More

    ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಇಂಜಿನಿಯರಿಂಗ್ ಪದವೀಧರ, ಜಲಸಂಪನ್ಮೂಲ ವಿಷಯತಜ್ಞ

    ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಮೂಲತಃ ಹುಬ್ಬಳ್ಳಿಯವರು. ವಿಜ್ಞಾನದ ವಿದ್ಯಾರ್ಥಿಯಾಗಿ, ಇಂಜಿನಿಯರಿಂಗ್ ಪದವೀಧರರಾಗಿ ಅವರು ವೈಜ್ಞಾನಿಕ ಮನೋಭಾವ ರೂಢಿಸಿಕೊಂಡವರು. ರಾಜಕಾರಣದಲ್ಲಿ ನಿರ್ವಹಿಸಿದ ನಾನಾ ಹುದ್ದೆಗಳಲ್ಲಿ ಮತ್ತು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅವರು ಅದೇ ವೈಜ್ಞಾನಿಕ ಮನೋಭಾವ ಮತ್ತು ಶಿಸ್ತು ತೋರ್ಪಡಿಸುತ್ತ ಬಂದಿದ್ದಾರೆ.

    ಹುಬ್ಬಳ್ಳಿಯಲ್ಲಿ 1960ರ ಜನವರಿ 28ರಂದು ಜನಿಸಿದ ಬಸವರಾಜ ಬೊಮ್ಮಾಯಿ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಹುಬ್ಬಳ್ಳಿ ದೇಶಪಾಂಡೆ ನಗರದ ರೋಟರಿ ಇಂಗ್ಲೀಷ್​ ಮಾಧ್ಯಮ ಶಾಲೆಯಲ್ಲಿ ಆಯಿತು. ನಂತರ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾಲೇಜು ವ್ಯಾಸಂಗ, ಬಳಿಕ ಬಿ.ವ್ಹಿ. ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದರು. 1983ರಿಂದ 1985ರವರೆಗೆ ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿ ಪಡೆದ ಬಸವರಾಜ ಬೊಮ್ಮಾಯಿ, ನಂತರ ತಮ್ಮದೇ ಆದ ಕೈಗಾರಿಕೆ ಸ್ಥಾಪಿಸಿದರು.

    ಕಾಲೇಜ್ ವಿದ್ಯಾಭ್ಯಾಸ ದಿನದಿಂದಲೇ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಇದು ಅವರ ಸಾಮಾಜಿಕ – ರಾಜಕೀಯ ಚಟುವಟಿಕೆಗೆ ನಾಂದಿಯಾಯಿತು. 1995ರಲ್ಲಿ ಹುಬ್ಬಳ್ಳಿ ನಗರದ ಈದಗಾ ಮೈದಾನದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ನಡೆಸಿದ ಪ್ರಯತ್ನದಲ್ಲಿ ನೇತೃತ್ವ ವಹಿಸಿದ್ದರು. ಅದೇ ವರ್ಷ ರಾಜ್ಯ ಜನತಾದಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1996ರಿಂದ 1997ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

    2007ರ ಜುಲೈನಲ್ಲಿ ಧಾರವಾಡದಿಂದ ನರಗುಂದವರೆಗೆ 21 ದಿನಗಳ ಕಾಲ 232 ಕಿ.ಮೀ ದೂರ ರೈತರೊಂದಿಗೆ ಬೃಹತ್ ಪಾದಯಾತ್ರೆ ಕೈಗೊಂಡಿದ್ದರು. 1993ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ಯುವಜನತಾ ದಳದ ಐತಿಹಾಸಿಕ ಬೃಹತ್ ರ್ಯಾಲಿಯ ಸಂಘಟನೆಯ ನೇತೃತ್ವ ವಹಿಸಿದ್ದರು. 1997 ಹಾಗೂ 2003ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ- ಹಾವೇರಿ- ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು.

    2008ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭೆ ಮತಕ್ಷೇತ್ರದಿಂದ ಆಯ್ಕೆಯಾದರು. ಹಿಂದಿನ ಬಿ.ಜೆ.ಪಿ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಆನಂತರ ಡಿ.ವಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಅವರ ಸಚಿವ ಸಂಪುಟದಲ್ಲಿ ಸತತ ಐದು ವರ್ಷಗಳವರೆಗೆ ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಜಲಸಂಪನ್ಮೂಲ ವಿಷಯದಲ್ಲಿ ತೋರಿಸಿದ ಆಸಕ್ತಿ, ಕಂಡುಕೊಂಡ ಜ್ಞಾನ ಎಲ್ಲ ರಾಜಕಾರಣಿಗಳಿಗೂ ಅನುಕರಣೀಯವಾಗಿದೆ. 2013ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರದಿಂದ ದ್ವಿತೀಯ ಬಾರಿಗೆ ಆಯ್ಕೆಯಾದರು. 2018 ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ತೃತೀಯ ಬಾರಿಗೆ ಆಯ್ಕೆಯಾಗಿ ಯಡಿಯೂರಪ್ಪನವರ ಸಂಪುಟದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು.

    ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts