

| ಹರೀಶ್ ಬೇಲೂರು ಬೆಂಗಳೂರು
ಸಮಾಜದ ಸ್ವಾಸ್ಥ್ಯಕ್ಕಾಗಿ ಮಳೆ, ಚಳಿ, ಗಾಳಿ ಹಾಗೂ ಬಿಸಿಲು ಲೆಕ್ಕಿಸದೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಕಾರ್ಯದಲ್ಲಿ ಪೌರಕಾರ್ವಿುಕರು ತೊಡಗಿದ್ದಾರೆ. ಕರೊನಾ ಸಾಂಕ್ರಾಮಿಕ ಹರಡಿದ ವೇಳೆ ತಮ್ಮ ಜೀವನವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರಕಾರ್ವಿುಕರು ಮುಂಚೂಣಿಯಲ್ಲಿದ್ದಾರೆಂದು ಹೆಮ್ಮೆಪಟ್ಟು ಚಪ್ಪಾಳೆ ತಟ್ಟಿ ಪ್ರಶಂಸಿಸಿ ಪುಷ್ಪವೃಷ್ಟಿ ಮಾಡಲಾಗಿತ್ತು. ಆದರೆ, ಪೌರಕಾರ್ವಿುಕರಿಗೆ ಸಲ್ಲಬೇಕಿದ್ದ ಸವಲತ್ತುಗಳು ಸಿಗದಂತಾಗಿದೆ.
ಐಪಿಡಿ ಸಾಲಪ್ಪ ಸಮಿತಿ ವರದಿ ಅನುಷ್ಠಾನ, ಸೇವೆ ಕಾಯಂ ಮಾಡುವುದು ಸೇರಿ ಹಲವು ಬೇಡಿಕೆಗಳು ಇಂದಿಗೂ ಈಡೇರಿಲ್ಲ. ಬೇಡಿಕೆ ಈಡೇರಿಸದಂತೆ ಗುತ್ತಿಗೆದಾರರು ನಡೆಸುತ್ತಿರುವ ಲಾಬಿಗೆ ಸರ್ಕಾರ ಮಣಿಯುತ್ತಿದೆ. ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ಸ್ವಚ್ಛತೆ ಕಾರ್ಯ ನಡೆಯದಿರುವುದು ಸೇರಿ ಕೇಂದ್ರ ಸರ್ಕಾರವು ಪ್ರತಿ ವರ್ಷ ಹೊರಡಿಸುವ ‘ಸ್ವಚ್ಛ ನಗರಿ’ ಎಂಬ ಗರಿಮೆಯಲ್ಲಿ ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ.
ರಾಜ್ಯದಲ್ಲಿ ಪ್ರಸ್ತುತ 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳಿಂದ 16,732 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,794 ಕಾಯಂ ಪೌರಕಾರ್ವಿುಕರು, 6,687 ನೇರಪಾವತಿ, ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ಒಟ್ಟು 12,481 ಪೌರಕಾರ್ವಿುಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 4.251 ಹುದ್ದೆಗಳು ಖಾಲಿಯಿವೆ. ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಬೆಳಗಾವಿಯಲ್ಲಿ ಹೆಚ್ಚು ಹುದ್ದೆಗಳು ಖಾಲಿಯಿವೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 18 ಸಾವಿರ ಪೌರಕಾರ್ವಿುಕರಿದ್ದು, 1,500 ಮಂದಿ ಕಾಯಂ ಆಗಿ ಕೆಲಸ ಮಾಡುತ್ತಿದ್ದರೆ, ಉಳಿದವರು ಗುತ್ತಿಗೆ ಆಧಾರದಲ್ಲಿ ಸ್ಚಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ರಾಜ್ಯದಲ್ಲಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ವಿುಕರನ್ನು ನಿಗದಿಗೊಳಿಸಲಾಗಿದೆ. 500 ಜನಕ್ಕೆ ಒಬ್ಬರು ಇರಬೇಕೆಂಬ ನಿಯಮವಿದೆ. ಜನಸಂಖ್ಯೆ ಅನುಗುಣವಾಗಿ ಪೌರಕಾರ್ವಿುಕರು ಇಲ್ಲ. ಕಾಯಂ ಪೌರಕಾರ್ವಿುಕರಿಗೆ ತಿಂಗಳಿಗೆ 30 ಸಾವಿರದಿಂದ 35 ಸಾವಿರ ರೂ.ವರೆಗೆ ವೇತನ ಸೇರಿ ಡಿ ದರ್ಜೆ ನೌಕರರಿಗೆ ದೊರೆಯುವ ಎಲ್ಲ ಸೌಲಭ್ಯಗಳು ಸಿಗುತ್ತದೆ. ಆದರೆ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಿಂಗಳಿಗೆ 16 ಸಾವಿರ ರೂ. ವೇತನ ನೀಡಲಾಗುತ್ತಿದೆ.
