VIDEO| ಪೂಜೆ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಕಾಂಗ್ರೆಸ್ ಮಾಜಿ ​ಶಾಸಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

Vinod daga 1
Published on

ಬೆತುಲ್​: ಪೂಜೆ ಮಾಡುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಮಧ್ಯಪ್ರದೇಶದ ಮಾಜಿ ಶಾಸಕ ಹಾಗೂ ಕಾಂಗ್ರೆಸ್​ ನಾಯಕ ವಿನೋದ್​ ದಗಾ ಮೃತಪಟ್ಟಿದ್ದಾರೆ. ನವೆಂಬರ್​ 12ರಂದು ಘಟನೆ ನಡೆದಿದ್ದು, ಹೃದಯಾಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ವಿನೋದ್​ ದಗಾ ಮಧ್ಯಪ್ರದೇಶದ ಬೆತುಲ್​ ಕ್ಷೇತ್ರದ ಮಾಜಿ ಶಾಸಕರು. ಕಳೆದ ಗುರುವಾರ ಬೆಳಗ್ಗೆ ಪ್ರತಿನಿತ್ಯದಂತೆ ಬೆತುಲ್​ನಲ್ಲಿರುವ ಜೈನ್​ ದದಾವಡಿ (ಜೈನರ ದೇವಸ್ಥಾನ)ಗೆ ಪೂಜೆಗೆಂದು ತೆರಳಿದ್ದರು. ದೇವಸ್ಥಾನದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ದಾಖಲಾಗಿರುವಂತೆ ದಗಾ ಅವರು ವಿಗ್ರಹಕ್ಕೆ ಪೂಜೆ ಮಾಡುತ್ತಲೇ ಹೃದಯಾಘಾತದಿಂದ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ದಗಾ ಅವರನ್ನು ಇತ್ತೀಚೆಗಷ್ಟೇ ಮೆಘಾನ್​ ಉಪಚುನಾವಣೆಯ ಉಸ್ತುವಾರಿಯನ್ನಾಗಿ ಕಾಂಗ್ರೆಸ್​ ನೇಮಿಸಿತ್ತು. ಘಟನೆ ನಡೆದ ಹಿಂದಿನ ದಿನ ದಗಾ ಅವರು ಭೋಪಾಲ್​ನಲ್ಲಿ ಸಭೆ ಮುಗಿಸಿಕೊಂಡು ಬೆತುಲ್​ಗೆ ಮರಳಿದ್ದರು.

ರಾಜ್ಯ ಕಾಂಗ್ರೆಸ್​ನಲ್ಲಿ ದಗಾ ಅವರು ಅನೇಕ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಕೇಂದ್ರ ಸಹಕಾರ ಬ್ಯಾಂಕ್​ನ ಅಧ್ಯಕ್ಷರು ಆಗಿದ್ದರು. ಸದಾ ಇನ್ನಬ್ಬರೊಂದಿಗೆ ಬೆರೆಯುವ, ಸರಳ ಮತ್ತು ಹರ್ಷಚಿತ್ತದ ನಾಯಕನಾಗಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. ಇಂತಹ ನಾಯಕನ ಸಾವು ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಕಾಂಗ್ರೆಸ್​ ನಾಯಕರು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net