ಕೆಲಸದ ಮಧ್ಯೆ S*x, ಹೋಟೆಲ್​ನಲ್ಲಿ ರಾತ್ರಿ ಉಳಿದುಕೊಳ್ಳಲು 23 ಸಾವಿರ ರೂ.! ದಂಪತಿಗಳಿಗೆ ಸರ್ಕಾರದ ಆಫರ್ | Ministry of Sex​

Ministry of Sex​
Published on

Ministry of Sex : ಯೂಕ್ರೇನ್​ ವಿರುದ್ಧ ನಿರಂತರವಾಗಿ ಯುದ್ಧ ನಡೆಸುತ್ತಿರುವ ರಷ್ಯಾ ದೇಶವೂ ಜನಸಂಖ್ಯೆಯ ಸಮಸ್ಯೆಯನ್ನು ಎದರಿಸುತ್ತಿದೆ. ಅಂದರೆ, ರಷ್ಯಾದಲ್ಲಿ ಜನಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. ಇದನ್ನು ನಿಭಾಯಿಸಲು ಅಲ್ಲಿನ ಸರ್ಕಾರ ತನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಲೈಂಗಿಕ ಸಚಿವಾಲಯ ( Ministry of Sex ) ತೆರೆಯಲು ಬಯಸಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕತೆಯನ್ನು ಉತ್ತೇಜಿಸುವುದರಿಂದ ಹಿಡಿದು ಇಂಟರ್ನೆಟ್​ ಕಡಿತದವರೆಗೂ ಅನೇಕ ಕ್ರಮಗಳನ್ನು ರಷ್ಯಾ ಸರ್ಕಾರ ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಹೆಚ್ಚಿನ ಮಾಹಿತಿ ಹೊರಬಿದ್ದಿದೆ.

ರಷ್ಯಾದ ಅಧಿಕಾರಿಗಳು ದೇಶದ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಪ್ರಸ್ತಾಪಗಳನ್ನು ಸರ್ಕಾರದ ಮುಂದಿಡುತ್ತಿದ್ದಾರೆ. ದಂಪತಿ ನಡುವೆ ಹೆಚ್ಚು ಅನ್ಯೋನ್ಯತೆಯನ್ನು ಸೃಷ್ಟಿಸಲು, ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ಮನೆಯಲ್ಲಿ ಇಂಟರ್ನೆಟ್ ಮತ್ತು ವಿದ್ಯುತ್​ ಕಡಿತ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

Sex life

ಪ್ರೋತ್ಸಾಹಧನ

ದಂಪತಿಗಳ ಮೊದಲ ಡೇಟಿಂಗ್​ಗೆ ಸರ್ಕಾರದಿಂದ 5,000 ರೂಬಲ್ಸ್‌ಗಳವರೆಗೆ (ರೂ. 4,302) ನೀಡಲಾಗುತ್ತಿದೆ. ಅಲ್ಲದೆ, ಗರ್ಭಧಾರಣೆಯನ್ನು ಪ್ರೋತ್ಸಾಹಿಸುವ ಭಾಗವಾಗಿ ದಂಪತಿಗಳ ಮೊದಲ ರಾತ್ರಿಯ ಹೋಟೆಲ್ ವೆಚ್ಚವಾಗಿ 26,300 ರೂಬಲ್​ಗಳನ್ನು (ರೂ. 22,632) ಪಾವತಿಸಬೇಕೆಂದು ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಮನೆಕೆಲಸ ಮಾಡಲೆಂದು ಮನೆಯಲ್ಲೇ ಉಳಿದುಕೊಂಡು ಕೆಲಸಕ್ಕೆ ಗೃಹಿಣಿಯರಿಗೆ ಹಣ ಮತ್ತು ಪಿಂಚಣಿ ನೀಡುವುದು ಕೂಡ ಪ್ರಸ್ತಾಪಗಳಲ್ಲಿ ಸೇರಿದೆ.