ಕಡ್ಡಾಯ ಸೌಲಭ್ಯದಿಂದ ವಂಚಿತ: ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಮ್ಯಾನ್ಹೋಲ್ಗಳನ್ನು ಸ್ವಚ್ಛಗೊಳಿಸುವ ವೇಳೆ ಅಸುನೀಗಿದ್ದಾರೆ. ರಾಜ್ಯದಲ್ಲಿಯೂ ಇಂಥ ಘಟನೆಗಳು ಅಗಾಗ್ಗೆ ಮರುಕಳಿಸುತ್ತಿವೆ. ಸ್ವಚ್ಛತೆಯಲ್ಲಿ ತೊಡಗುವ ಪೌರಕಾರ್ವಿುಕರ ಆಯಸ್ಸು ಕುಸಿತವಾಗುತ್ತಿದೆ. ಹೀಗಿರುವಾಗ, ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಪೌರಕಾರ್ವಿುಕರಿಗೆ ವಿಶ್ರಾಂತಿ, ಗೃಹ, ಕುಡಿಯುವ ನೀರು, ಶೌಚಗೃಹ, ಪ್ರಥಮ ಚಿಕಿತ್ಸಾ, ಶುಚಿತ್ವ ಸೌಲಭ್ಯ, ಸಮವಸ್ತ್ರ, ಹ್ಯಾಂಡ್ ಗ್ಲೋವ್ಸ್, ಟೋಪಿ, ರಬ್ಬರ್ ಬೂಟುಗಳು, ಪಾದರಕ್ಷೆ, ಶುಚಿಗೊಳಿಸುವ ಸಾಧನ, ಕಸಬರಿಗೆ, ತರಿಮಣಿ, ಸಲಿಕೆ, ಮಾಸ್ಕ್, ಗಮೇಲ, ಕಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಉಪಕರಣ, ಬಿದಿರಿನ ಬುಟ್ಟಿಗಳು, ತ್ಯಾಜ್ಯ ಸಾಗಾಣೆ ಬಂಡಿ, ಫಿನೈಲ್ ಹಾಗೂ ಬ್ಲಿಚಿಂಗ್ ಪೌಡರ್ ಸೇರಿ 22 ಸೌಲಭ್ಯಗಳನ್ನು ಒದಗಿಸಬೇಕು. ಕೆಲವೆಡೆ ಪೌರಕಾರ್ವಿುಕರು ಸೌಲಭ್ಯಗಳು ವಂಚಿತರಾಗಿದ್ದಾರೆ. ಕೆಲ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವರಿಗೆ ತಿಂಗಳಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ವೇತನದಲ್ಲಿ ಕಡಿತಗೊಳ್ಳುವ ಇಎಸ್ಐ, ಪಿಎಫ್ ಹೊರತುಪಡಿಸಿ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಕೆಲ ಗುತ್ತಿಗೆದಾರರು ಇಎಸ್ಐ ಹಾಗೂ ಪಿಎಫ್ ಪಾವತಿಸುತ್ತಿಲ್ಲ.
