ಮೈತ್ರಿ ಯಾರಿಗೆಷ್ಟು ಲಾಭ? ಜೆಡಿಎಸ್​ಗೆ 4 ಕ್ಷೇತ್ರ, ಬಿಜೆಪಿಗೆ 8-10 ಕಡೆ ಅನುಕೂಲ ನಿರೀಕ್ಷೆ

JDS BJP
Published on

| ವಿಲಾಸ ಮೇಲಗಿರಿ ಬೆಂಗಳೂರು

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ನಿಕ್ಕಿಯಾಗಿದೆ. ಈಗ ಏನಿದ್ದರೂ ಸೀಟು ಹಂಚಿಕೆ ಕಸರತ್ತು ನಡೆಯಬೇಕಿದೆ. ಆದರೆ, ಈ ಮೈತ್ರಿಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಲೆಕ್ಕಾಚಾರ ಎರಡೂ ಕಡೆಯಲ್ಲೂ ನಡೆಯುತ್ತಿವೆ. 26 ಸ್ಥಾನಗಳಿರುವ ಬಿಜೆಪಿಗೆ ಈ ಮೈತ್ರಿ ಅಗತ್ಯವಿತ್ತೆ? ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದಾಗಲೂ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದ ಜೆಡಿಎಸ್​ಗೆ ಈ ಬಾರಿ ಆಗುವ ಲಾಭದ ಪ್ರಮಾಣವೆಷ್ಟು ಮತ್ತು ಹೇಗೆ ಎಂಬ ಜಿಜ್ಞಾಸೆ ಶುರುವಾಗಿದೆ.

ದಿನೇದಿನೆ ಲೋಕಸಭೆ ಚುನಾವಣೆ ಕಾವು ಏರುತ್ತಿದ್ದು, ಈ ವಾರ ಜೆಡಿಎಸ್ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ. ತನ್ನ ಪ್ರಾಬಲ್ಯವಿರುವ ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಈ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಡುವ ಸಾಧ್ಯತೆಯಿದೆ. ಈ ಮೈತ್ರಿಯಿಂದ ಜೆಡಿಎಸ್​ಗೆ ಹೆಚ್ಚು ಲಾಭ ಎಂಬ ಮಾತು ಒಂದೆಡೆ ಕೇಳಿ ಬಂದರೆ, ಬಿಜೆಪಿಗೆ ಭರಪೂರ ಲಾಭವಾಗಲಿದೆ ಎಂಬ ವಾದವೂ ಇದೆ. ಹಾಸನ ಕ್ಷೇತ್ರಕ್ಕೆ ಸೀಮಿತವಾಗಿದ್ದ ಜೆಡಿಎಸ್, ಬಿಜೆಪಿ ಬೆಂಬಲದಿಂದ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಬಹುದು ಎಂಬುದು ಒಂದು ಲೆಕ್ಕ.

ಆದರೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಯಚೂರು, ಕಲಬುರಗಿ, ಬೀದರ್, ವಿಜಯಪುರ, ಮೈಸೂರು, ಚಾಮರಾಜನಗರ, ಬಳ್ಳಾರಿಯಲ್ಲಿ ಬಿಜೆಪಿಗೆ ಜೆಡಿಎಸ್ ಬಲ ಸಿಗಲಿದೆ ಎಂಬ ಅಂಶವನ್ನು ಗಮನದಲ್ಲಿಟ್ಟು ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 2023ರ ವಿಧಾನಸಭೆ ಚುನಾವಣೆಯ ಮತಗಳಿಕೆ ಪ್ರಮಾಣವನ್ನು ಆಧರಿಸಿಯೇ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜತೆ ಮೈತ್ರಿಗೆ ಮುದ್ರೆ ಒತ್ತಿದೆ ಎಂದು ಹೇಳಲಾಗುತ್ತಿದೆ.

