ಹಿಂದಿ ಕಿರುತೆರೆಯ ಅತಿದೊಡ್ಡ ಸ್ಟಾರ್ಗಳಲ್ಲಿ ನಟಿ ರೂಪಾಲಿ ಗಂಗೂಲಿ ಕೂಡ ಒಬ್ಬರು. “ಸಾರಾಭಾಯ್ ವರ್ಸಸ್ ಸಾರಾಭಾಯ್’, “ಅನುಪಮಾ’ ಸೇರಿ 25ಕ್ಕೂ ಹೆಚ್ಚು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ನಟಿಸಿರುವ ಅವರು, ಕೆಲ ಸಿನಿಮಾ, ವೆಬ್ಸರಣಿಗಳಲ್ಲೂ ಮಿಂಚಿದ್ದಾರೆ. ಕಳೆದ ಐದು ವರ್ಷಗಳಿಂದ “ಅನುಪಮಾ’ ಧಾರಾವಾಹಿಯಲ್ಲಿ ಟೈಟಲ್ ರೋಲ್ನಲ್ಲಿ ನಟಿಸುತ್ತಿರುವ ರೂಪಾಲಿ ಹಿಂದೆಂದಿಗಿಂತಲೂ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಆದರೆ, ಕೆಲ ದಿನಗಳಿಂದೀಚೆಗೆ ಅವರು ವಿವಾದದಿಂದಾಗಿ ಸುದ್ದಿಯಾಗುತ್ತಿದ್ದರು. ಅವರ ಮಲಮಗಳು ಇಶಾ ವರ್ಮಾ ನಮ್ಮ ಕುಟುಂಬ ಹಾಳು ಮಾಡಿದರು, ತಂದೆಯನ್ನು ಕಂಟ್ರೋಲ್ ಮಾಡುತ್ತಿದ್ದಾರೆ, ಹಲ್ಲೆ ನಡೆಸಿದ್ದಾರೆ ಅಂತೆಲ್ಲ ರೂಪಾಲಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಜತೆಗೆ ಮಲತಾಯಿಯ ವಿರುದ್ಧ ಮಾತನಾಡುತ್ತಾ ಇಶಾ ಸಾಲು ಸಾಲು ವಿಡಿಯೋಗಳನ್ನು ಜಾಲತಾಣದಲ್ಲಿ ಶೇರ್ ಮಾಡತೊಡಗಿದರು. ಇದರಿಂದಾಗಿ ಕೆರಳಿರುವ ರೂಪಾಲಿ, ಇಶಾ ವಿರುದ್ಧ 50 ಕೋಟಿ ರೂ. ಮಾನನಷ್ಟದ ಲಾಯರ್ ನೋಟಿಸ್ ಜಾರಿಗೊಳಿಸಿದ್ದಾರೆ.
“ಈ ರೀತಿಯ ಸುಳ್ಳು ಆರೋಪಗಳು ಮಾನಸಿಕವಾಗಿ ಘಾಸಿ ಉಂಟು ಮಾಡಿದ್ದು, ವೃತ್ತಿ ವಲಯದಲ್ಲೂ ದುಷ್ಪರಿಣಾಮ ಬೀರುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನೋಟಿಸ್ ಬೆನ್ನಲ್ಲೇ ಇಶಾ ಕೆಲ ವಿಡಿಯೋಗಳನ್ನು ಡಿಲೀಸ್ ಮಾಡಿದ್ದಾರೆ. ರೂಪಾಲಿ ಮತ್ತು ಅಶ್ವಿನ್ 2013ರಲ್ಲಿ ಮದುವೆಯಾಗಿದ್ದು, ಅವರಿಗೆ ರುದ್ರಾಂಶ್ ಎಂಬ ಮಗನಿದ್ದಾನೆ. ಅದಕ್ಕೂ ಮುನ್ನ ಅಶ್ವಿನ್, ಸಪ್ನಾ ಎಂಬುವರನ್ನು ವಿವಾಹವಾಗಿದ್ದು 2008ರಲ್ಲಿ ವಿಚ್ಛೇದನ ಪಡೆದಿದ್ದರು. ಅಶ್ವಿನ್ ಮತ್ತು ಸಪ್ನಾಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರು ನ್ಯೂ ಜೆರ್ಸಿಯಲ್ಲಿ ಸೆಟಲ್ ಆಗಿದ್ದಾರೆ.