ದೇಶದ ಜನಸಂಖ್ಯೆಯನ್ನು ಹೆಚ್ಚಿಸಲು ರಷ್ಯಾದ ಕೆಲವು ಪ್ರದೇಶಗಳಲ್ಲಿ ವಿಶೇಷ ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ. ಖಬರೋವ್ಸ್ಕ್​ನಲ್ಲಿ 18 ರಿಂದ 23 ವರ್ಷದೊಳಗಿನ ಯುವತಿಯರಿಗೆ ಮಗುವನ್ನು ಹೊಂದಲು ಪ್ರೋತ್ಸಾಹಕವಾಗಿ 900 ಪೌಂಡ್​ ಅಂದರೆ, 98,029 ರೂಪಾಯಿ ನೀಡಲಾಗುತ್ತದೆ. ಚೆಲ್ಯಾಬಿನ್ಸ್ಕ್‌ನಲ್ಲಿ 8,500 ಪೌಂಡ್‌ಗಳನ್ನು ಅಂದರೆ, 9.26 ಲಕ್ಷ ರೂಪಾಯಿ ಪಾವತಿಸಲಾಗುತ್ತದೆ.

ಸೆಕ್ಸ್ ಅಟ್ ವರ್ಕ್‌ಪ್ಲೇಸ್

ಇದಕ್ಕೂ ಮೊದಲು ರಷ್ಯಾದ ಸಚಿವ ಡಾ. ಯೆವ್ಗೆನಿ ಶೆಸ್ಟೊಪಲೋವ್ ಅವರು ರಷ್ಯನ್ನರು ತಮ್ಮ ಜೀವನದಲ್ಲಿ 'ಸೆಕ್ಸ್ ಅಟ್ ವರ್ಕ್‌ಪ್ಲೇಸ್' ಕಾರ್ಯಕ್ರಮವನ್ನು ಪರಿಚಯಿಸುವಂತೆ ಕೇಳಿಕೊಂಡರು. ಅಂದರೆ, ಕೆಲಸದ ವಿರಾಮದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಲಹೆ ನೀಡಿದ್ದಾರೆ. ಇನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ಹಾಗೂ ಕುಟುಂಬ ರಕ್ಷಣೆಗಾಗಿ ರಷ್ಯಾದ ಸಂಸತ್ತಿನ ಸಮಿತಿಯ ಮುಖ್ಯಸ್ಥರಾಗಿರುವ 68 ವರ್ಷದ ನೀನಾ ಒಸ್ಟಾನಿನಾ ಅವರು 'ಲೈಂಗಿಕ ಸಚಿವಾಲಯ' ರಚಿಸುವ ಅರ್ಜಿಯನ್ನು ಪರಿಗಣಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಸಚಿವಾಲಯ ರಚಿಸುವ ಪ್ರಸ್ತಾಪವನ್ನು GlawPR ಏಜೆನ್ಸಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ದಂಡವನ್ನು ವಿಧಿಸುವ ಹೊಸ ಕಾನೂನು