ಕಲ್ಯಾಣ ಕರ್ನಾಟಕದಲ್ಲೂ ಬಲಾಢ್ಯ

ಬೀದರ್​ನಲ್ಲಿ ಸೂರ್ಯಕಾಂತ್ ನಾಗಮಾರಪಲ್ಲಿ 58 ಸಾವಿರಕ್ಕೂ ಹೆಚ್ಚು ಮತ ಪೆಡೆದು ರನ್ನರ್ ಅಪ್ ಆಗಿದ್ದರು. ಬೀದರ್ ದಕ್ಷಿಣದಲ್ಲಿ ಬಂಡೆಪ್ಪ ಕಾಶೆಂಪುರ 3ನೇ ಸ್ಥಾನದಲ್ಲಿದ್ದರೂ 36 ಸಾವಿರ ಮತ ಗಳಿಸಿದ್ದರು. ಹುಮನಾಬಾದ್​ನಲ್ಲಿ ಸಿಎಂ ಫಯಾಜ್ ಅಂದಾಜು 26 ಸಾವಿರ ಮತ ಗಳಿಸಿ 3ನೇ ಸ್ಥಾನದಲ್ಲಿದ್ದರು. ವಿಜಯಪುರ ಜಿಲ್ಲೆಯ ಇಂಡಿ ಜೆಡಿಎಸ್​ನ ರಾಜುಗೌಡ ಪಾಟೀಲ್ ಹಿಡಿತದಲ್ಲಿದೆ. ದೇವರಹಿಪ್ಪರಗಿಯಲ್ಲಿ ಭೀಮನಗೌಡ ಪಾಟೀಲ್ ಜೆಡಿಎಸ್​ನಿಂದ ಗೆದ್ದಿದ್ದಾರೆ.

ಹಳೇ ಮೈಸೂರಿನಲ್ಲಿ ಜೆಡಿಸ್ ಬಲ

ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿಯಲ್ಲಿ ಜೆಡಿಎಸ್ ಭದ್ರವಾಗಿದೆ. ಮುಳಬಾಗಿಲಿನಲ್ಲಿ ಜೆಡಿಎಸ್​ನ ಸಮೃದ್ಧಿ ವಿ. ಮಂಜುನಾಥ್ ಗೆದ್ದಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಜೆಡಿಎಸ್​ನ ಶಾರದಾ ಪೂರ್ಯನಾಯ್ಕ್​ ಹಿಡಿತದಲ್ಲಿದೆ. ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಗೌಡ 63 ಸಾವಿರ ಮತ ಗಳಿಸಿ ರನ್ನರ್ ಅಪ್ ಆಗಿದ್ದರು. ಕಡೂರಿನಲ್ಲಿ ವೈ.ಎಸ್. ವಿ.ದತ್ತಾ ಒಳ್ಳೆಯ ಮತ ಗಿಟ್ಟಿಸಿದ್ದರು. ಮೂಡಿಗೆರೆ, ಶೃಂಗೇರಿಯಲ್ಲೂ ಜೆಡಿಎಸ್ ಅಭ್ಯರ್ಥಿಗಳು ಮೂರನೇ ಸ್ಥಾನದಲ್ಲಿದ್ದರು. ಈ ಎಲ್ಲ ಬಲಾಬಲವನ್ನು ಲೆಕ್ಕ ಹಾಕಿ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜತೆ ಸಖ್ಯ ಬೆಳೆಸಿದೆ ಎನ್ನಲಾಗಿದೆ.

ಎಲ್ಲೆಲ್ಲಿ ಏನೇನು? ಏನು ಲೆಕ್ಕಾಚಾರ?

ಚಿತ್ರದುರ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಶಿರಾ, ಪಾವಗಡ, ಹಿರಿಯೂರು, ಚಳ್ಳಕೆರೆ ಕ್ಷೇತ್ರಗಳಲ್ಲಿ 2023 ರ ಚುನಾವಣೆಯಲ್ಲಿ ಜೆಡಿಎಸ್ ಪ್ರಬಲ ಪೈಪೋಟಿ ನೀಡಿದೆ. ರಾಯಚೂರು ಲೋಕಸಭೆ ಕ್ಷೇತ್ರದ ರಾಯಚೂರು, ಮಾನ್ವಿ, ಸಿಂಧನೂರು, ಲಿಂಗಸಗೂರು ಕ್ಷೇತ್ರದಲ್ಲಿ ಜೆಡಿಎಸ್ 3ನೇ ಸ್ಥಾನದಲ್ಲಿದೆ. ಆದರೆ, ಲಿಂಗಸಗೂರು ಮತ್ತು ಸಿಂಧನೂರಿನಲ್ಲಿ ಜೆಡಿಎಸ್ ಹೆಚ್ಚು ಮತಗಳಿಸಿದೆ. ದೇವದುರ್ಗದಲ್ಲಿ ಜೆಡಿಎಸ್​ನ ಕರೆಮ್ಮ ಗೆಲುವು ಸಾಧಿಸಿದ್ದಾರೆ. ಬಳ್ಳಾರಿ ಲೋಕಸಭೆ ವ್ಯಾಪ್ತಿಯ ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್​ನ ನೇಮಿರಾಜ್ ನಾಯ್ಕ್​ ಗೆದ್ದಿದ್ದಾರೆ. ಕಲಬುರಗಿ ಲೋಕಸಭೆ ಕ್ಷೇತ್ರದ ಜೇವರ್ಗಿಯಲ್ಲಿ ದೊಡ್ಡನಗೌಡ ಪಾಟೀಲ್ 60 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net