲಿಂಗಾಯತ ಸಮಾಜದ ಮುಖಂಡರನ್ನೇ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದರೆ 2023ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದಲೂ ಅನುಕೂಲ ಆಗಲಿದೆ ಎಂದು ಮನಸ್ಸು ಬಿಚ್ಚಿ ಹೇಳಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಯಡಿಯೂರಪ್ಪನವರು ನನ್ನ ಹೆಸರಿಗೆ ಸಮ್ಮತಿಸುತ್ತಾರೋ ಇಲ್ಲವೋ ಎಂಬುದಕ್ಕಿಂತ ಮುಖ್ಯವಾಗಿ ಆ ಸಮುದಾಯದ ಭಾವನೆಯನ್ನೂ ನಾವು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ತಪ್ಪು ಸಂದೇಶ ರವಾನೆ ಆಗಬಾರದು. ಹೀಗಾಗಿ, ಅದೇ ಸಮಾಜದ, ಸೂಕ್ತ ಎನಿಸುವ ವ್ಯಕ್ತಿಯನ್ನು ಆಯ್ಕೆ ಮಾಡುವುದು ಸಮಯೋಚಿತ ಎಂಬ ಸಲಹೆ ನೀಡಿದ್ದರೆಂದು ಗೊತ್ತಾಗಿದೆ.
ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಕೇಂದ್ರ ಬಿಜೆಪಿಯಲ್ಲಿ ಪ್ರಲ್ಹಾದ್ ಜೋಶಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವುದಲ್ಲದೆ, ಪ್ರಧಾನಿ ಮೋದಿ ಮತ್ತು ಅಮಿತ್ ಷಾಗೂ ಅವರಿಗೂ ಆಪ್ತರಾಗಿದ್ದಾರೆ. ಹೀಗಾಗಿ, ಕೇಂದ್ರದ ಆಣತಿಯಂತೆ ರಾಜ್ಯದಲ್ಲಿ ಕೆಲಸ ಮಾಡಬಲ್ಲರು ಎಂದೇ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಬಹುದು ಎಂದು ಭಾವಿಸಲಾಗಿತ್ತು. ಆದರೆ ಸಂಸದೀಯ ವ್ಯವಹಾರ, ಗಣಿ, ಕಲ್ಲಿದ್ದಲು ಸಚಿವರಾಗಿ ಕೇಂದ್ರ ಬಿಜೆಪಿ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ವಿಸ್ತರಿಸಿಕೊಳ್ಳುತ್ತಿರುವ ವೇಳೆ, ಸದ್ಯದ ಕಾಲಘಟ್ಟದಲ್ಲಿ ತಮ್ಮನ್ನು ರಾಜ್ಯಕ್ಕಷ್ಟೇ ಏಕೆ ಸೀಮಿತ ಮಾಡಿಕೊಳ್ಳಲಿ ಎಂಬ ಚಿಂತನೆಗಳೂ ಅವರ ಮನಸ್ಸಿನಲ್ಲಿ ಹರಿದಾಡಿದ್ದವು ಎಂದು ಹೇಳಲಾಗಿದೆ.
18 ತಿಂಗಳ ನಂತರ ಏನೆಂಬ ಗೊಂದಲ!: ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟುಗಳ ನಡುವೆ ಸಿಎಂ ಸ್ಥಾನ ನಿಭಾಯಿಸುವ ಬಗ್ಗೆ ಜೋಶಿ ಅವರ ಅತ್ಯಾಪ್ತರಿಗೂ ಸಮಾಧಾನ ಇರಲಿಲ್ಲ. ಮುಂದಿನ ಮೂರು ವರ್ಷ ದೆಹಲಿಯಲ್ಲಿ ಇರುವುದು ಸೂಕ್ತ ಎಂದು ಜೋಶಿ ಕುಟುಂಬಸ್ಥರೂ ಅಭಿಪ್ರಾಯಪಟ್ಟರು ಎನ್ನಲಾಗಿದೆ. ಮೇಲಾಗಿ, ಮುಂದಿನ ಚುನಾವಣೆಗೆ 18 ತಿಂಗಳಷ್ಟೇ ಬಾಕಿ ಇದೆ. ಮುಂದೆ ಪಕ್ಷಕ್ಕೆ ಪೂರ್ಣ ಬಹುಮತ ಬರಲಿದೆ ಎಂಬ ಖಾತರಿಯೂ ಇಲ್ಲ. ಹೀಗಿರುವಾಗ, ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ಜೋಷಿ ಮನಸ್ಸಿನಲ್ಲಿದ್ದ ತುಮುಲಗಳನ್ನು ಷಾ ಜತೆಗೆ ಮುಕ್ತವಾಗಿ ಹಂಚಿಕೊಂಡಿದ್ದರು. ಮತ್ತೊಂದೆಡೆ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಸಿಎಂ ಸ್ಥಾನಕ್ಕೆ ಕೂರಿಸಿದರು ಎನ್ನುವುದನ್ನೇ ಎದುರಾಳಿಗಳು ಬಿಜೆಪಿ ವಿರುದ್ಧದ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದು. ಜಾತಿ ರಾಜಕಾರಣದ ಪ್ರಾಬಲ್ಯದ ಮಧ್ಯೆ ಎಚ್ಚರಿಕೆಯ ತೀರ್ಮಾನ ತೆಗೆದುಕೊಳ್ಳುವುದೇ ಒಳ್ಳೆಯದು ಮತ್ತು ಪಕ್ಷದ ಸಂಘಟನೆ ನಾನು ಕರ್ನಾಟಕಕ್ಕೆ ವಾಪಸ್ ಹೋಗಲೇಬೇಕು ಎಂದು ಬಯಸಿದಲ್ಲಿ ಖಂಡಿತಾ ಹೋಗುತ್ತೇನೆ. ಆದರೆ, ಲಿಂಗಾಯತ ಸಮಾಜಕ್ಕೆ ಆದ್ಯತೆ ನೀಡಬೇಕು ಎನ್ನುವುದು ನನ್ನ ಪ್ರಾಥಮಿಕ ಅಭಿಪ್ರಾಯ ಎಂದು ಸ್ಪಷ್ಟವಾಗಿ ತಿಳಿಸಿದರು ಎಂದು ಆರ್.ಎಸ್.ಎಸ್. ಮುಖಂಡರೊಬ್ಬರು ಹೇಳಿದ್ದಾರೆ.