

ಬೆಂಗಳೂರು: ನಿನ್ನೆ (ಮೇ.18) ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯ ಅತ್ಯಧ್ಭುತ ಅಭಿಮಾನಿಗಳನ್ನು ಹೊಂದಿರುವ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ 27 ರನ್ಗಳಿಂದ ಆರ್ಸಿಬಿ ಭರ್ಜರಿ ಜಯ ಗಳಿಸಿತು. ಈ ಐತಿಹಾಸಿಕ ಗೆಲುವು ಸ್ಟೇಡಿಯಂನಲ್ಲಿ ಕುಳಿತ್ತಿದ್ದ ಬೆಂಗಳೂರು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಲ್ಲದೇ ಟಿವಿ ಮುಂದಿದ್ದ ವೀಕ್ಷಕರನ್ನು ಸಂಭ್ರಮಿಸುವಂತೆ ಮಾಡಿತು. ಈ ಮ್ಯಾಚ್ನಲ್ಲಿ ಯಾವುದೇ ಕಾರಣಕ್ಕೂ ಆರ್ಸಿಬಿ ಸಿಎಸ್ಕೆ ತಂಡವನ್ನು ಮಣಿಸಿ, ಪ್ಲೇಆಫ್ ಹೋಗಲು ಸಾಧ್ಯವೇ ಇಲ್ಲ ಎಂದು ಸವಾಲು ಹಾಕಿದ್ದವರೆಲ್ಲಾ ಇದೀಗ ತಮ್ಮ ನೆರಳು ಸಹ ಕಾಣಿಸಿದಂತೆ ಮರೆಯಾಗಿದ್ದಾರೆ.
27 ರನ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ತವರಿನಲ್ಲಿಯೇ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಎಲ್ಲಿಲ್ಲದ ಸಂಭ್ರಮ, ಸಡಗರ ಆವರಿಸಿಕೊಂಡಿತು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಹಾಗೂ ನಿಯತ್ತಿನ ಅಭಿಮಾನಿಗಳನ್ನು ಅಪಾರ ಸಂಖ್ಯೆಯಲ್ಲಿ ಹೊಂದಿರುವ ಹೆಗ್ಗಳಿಕೆ ಆರ್ಸಿಬಿ ತಂಡಕ್ಕೆ ಮಾತ್ರ ಇದೆ. ಈ ಸಾಲಿನಲ್ಲಿ ಸಿಎಸ್ಕೆ ಕೂಡ ಇದೆ. ಆದ್ರೆ, ಆರ್ಸಿಬಿ ಬೆಂಬಲಿಗರ ಬಲವನ್ನು ಮುರಿಯಲು ಸಾಧ್ಯವಿಲ್ಲ ಎನ್ನುವಂತೆ ತೋರುತ್ತದೆ.
ಒಂದೆಡೆ ರೋಚಕ ಪಂದ್ಯ ಗೆದ್ದು, ಅಧಿಕೃತವಾಗಿ ಪ್ಲೇಆಫ್ಗೆ ಎಂಟ್ರಿ ಕೊಟ್ಟ ಸಂಭ್ರಮದಲ್ಲಿ ಆರ್ಸಿಬಿ ಇದ್ದರೆ, ಮತ್ತೊಂದೆಡೆ ಸವಾಲಿಗೆ ಸವಾಲೆಸೆದು, ಭಾರೀ ಪೈಪೋಟಿ ನೀಡಿ, ಗೆಲುವು ಸಾಧಿಸಿದ್ದಕ್ಕೆ ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ರಾಜಕೀಯ ಗಣ್ಯರು ಆಟಗಾರರಿಗೆ ಪ್ರಶಂಸಿಸಿ, ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದರು. ಈ ಮಧ್ಯೆ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಕೂಡ ವಿಶೇಷ ಅಭಿನಂದನೆ ತಿಳಿಸಿದ್ದು, ಇದೀಗ ಆರ್ಸಿಬಿ ಅಭಿಮಾನಿಗಳ ಲೇವಡಿಗೆ ಸಿಲುಕಿದ್ದಾರೆ.
"ಟಾಪ್ ನಾಲ್ಕರಲ್ಲಿ ಸ್ಥಾನ ಗಳಿಸಿ, ಐಪಿಎಲ್ ಪ್ಲೇಆಫ್ ತಲುಪಿದ ಆರ್‌ಸಿಬಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಾರಂಭದಲ್ಲಿ ನಿರಾಶಾದಾಯಕ ಆರಂಭ ಪಡೆದು ನಂತರದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ, ಗೆಲುವಿನ ಆವೇಗವನ್ನು ಸೃಷ್ಟಿಸಿದ್ದೀರಿ. ಈಗ ಟ್ರೋಫಿ ಗೆಲ್ಲುವ ಕಡೆ ಹೆಚ್ಚು ಗಮನಹರಿಸಿ" ಎಂದು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ಬರೆದು, ಶುಭಕೋರಿದ್ದಾರೆ. ಸದ್ಯ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪ್ಲೇಆಫ್ ಇಲ್ಲ ಫೈನಲ್ ಪಂದ್ಯ ನೋಡಲಾದರೂ ಬೆಂಗಳೂರಿಗೆ ಬನ್ನಿ ಎಂದೆಲ್ಲಾ ಅಭಿಮಾನಿಗಳು ಕಮೆಂಟ್ ಮಾಡಿ, ಮಲ್ಯ ಕಾಲೆಳೆದಿದ್ದಾರೆ.