ಎಲ್ಲಿ ಯೋಗವಿದೆಯೋ ಅಲ್ಲಿ ಕ್ಷೇಮವಿದೆ

Yoga
Published on

ಯೋಗ ಮತ್ತು ಕ್ಷೇಮ ಎಂಬ ಪದ ನಿತ್ಯೋಪಯೋಗಿ. ಇಲ್ಲಿ ಯೋಗ ಎಂದರೆ ಒಳ್ಳೆಯ ಭಾಗ್ಯ ಅಥವಾ ಅವಕಾಶ. ಯೋಗ ಕೂಡಿ ಬಂದರೆ ಭಾಗ್ಯ ಹಣೆಬರಹ ಎನ್ನುತ್ತೇವೆ, ಸಂತೋಷಪಡುತ್ತೇವೆ. ಯೋಗಕ್ಷೇಮ ಎಂಬುದು ಸಂಸ್ಕೃತ ಮೂಲ ಪದಗಳು. ಯೋಗ ಎಂದರೆ ಇಲ್ಲದಿರುವುದನ್ನು ಪಡೆಯುವುದು. ಕ್ಷೇಮ ಎಂದರೆ ಈಗಾಗಲೇ ಪಡೆದಿರುವುದನ್ನು ರಕ್ಷಿಸುವುದು.

ಈ ವಾಕ್ಯವು ಎರಡು ಪ್ರಮುಖ ಅಂಶಗಳನ್ನು ಸೂಚಿಸುತ್ತದೆ: 1.ಇಲ್ಲ ದಿರುವುದನ್ನು ಪಡೆಯಲು ಸಕರಾತ್ಮಕ ಪ್ರಯತ್ನ ಮತ್ತು ಅಭಿವೃದ್ಧಿ. 2. ಈಗಾಗಲೇ ಹೊಂದಿರುವ ಸಂಪತ್ತನ್ನು ಭಾಗ್ಯವನ್ನು ಸಂರಕ್ಷಿಸುವುದು. ಈ ವಾಕ್ಯವು ಜೀವನದಲ್ಲಿ ಸಮತೋಲನದ ಅಗತ್ಯವನ್ನು ಹೈಲೈಟ್ ಮಾಡುತ್ತದೆ. ಅಂದರೆ ಹೊಸದನ್ನು ಪಡೆಯುವ ಪ್ರಯತ್ನ ಮತ್ತು ಈಗಿರುವುದನ್ನು ಸಂರಕ್ಷಿಸುವ ಜವಾಬ್ದಾರಿ ಎರಡೂ ಸಮಾನವಾಗಿ ಮುಖ್ಯವೆಂದು ತಿಳಿಸುತ್ತದೆ.

