ರಾಹುಲ್​ ಗಾಂಧಿ ಹೆಚ್ಚಾಗಿ ವೈಟ್​ ಟೀ-ಶರ್ಟ್​ ಧರಿಸುವುದು ಏಕೆ ಗೊತ್ತಾ?; ಇದರ ಹಿಂದಿದೆ ಒಂದು ಬಲವಾದ ಕಾರಣ

Rahul Gandhi
Published on

ನವದೆಹಲಿ: ಜೂನ್​ 19ರಂದು 54ನೇ ವಸಂತಕ್ಕೆ ಕಾಲಿಟ್ಟ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸರಳವಾಗಿ ತಮ್ಮ ಜನುಮದಿನವನ್ನು ಆಚರಿಸಿಕೊಂಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ ತಮ್ಮ ಜನುಮದಿನವನ್ನು ಆಚರಿಸಿಕೊಂಡ ಬಳಿಕ #WhiteTshirtArmy ಎಂಬ ಅಭಿಯಾನವನ್ನು ಶುರು ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೆಚ್ಚಾಗಿ ಬಿಳಿ ಬಣ್ಣದ ಟೀ-ಶರ್ಟ್​ಅನ್ನು ಧರಿಸುವುದನ್ನು ನೋಡಬಹುದಾಗಿದೆ. ಈ ಬಗ್ಗೆ ಅನೇಕರು ಪ್ರಶ್ನಿಸಿದ್ದು, ರಾಹುಲ್​ ಗಾಂಧಿ ಈವರೆಗೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಈ ಬಗ್ಗೆ ಮಾತನಾಡಿರುವ ರಾಹುಲ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಉತ್ತರಿಸಿದ್ದಾರೆ.

ಮೊದಲಿಗೆ ನನ್ನ ಜನುಮದಿನದ ಪ್ರಯುಕ್ತ ಶುಭಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ಯಾವಾಗಲೂ 'ಬಿಳಿ ಟೀ-ಶರ್ಟ್​' ಅನ್ನು ಏಕೆ ಧರಿಸುತ್ತೇನೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಿರುತ್ತಾರೆ. ಬಿಳಿ ಬಣ್ಣದ ಟೀ-ಶರ್ಟ್​ ನನಗೆ ಪಾರದರ್ಶಕತೆ, ಘನತೆ ಮತ್ತು ಸರಳತೆಯನ್ನು ಸಂಕೇತಿಸುತ್ತದೆ. ಹೀಗಾಗಿ ನಾನು ಹೆಚ್ಚು ಬಿಳಿ ಬಣ್ಣದ ಟಿ-ಶರ್ಟ್​ಗಳನ್ನು ಧರಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ #WhiteTshirtArmy ಬಳಸಿ ಮತ್ತು ವೀಡಿಯೋ ಮಾಡುವ ಮೂಲಕ ನನಗೆ ತಿಳಿಸಿ. ನಾನು ನಿಮಗೆ ಬಿಳಿ ಟೀ-ಶರ್ಟ್​ ಅನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ರಾಹುಲ್‌ ಗಾಂಧಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

1970 ರ ಜೂನ್ 19 ರಂದು ಜನಿಸಿದ ರಾಹುಲ್ ಗಾಂಧಿ ಅವರು 5 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. 2004ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ ರಾಹುಲ್​ ಗಾಂಧಿ ಉತ್ತರ ಪ್ರದೇಶದ ಅಮೇಥಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದರು. 2022 ರ ಸೆಪ್ಟೆಂಬರ್‌ ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ನಡೆಸಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಭಾರತ್​ ಜೋಡೋ ನ್ಯಾಯ್​​ ಯಾತ್ರಾ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net