ಯಾರು ಈ ರೇಣು ದೇವಿ ?

Renu Devi
Published on

ಪಟನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಬಿಜೆಪಿಯಿಂದ ಈ ಬಾರಿ ಇಬ್ಬರು ಉಪಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗಿದ್ದು, ಸುಶೀಲ್ ಕುಮಾರ್ ಮೋದಿ ಅವರನ್ನು ಕೈಬಿಡಲಾಗಿದೆ. ಈ ಇಬ್ಬರು ಉಪಮುಖ್ಯಮಂತ್ರಿಗಳ ಪೈಕಿ ಒಬ್ಬರು ರೇಣು ದೇವಿ. ಅವರು ಯಾರೆಂಬ ಕುತೂಹಲ ಸಹಜವೇ.

ಬಿಹಾರದಲ್ಲಿ ಮಹಿಳಾ ಮೋರ್ಚಾದೊಂದಿಗೆ ಕೆಲಸ ಆರಂಭಿಸಿದ ರೇಣು ದೇವಿ ಕಳೆದ 32 ವರ್ಷಗಳಿಂದ ಪಕ್ಷದ ಕೆಲಸ ಮಾಡುತ್ತ ಬಂದಿದ್ದಾರೆ. 62 ವರ್ಷ ವಯಸ್ಸಿನ ರೇಣು ದೇವಿ ನೋನಿಯಾ ಸಮುದಾಯದವರು. ಇದು ಬಿಹಾರದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಬೆಟ್ಟಿಯ ಕ್ಷೇತ್ರವನ್ನು ನಾಲ್ಕನೇ ಸಲ ಪ್ರತಿನಿಧಿಸುತ್ತಿರುವ ಜನಪ್ರತಿನಿಧಿ ಇವರು. ಮೊಟ್ಟಮೊದಲ ಸಲ 1995ರಲ್ಲಿ ನೌತಾನ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರು. ಅಂದು ಸೋತ ಅವರು 2000, 2005, 2010ರಲ್ಲಿ ಬೆಟ್ಟಿಯ ಕ್ಷೇತ್ರದಿಂದ ಗೆಲುವನ್ನು ಕಂಡಿದ್ದಾರೆ. ಇದೀಗ 2020ರಲ್ಲಿ ಮತ್ತೆ ಗೆದ್ದು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ರೇಣು ದೇವಿ 1981ರಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ದು, ಅಂದು ಅವರು ಎನ್​ಜಿಒ ಒಂದರ ಮೂಲಕ ಸಮಾಜ ಕಾರ್ಯದಲ್ಲಿ ತೊಡಗಿದ್ದರು. 1988ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡು ಮಹಿಳಾ ಮೋರ್ಚಾದ ಕೆಲಸ ಶುರುಮಾಡಿದರು. ಮರುವರ್ಷವೇ ಬಿಜೆಪಿಯ ಚಂಪಾರಣ್​ ಪ್ರಾಂತ್ಯದ ಮಹಿಳಾ ಮೋರ್ಚಾ ಮುಖ್ಯಸ್ಥರಾದರು. 1993ರಲ್ಲಿ ರಾಜ್ಯ ಮಹಿಳಾ ಮೋರ್ಚಾ ಮುಖ್ಯಸ್ಥರಾದರು. 1996ರಲ್ಲಿ ಅದೇ ಹೊಣೆಗಾರಿಕೆ ಮತ್ತೆ ಸಿಕ್ಕಿತ್ತು. 2014ರಲ್ಲಿ ಪಕ್ಷ ಉಪಾಧ್ಯಕ್ಷರಾಗಿ ನೇಮಕಗೊಂಡರು.

ರೇಣು ದೇವಿ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸೇರ್ಪಡೆಯಾಗಿದ್ದಲ್ಲ. ಇದಕ್ಕೂ ಮೊದಲು 2005 ಮತ್ತು 2009ರಲ್ಲಿ ನಿತೀಶ್ ಕುಮಾರ್ ಅವರ ಸಚಿವ ಸಂಪುಟದಲ್ಲಿ ಕ್ರೀಡೆ ಮತ್ತು ಸಂಸ್ಕೃತಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅಮಿತ್ ಷಾ ಬಿಜೆಪಿ ಅಧ್ಯಕ್ಷರಾಗಿದ್ದಾಗ ರೇಣು ದೇವಿ ಕೂಡ ಅವರ ತಂಡದ ಸದಸ್ಯೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಬಿಹಾರದ ಅತ್ಯಂತ ಹಿಂದುಳಿದ ನೋನಿಯಾ ಜಾತಿಗೆ ಸೇರಿದ ರೇಣು ದೇವಿ 1959ರ ನವೆಂಬರ್ 1ರಂದು ಜನಿಸಿದರು. 62 ವರ್ಷ ವಯಸ್ಸಿನ ರೇಣು ದೇವಿ ಎರಡು ಮಕ್ಕಳ ತಾಯಿ. ಇದೀಗ ರಾಜ್ಯದ ಉಪಮುಖ್ಯಮಂತ್ರಿಯಾಗಿ ರಾಜ್ಯ ಮುನ್ನಡೆಸುವ ಹೊಣೆಗಾರಿಕೆ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net