ಭಗವದ್ಗೀತೆಯಲ್ಲಿ ಯೋಗೇಶ್ವರ ಶ್ರೀಕೃಷ್ಣನು ಹೇಳುತ್ತಾನೆ: ಅನನ್ಯಾಶ್ಚಿಂತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ, ತೇಷಂ ನಿತ್ಯಾಭಿಯುಕ್ತಾನಂ ಯೋಗಕ್ಷೇಮ ವಹಾಮ್ಯಹಂ - (ಭಕ್ತರು ನಿರಂತರವಾಗಿ ನನ್ನನ್ನು ಧ್ಯಾನಿಸುವಾಗ, ಅವರ ಯೋಗಕ್ಷೇಮ ವನ್ನು ನಾನು ನೋಡಿಕೊಳ್ಳುತ್ತೇನೆ) ಎಂದು ಭರವಸೆ ನೀಡುತ್ತಾನೆ. ಉಪನಿಷತ್ತಿನಲ್ಲಿ ಯೋಗಕ್ಷೇಮಪದವನ್ನು ವ್ಯಕ್ತಿಯ ಆಧ್ಯಾತ್ಮಿಕ ಮತ್ತು ಬೌದ್ಧಿಕ ಕಲ್ಯಾಣವನ್ನು ಸೂಚಿಸಲು ಬಳಸಲಾಗಿದೆ. ಇದು ಆತ್ಮ ಸಾಕ್ಷಾತ್ಕಾರ ಮತ್ತು ದೈಹಿಕ ಸಮತೋಲನವನ್ನು ಪ್ರತಿಪಾದಿಸುತ್ತದೆ. ಪುರಾಣಗಳಲ್ಲಿ ಯೋಗಕ್ಷೇಮ ಪದವು ದೇವತೆಗಳ ಮತ್ತು ಭಕ್ತರ ಕಲ್ಯಾಣವನ್ನು ಸೂಚಿಸಲು ಬಳಸಲಾಗಿದೆ. ಶುಭ - ಮಂಗಳಕರ ಸಂದರ್ಭಗಳಲ್ಲಿ ಯೋಗಕ್ಷೇಮ ಪದವನ್ನು ಶುಭಾಶಯ ರೂಪದಲ್ಲಿ ಬಳಸಲಾಗುತ್ತದೆ. ಇದು ವ್ಯಕ್ತಿಯ ಸಮಗ್ರ ಸುಖ ಮತ್ತು ಸಮೃದ್ಧಿಯನ್ನು ಕೋರುತ್ತದೆ. ಈ ತತ್ವವನ್ನು ಆಧುನಿಕ ಜೀವನದಲ್ಲಿ ಹೇಗೆ ಅಳವಡಿಸಿ ಕೊಳ್ಳಬಹುದು? ಅದು ಆರೋಗ್ಯ, ಆರ್ಥಿಕ ಸ್ಥಿರತೆ, ಆತ್ಮ ಚಿಂತನೆ, ಸಾಮಾಜಿಕ ಸುಧಾರಣೆ ಮತ್ತು ಪರಿಸರ ಸಂರಕ್ಷಣೆಗೆ ಹೇಗೆ ಅನ್ವಯಿಸುತ್ತದೆ?

ಮೂಲಭೂತ ಅರ್ಥ - ವ್ಯುತ್ಪತಿ: ಯೋಗ ಶಬ್ದ ಸಂಸ್ಕೃತದ ’ ಯುಜ್ ’ಧಾತುವಿನಿಂದ ಬಂದ ಪದ. ಜೋಡಿಸುವುದು, ಏಕೀಕರಿಸುವುದು ಅಥವಾ ಆತ್ಮ ಮತ್ತು ಪರಮಾತ್ಮನ ನಡುವೆ ಸಂಪರ್ಕ ಸಾಧಿಸುವುದು ಸಮಾಧಿ ಸಂಯಮ ಎಂಬರ್ಥಗಳಿವೆ. ಪತಂಜಲಿ ಮಹರ್ಷಿಯು ‘ಯೋಗಃ ಚಿತ್ತವೃತ್ತಿ ನಿರೋಧಃ’ ಎಂದು ಸೂತ್ರೀಕರಿಸಿದ್ದಾನೆ. ಅಂದರೆ ಮನಸ್ಸಿನ ಕಲ್ಮಶಗಳನ್ನು ನಿಯಂತ್ರಿಸುವ ಪ್ರಕ್ರಿಯೆ. ಕ್ಷೇಮ ಶಬ್ದವು ಸಂಸ್ಕೃತದ ’ ಕ್ಷಿ ’ ಧಾತುವಿನಿಂದ ಬಂದಿದೆ. ಎಂದರೆ ರಕ್ಷಣೆ, ಆರೈಕೆ, ಶಾಂತಿ, ಸಮೃದ್ಧಿ. ಅದು ವ್ಯಕ್ತಿಯ ಶ್ರೇಯೋ ಮಾರ್ಗವನ್ನು ಕಾಪಾಡುವ ಮತ್ತು ಸ್ಥಿರಗೊಳಿಸುವ ತತ್ವವಾಗಿದೆ.

ಯೋಗ ಕ್ಷೇಮ ಮತ್ತು ಜೀವನದ ಗುರಿ: ಭಗವದ್ಗೀತೆಯ ಪ್ರಕಾರ ಜೀವನದ ಗುರಿ ಅರ್ಥ (ಹಣ), ಕಾಮ (ಇಚ್ಛೆ), ಧರ್ಮ (ನೈತಿಕತೆ) ಮತ್ತು ಮೋಕ್ಷ (ಮುಕ್ತಿ) ಎಂಬ ಚತುರ್ವಿಧ ಪುರುಷಾರ್ಥಗಳ ಸಾಧನೆ. ಈ ಗುರಿಯನ್ನು ಸಾಧಿಸಲು ಯೋಗ ಮತ್ತು ಕ್ಷೇಮ ಎರಡನ್ನೂ ಸಮತೋಲನದಿಂದ ಅನುಸರಿಸಬೇಕು.

