ಹಿರಿಯರು ಯಾರು?

WhatsApp Image 2024-05-19 at 10.34.23 PM
Published on

| ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡಿ (ಅಧ್ಯಾತ್ಮ ವಿದ್ಯಾಶ್ರಮ, ಆದಿಶಕ್ತಿ ನಗರ, ಗದಗ)

ಹಿರಿಯರು ಯಾರು ಎಂಬುದನ್ನು ಚನ್ನಬಸವಣ್ಣವರ ವಚನದಲ್ಲಿ ಕೇಳಿ: ‘ಅಜಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೆ? / ಹುತ್ತೇರಿ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೆ?/ ಅನುವನರಿದು ಘನವಬೆರಿಸಿ ಹಿರಿದು ಕಿರಿದೆಂಬ ಭೇದವ ಮರೆದು/ಕೂಡಲಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲಪ್ಪ ಹಿರಿತನ ನಮ್ಮ ಮಹದೇವಿಯಕ್ಕಂಗಾಯ್ತು’ ಅನಂತ ವರ್ಷದವರೆಗೆ ತಪಸ್ಸು ಮಾಡಿದವರಾಗಲಿ, ದೀರ್ಘಕಾಲ ಜೀವಿಸಿದವರಾಗಲಿ ಹಿರಿಯರಲ್ಲ. ಹಾಗಾದರೆ ಯಾರು ಹಿರಿಯರು? ‘ಅನುವನರಿದು ಘನವ ಬೆರೆಸಿ, ಹಿರಿದು ಕಿರಿದು ಎಂಬ ಭೇದವ ಮರೆದವರು, ದೇವನಲ್ಲಿ ಸಮರಸ ಹೊಂದಿದವರು. ಹಾಗಂದರೇನು?

1. ಅನುವನರಿದವರು- ಅಂದರೆ ವಿಶ್ವದ ಒಳಹೊರಗೆ ಎಲ್ಲೆಡೆಯಲ್ಲಿಯೂ ತುಂಬಿರುವ ಆ ದೇವನನ್ನು ಅರಿತವರು. ನಮ್ಮೊಳಗೆ ಪರಮಾತ್ಮನಿದ್ದರೂ ನಮಗೆ ಗೊತ್ತಾಗದಂತೆ ಇದ್ದಾನೆ. ಈ ಪರಿಯನ್ನು ನಮ್ಮಲ್ಲಿಯೇ ಅರಿಯಬೇಕಿದೆ. ನಾದಸ್ವರೂಪನಾದ ಪರಮಾತ್ಮ ನನ್ನು, ಬಿಂದು ಸ್ವರೂಪನಾದ ಶರಣನು ಗ್ರಹಿಸಿಕೊಳ್ಳುವದರಿಂದ ಬಿಂದು-ನಾದವನ್ನೂ ನುಂಗಿದಂತೆ. ಪರಮಾತ್ಮನನ್ನು ಶರಣನು ತನ್ನಿಂದ ಭಿನ್ನವಾಗಿ ಅರಸಲು ಆಗದು. ಸತ್ಯವಸ್ತುವನ್ನು ತಿಳಿದವರೇ ಹಿರಿಯರು. ಅತೀಂದ್ರಿಯ ವಸ್ತುವನ್ನು ಇಂದ್ರಿಯದ ಪಾತ್ರೆಯಲ್ಲಿ ಅಳೆಯಲಾಗದು. ಅದು ಅತೀಂದ್ರಿಯ. ಅದನ್ನು ಗುರುಶಾಸ್ತ್ರಾದಿಗಳ ಉಪದೇಶದಿಂದ ತಿಳಿದವರು ಹಿರಿಯರು. ಇವರನ್ನೇ ‘ಅಧ್ಯಾತ್ಮ ಚೇತಸಃ’ ಎಂದಿದ್ದಾರೆ.

2. ಘನವಬೆರೆಸಿದವರು- ಅಂದರೆ ಪರಮಾತ್ಮನು ಮನಸ್ಸಿನಲ್ಲಿ ತುಂಬಿಕೊಂಡಿರುವಾಗ, ಈ ದೇಹದ ಭಾವ ಮರೆಯಾಗುತ್ತದೆ. ವಿಷಯವೃತ್ತಿ ಅಡಗಿ, ಪರಮಾನಂದದ ಪರಿಮಳ ಸೂಸುತ್ತದೆ. ಆಗ ಅನಾದಿ-ಅನಂತವಾದ, ದೇಶ, ಕಾಲ-ವಸ್ತು, ಪರಿಚ್ಛಿನ್ನ ರಹಿತವಾದ, ವಿಶ್ವದ ಆಧಾರ-ಅಧಿಷ್ಠಾನ ಘನಸ್ವರೂಪವೇ ನಾನಿದ್ದೇನೆ ಎಂಬ ಅರಿವು ಉಳ್ಳವರೇ ಅಧ್ಯಾತ್ಮದಲ್ಲಿ ಹಿರಿಯರು. ‘ಸಾಕ್ಷಿ ಸತ್ತಿತ್ತು ಪತ್ರಬೆಂದಿತ್ತು ಲೆಕ್ಕ ತುಂಬಿತ್ತು, ಜೀವ ಜೀವಿತದ ಆಶೆ ನಿಂದುದು ಭಾಷೆ ಹೋಯಿತ್ತು, ದೇಶವೆಲ್ಲವರಿಯೆ ಎನ್ನದೇವ ಚನ್ನಮಲ್ಲಕಾರ್ಜುನನ ನಂಬಿ ಹಂಬಲ ಮರೆದೆ.’ ಪರಮಾತ್ಮನನ್ನು ಅರಿತು ಬೆರೆಯಲು, ನಾವು ಭಾವಾತೀತರಾಗಿ, ದೇಹಾತೀತರಾಗಿ ನಿಂತಾಗ ಮಾತ್ರ ಸಾಧ್ಯ. ಆ ಸ್ಥಿತಿಯನ್ನು ಸಾಧಿಸಿದವರೇ ಘನವ ಬೆರೆಸಿದ ಹಿರಿಯರು. ಆ ಸ್ಥಿತಿಯು ಮಹಾದೇವಿಯಕ್ಕನಿಗೆ ಸಾಧಿಸಿತ್ತು ಎಂಬುದನ್ನು ಚನ್ನಬಸವಣ್ಣವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net