ಜಿಲ್ಲಾವಾರು ಖಾಲಿ ವಿವರ: ಬೆಳಗಾವಿ 570, ಬಳ್ಳಾರಿ 407, ಬೆಂಗಳೂರು 291, ಉತ್ತರ ಕನ್ನಡ 262, ರಾಯಚೂರು 249, ದಕ್ಷಿಣ ಕನ್ನಡ 218, ಗದಗ 206, ಬೀದರ್ 198, ಚಿತ್ರದುರ್ಗ 166, ಕೋಲಾರ 131, ವಿಜಯಪುರ 126, ಮೈಸೂರು 124, ಚಿಕ್ಕಬಳ್ಳಾಪುರ 121, ಕಲಬುರಗಿ 120, ಶಿವಮೊಗ್ಗ 118, ಯಾದಗಿರಿ 117, ಹಾವೇರಿ 117, ಹಾಸನ 106, ಬಾಗಲಕೋಟೆ 103,ಬೆಂಗಳೂರು ಗ್ರಾಮಾಂತರ 88, ತುಮಕೂರು 80, ರಾಮನಗರ 79, ಉಡುಪಿ 73, ದಾವಣಗೆರೆ 63,ಧಾರವಾಡ 50, ಕೊಪ್ಪಳ 33, ಚಾಮರಾಜನಗರ 20, ಕೊಡಗು 15, ಮಂಡ್ಯ 08, ಚಿಕ್ಕಮಗಳೂರು 08.
ಹಫ್ತಾ ವಸೂಲಿ: ಕಸ ಗುಡಿಸಿ ಸ್ವಚ್ಛಗೊಳಿಸುವ ಪೌರಕಾರ್ವಿುಕರಿಂದ ತಿಂಗಳಿಗೆ ಇಂತಿಷ್ಟು ಹಫ್ತಾ ವಸೂಲಿ ಮಾಡುತ್ತಿರುವ ದಂಧೆ ರಾಜ್ಯಾದ್ಯಂತ ರಾಜಾರೋಷವಾಗಿ ನಡೆಯುತ್ತಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ವಿುಕರಿಗೆ ಪ್ರತಿ ತಿಂಗಳಿಗೆ 16 ಸಾವಿರ ರೂ. ವೇತನ ಸಿಗುತ್ತದೆ. ವೇತನ ಬಂದ ತಕ್ಷಣ 600-800 ರೂಪಾಯಿ ಅನ್ನು ಮಾಮೂಲಿ ಹಣವನ್ನು ಮೇಲಧಿಕಾರಿಗಳಿಗೆ, ಮೇಸ್ತ್ರಿಗಳಿಗೆ ನೀಡಬೇಕಿದೆ. ಒಂದು ವೇಳೆ ಹಣ ನೀಡದಿದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಕೆಲಸ ಕಳೆದುಕೊಳ್ಳುವ ಭಯದಿಂದ ಪೌರಕಾರ್ವಿುಕರು ಮಾಮೂಲಿ ಹಣ ನೀಡುವಂತಾಗಿದೆ. ಕೆಲ ಕಾಯಂ ಪೌರಕಾರ್ವಿುಕರು ಪ್ರತಿ ನಿತ್ಯ ಬೆಳಗ್ಗೆ ಬುಕ್ನಲ್ಲಿ ಸಹಿ ಹಾಕಿ ಸ್ವಚ್ಛತೆ ಕಾರ್ಯದಲ್ಲಿ ತೊಡಗದೆ ಮನೆಗೆ ತೆರಳುತ್ತಿದ್ದಾರೆ. ಅಧಿಕಾರಿಗಳು ಇವರ ಜತೆ ಶಾಮೀಲಾಗಿ ತಿಂಗಳಿಗೆ 5 ಸಾವಿರ ರೂ. ಮಾಮೂಲಿ ಪಡೆಯುತ್ತಿರುವ ದೂರುಗಳಿವೆ.