ಯೋಗ: ಅನಾಸಕ್ತಿಯಿಂದ ಕರ್ತವ್ಯ ನಿರ್ವಹಣೆಯ ಕರ್ಮ ಯೋಗ. = ಭಕ್ತಿ ಮತ್ತು ಶರಣಾಗತಿಯ ಮೂಲಕ ಭಗವಂತನ ಸಂಪರ್ಕದ ಭಕ್ತಿ ಯೋಗ. = ಜ್ಞಾನ ಮತ್ತು ಆತ್ಮವಿಚಾರಣೆಯಿಂದ ಮುಕ್ತಿ ನೀಡುವ ಜ್ಞಾನ ಯೋಗ.

ಕ್ಷೇಮ: ಆತ್ಮ ಸಂಯಮ ಶಾಂತಿ ಮತ್ತು ತೃಪ್ತಿಯ ಸ್ಥಿತಿಯನ್ನು ಕಾಪಾಡುವುದು. ಭಕ್ತನಿಗಾಗಿ ಭಗವಂತನ ಭರವಸೆಯ ಸಹಾಯ. ಪರಮಾತ್ಮನಲ್ಲಿ ಶರಣಾಗತಿ.

ಯೋಗಕ್ಷೇಮ ಮತ್ತು ಆರೋಗ್ಯ: ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಒದಗಿಸುವ ಆಸನ, ಪ್ರಾಣಾಯಾಮ ಮತ್ತು ಧ್ಯಾನ ಮನಸ್ಸಿನ ಚಂಚಲತೆ, ಕ್ಲೇಶ ಕಡಿಮೆ ಮಾಡಿ ಆಂತರಿಕ ಶಾಂತಿ ನೀಡುವುದು.

ಕ್ಷೇಮ: ಆರೋಗ್ಯ ಕಾಪಾಡಲು ಸರಿಯಾದ ಆಹಾರ ನಿದ್ರೆ ಮತ್ತು ಜೀವನಶೈಲಿ.

ಯೋಗ ಕ್ಷೇಮ ಮತ್ತು ಆರ್ಥಿಕ ಸ್ಥಿರತೆ: ಒಳ್ಳೆಯ ಆದಾಯದ ಅವಕಾಶಗಳನ್ನು ಅರ್ಥಪೂರ್ಣ ಜೀವನಕ್ಕಾಗಿ ಬಳಸುವುದು. ಧರ್ಮಸಮ್ಮತ ಸಂಪಾದನೆ, ಆರ್ಥಿಕ ಸುರಕ್ಷತೆ ಮತ್ತು ಸಂಪತ್ತಿನ ಸದುಪಯೋಗ, ಉಳಿತಾಯ ಮತ್ತು ಮಾನವ ಸೇವೆಗೆ ದಾನದ ಮಹತ್ವ.

ಪರಿಸರ ಸಂರಕ್ಷಣೆ: ಪರಿಸರಸ್ನೇಹಿ ಜೀವನಶೈಲಿ, ಪ್ರಾಕೃತಿಕ ಸಂಪತ್ತುಗಳ ಸದುಪಯೋಗ. ಪ್ರಕೃತಿಯನ್ನು ಮುಂದಿನ ಪೀಳಿಗೆಯವರಿಗೆ ಸಂರಕ್ಷಿತವಾಗಿ ಕಾಪಾಡುವುದು. ನಮಗೆ ದೊರೆತಿರುವ ಜೀವನಾವಕಾಶ ಕಾಪಾಡಿಕೊಳ್ಳುವುದು ಮತ್ತು ಹೊಸದನ್ನು ಪಡೆಯುವುದರ ನಡುವೆ ವೈಶ್ವಿಕ ಸಮತೋಲನ ಸಾಧಿಸುವುದೇ ಯೋಗಕ್ಷೇಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net