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಮಹಿಳಾ ಸಾರ್ವಜನಿಕ ವಲಯದ ಉದ್ಯೋಗಿಗಳಲ್ಲಿ ಸಮೀಕ್ಷೆಯನ್ನು ನಡೆಸಲಾಯಿತು. ಇದು ತುಂಬಾ ವೈಯಕ್ತಿಕ ಪ್ರಶ್ನೆಗಳನ್ನು ಒಳಗೊಂಡಿತ್ತು. ಯಾವಾಗ ಲೈಂಗಿಕವಾಗಿ ಸಕ್ರಿಯವಾಗಿರಬೇಕು ಮತ್ತು ಗರ್ಭನಿರೋಧಕವನ್ನು ಬಳಸಬೇಕು? ಬಂಜೆತನ ಅಥವಾ ಹಿಂದಿನ ಗರ್ಭಧಾರಣೆಯ ಅನುಭವಗಳು? ಮುಂಬರುವ ವರ್ಷದಲ್ಲಿ ನೀವು ಮಕ್ಕಳನ್ನು ಹೊಂದಲು ಯೋಜಿಸುತ್ತಿದ್ದೀರಾ ಎಂಬಂತಹ ಪ್ರಶ್ನೆಗಳನ್ನು ಸಹ ಇದು ಒಳಗೊಂಡಿತ್ತು. ಒಂದು ವೇಳೆ ಈ ಸಮೀಕ್ಷೆಯಲ್ಲಿ ಭಾಗವಹಿಸದವರು ಇದ್ದರೆ, ಅವರು ವೈದ್ಯರನ್ನು ಭೇಟಿ ಮಾಡಬೇಕು. ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಬೇಕು. ಮಕ್ಕಳಿಲ್ಲದಿರುವಿಕೆಯನ್ನು ಉತ್ತೇಜಿಸಿದರೆ ಸಾವಿರಾರು ಡಾಲರ್‌ಗಳಿಗೆ ಸಮಾನವಾದ ದಂಡವನ್ನು ವಿಧಿಸುವ ಹೊಸ ಕಾನೂನನ್ನು ರಷ್ಯಾದ ಸಂಸತ್ತು ಈ ಹಿಂದೆಯೇ ಚರ್ಚಿಸಿದೆ. ಮಕ್ಕಳಿಲ್ಲದಿರುವಿಕೆಯನ್ನು ಉತ್ತೇಜಿಸುವ ಮಾಧ್ಯಮ ಮತ್ತು ಆನ್‌ಲೈನ್ ವಿಷಯವನ್ನು ಗುರಿಯಾಗಿಸಲು ಇಂತಹ ಕಾನೂನು ಮಾಡಲು ಉದ್ದೇಶಿಸಲಾಗಿದೆ. ಇನ್ನು ಮಾಸ್ಕೋದಲ್ಲಿ ಮಹಿಳೆಯರಿಗೆ ಉಚಿತ ಫಲವತ್ತತೆ ಪರೀಕ್ಷಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, 20,000 ಜನರು ಇಲ್ಲಿಯವರೆಗೆ ಭಾಗವಹಿಸಿದ್ದಾರೆ.

ಇಪ್ಪತ್ತೈದು ವರ್ಷಗಳಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣ

ರಷ್ಯಾದ ಜನನ ಪ್ರಮಾಣವು ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಪ್ರಕಟಿತ ವರದಿಗಳ ಪ್ರಕಾರ, 2024ರ ಮೊದಲಾರ್ಧದಲ್ಲಿ ರಷ್ಯಾದಲ್ಲಿ 5,99,600 ಮಕ್ಕಳು ಜನಿಸಿದರು. ಈ ವರ್ಷ ಜನನ ಪ್ರಮಾಣವು ಕಳೆದ ವರ್ಷ ಇದೇ ಅವಧಿಗಿಂತ 16,000 ಕಡಿಮೆಯಾಗಿದೆ. ಇದು 1999ರ ನಂತರದ ಅತ್ಯಂತ ಕಡಿಮೆ ದರವಾಗಿದೆ. ಯೂಕ್ರೇನ್‌ನೊಂದಿಗಿನ ಸುದೀರ್ಘ ಯುದ್ಧದ ಸಮಯದಲ್ಲಿ ರಷ್ಯಾದಲ್ಲಿ ಈ ಜನಸಂಖ್ಯೆಯ ಕುಸಿತವು ಕಾಣುತ್ತಿದೆ. ಯುದ್ಧವು ಮೂರನೇ ವರ್ಷವನ್ನು ಮುಂದುವರೆಸಿದ್ದು, ಆರ್ಥಿಕವಾಗಿ ಮಾತ್ರವಲ್ಲದೆ ರಷ್ಯಾದ ಯುದ್ಧವು ಕೂಡ ಮಕ್ಕಳು ಹೊಂದುವಿಕೆ ಮೇಲೆ ಪರಿಣಾಮ ಬೀರುತ್ತಿದೆ. ಗಡಿ ಪ್ರದೇಶಗಳಲ್ಲಿ ಭದ್ರತಾ ಪರಿಸ್ಥಿತಿಯು ಅನಿಶ್ಚಿತವಾಗಿರುವುದರಿಂದ, ಕುಟುಂಬಗಳು ಮಕ್ಕಳನ್ನು ಹೊಂದುವ ಬಗ್ಗೆ ನಿರ್ಧಾರಗಳನ್ನು ವಿಳಂಬಗೊಳಿಸುತ್ತಿವೆ ಎಂದು ಯುರೇಷಿಯಾದ ದೇಶದ ವಿಶ್ಲೇಷಕ ಅಲೆಕ್ಸ್ ಕೊಚರೋವ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net