ಡಿಮ್ಯಾಂಡಪ್ಪೋ ಡಿಮ್ಯಾಂಡ್​! ವಿಡಿಯೋ ವೈರಲ್​ ಆಗುತ್ತಿದ್ದಂತೆ ಜೂನಿಯರ್ ರಜಿನಿಕಾಂತ್​​ಗೆ ಒಲಿಯಿತು ಲಕ್​

Rajinikanth
Published on

ಕೊಚ್ಚಿ: ಒಂದೇ ರೂಪದ ಏಳು ಮಂದಿ ಈ ಜಗತ್ತಿನಲ್ಲಿ ಇರುತ್ತಾರೆ ಎಂಬ ನಂಬಿಕೆಯಿದೆ. ಅದರಲ್ಲೂ ಸೆಲೆಬ್ರಿಟಿಗಳ ವಿಚಾರಕ್ಕೆ ಬಂದಾಗ ಅವರಂತೆಯೇ ಕಾಣುವ ಮತ್ತೊಬ್ಬರನ್ನು ನೋಡುವುದೇ ಒಂದು ಖುಷಿ. ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​, ರವಿಚಂದ್ರನ್​, ಅಂಬರೀಷ್​, ಸಲ್ಮಾನ್​ ಖಾನ್​, ಶಾರುಖ್​ ಖಾನ್​, ಐಶ್ವರ್ಯಾ ರೈ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಹೋಲುವ ಮತ್ತೊಬ್ಬರನ್ನು ನೋಡಿದ್ದೇವೆ. ಇದೀಗ ಸೂಪರ್​ ರಜಿನಿಕಾಂತ್​ರನ್ನೇ ಹೋಲುವ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಸಂಚಲನ ಸೃಷ್ಟಿಸಿದ್ದಾರೆ.

ಸದ್ಯ ಜೂನಿಯರ್​ ರಜಿನಿಕಾಂತ್​ ಎನಿಸಿಕೊಂಡಿರುವ ವ್ಯಕ್ತಿಯ ಹೆಸರು ಸುಧಾಕರ್​ ಪ್ರಭು. ಇವರು ಫೋರ್ಟ್​ ಕೊಚ್ಚಿಯ ಪಟ್ಟಾಲಂ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಸಿನಿಮಾ ಹೊರತಾಗಿ ರಜಿನಿಕಾಂತ್​ ಅವರು ಸಾಮಾನ್ಯ ಜೀವನದಲ್ಲಿ ಇರುವಂತೆ ಬೋಳು ತಲೆ ಮತ್ತು ಬಿಳಿ ಗಡ್ಡದ ರೂಪವನ್ನೇ ಸುಧಾಕರ್​ ಪ್ರಭು ಹೋಲುತ್ತಾರೆ. ನೋಡಿದವರು ಒಂದು ಕ್ಷಣ ಹುಬ್ಬೇರಿಸುವುದಂತೂ ಖಚಿತ. ಅಷ್ಟೊಂದು ಸಾಮ್ಯತೆ ಇಬ್ಬರ ನಡುವೆಯೂ ಇದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಸುಧಾಕರ್​ ಪ್ರಭು, ಒಂದು ಶಾರ್ಟ್ಸ್​ ಮತ್ತು ಶರ್ಟ್ಸ್​ ಧರಿಸಿದ್ದು, ರಜಿನಿಕಾಂತ್​ ಮ್ಯಾನರಿಸಂ ನಕಲಿ ಮಾಡಿ, ಕೆಲವರ ಜತೆ ಮಾತನಾಡುತ್ತಿದ್ದಾರೆ. ವಿಡಿಯೋವನ್ನು @despoters_12345 ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, ಈವರೆಗೂ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಮೊದಲು ಪತ್ತೆಹಚ್ಚಿದ್ದು ಯಾರು? ಅಂದಹಾಗೆ ಸುಧಾರಕ್​ ಪ್ರಭು ಅವರನ್ನು ಮಲಯಾಳಂ ನಟ ಹಾಗೂ ನಿರ್ದೇಶಕ ನಾದಿರ್ಷಾ ಮೊದಲು ಪತ್ತೆಹಚ್ಚಿದರು. ಸಿನಿಮಾ ಚಿತ್ರೀಕರಣಕ್ಕಾಗಿ ಕೊಚ್ಚಿಯಲ್ಲಿ ಇರಬೇಕಾದರೆ ಸುಧಾಕರ್​ ಅವರನ್ನು ಕಂಡು ಅವರೊಡನೆ ಮಾತನಾಡಿ, ಫೋಟೋ ಕ್ಲಿಕ್ಕಿಸಿಕೊಂಡು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ವೈರಲ್​ ವಿಡಿಯೋದಿಂದ ಲಕ್​ ರಜಿನಿಕಾಂತ್ ಹೋಲಿಕೆ ಇರುವ ಸುಧಾಕರ್​ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಸುಧಾಕರ್​ ಅವರ ಲಕ್​ ಬದಲಾಗಿದೆ. ಜನರು ಅವರನ್ನು ಗುರುತಿಸಲು ಶುರುವಾಗಿದ್ದು, ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಅಲ್ಲದೆ, ಕೇರಳಾದ್ಯಂತ ನಡೆಯುವ ಸಾಕಷ್ಟು ಕಾರ್ಯಕ್ರಮ ಮತ್ತು ಸಮಾರಂಭಗಳಿಗೆ ಸುಧಾಕರ್​ ಅವರನ್ನು ಆಹ್ವಾನಿಸಲಾಗುತ್ತಿದೆ. ಇದರಿಂದ ಅವರಿಗೂ ಸಹ ಖುಷಿಯಾಗಿದೆ. ರಜಿನಿಯಂತೆ ಕಾಣುವ ಪಾಕ್​ ಅಭಿಮಾನಿ ಪಾಕಿಸ್ತಾನದ ನಿವೃತ್ತ ಸರ್ಕಾರಿ ನೌಕರ ರೆಹಮತ್​​ ಗ್ಯಾಶ್ಕೊರಿ ನೋಡಲು ಹೆಚ್ಚು ಕಡಿಮೆ ರಜಿನಿಕಾಂತ್​ ರೀತಿಯೇ ಇದ್ದಾರೆ. ಹೇರ್​ ಸ್ಟೈಲ್​ ಸಹ ಹಾಗೇ ಇದೆ. ಹೀಗಾಗಿ ಇವರನ್ನು ಪಾಕಿಸ್ತಾನದ ರಜಿನಿಕಾಂತ್​ ಎಂದು ಕರೆಯುತ್ತಾರೆ. ಅವರ ವಿಡಿಯೋ ಕಳೆದ ವರ್ಷ ವೈರಲ್​ ಆಗಿ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ನನ್ನ ನಡಿಗೆ, ದೇಹ ಭಾಷೆ, ಹೇರ್ ಸ್ಟೈಲ್ ಮತ್ತು ರೈಫಲ್ ಶೂಟಿಂಗ್ ಎಲ್ಲವೂ ರಜಿನಿಕಾಂತ್​ ರೀತಿಯೇ ಇದೆ ಎಂದು ಜನರು ಹೇಳುತ್ತಿದ್ದರು ಎಂದು ಸ್ವತಃ ರೆಹಮತ್ ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net