More

  ಕೇಂದ್ರ ಸರ್ಕಾರದಿಂದ ಹೊಸ ಪ್ರಶಸ್ತಿ ಘೋಷಣೆ; ರಾಷ್ಟ್ರೀಯ ಬಾಹ್ಯಾಕಾಶ ದಿನದಂದೇ ಪ್ರದಾನ: ಇಲ್ಲಿದೆ ವಿವರ..

  ನವದೆಹಲಿ: ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್ ಆದ ದಿನವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ ಮಾಡಿತ್ತು. ಈಗ ಪ್ರತಿ ವರ್ಷ ಅದೇ ದಿನ (ಆ. 23) ಪ್ರದಾನ ಮಾಡಲಾಗುವ ಹೊಸ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿನ ಸಾಧನೆಗೆಂದೇ ನೀಡಲಾಗುವ ಈ ಪ್ರಶಸ್ತಿಗೆ “ರಾಷ್ಟ್ರೀಯ ವಿಜ್ಞಾನ ಪುರಸ್ಕಾರ” ಎಂಬ ಹೆಸರು ಇಡಲಾಗಿದೆ. ರಾಷ್ಟ್ರೀಯ ವಿಜ್ಞಾನ ಪುರಸ್ಕಾರವು ಭಾರತದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿನ ಅತ್ಯುನ್ನತ ಮನ್ನಣೆಗಳಲ್ಲಿ ಒಂದಾಗಿರಲಿದೆ.

  ವಿಜ್ಞಾನ, ತಂತ್ರಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಆವಿಷ್ಕಾರದ ವಿವಿಧ ಕ್ಷೇತ್ರಗಳಲ್ಲಿ ವಿಜ್ಞಾನಿಗಳು, ತಂತ್ರಜ್ಞರು ಮತ್ತು ನಾವೀನ್ಯಕಾರರು ವೈಯಕ್ತಿಕವಾಗಿ ಅಥವಾ ತಂಡಗಳಲ್ಲಿ ನೀಡಿದ ಗಮನಾರ್ಹ ಮತ್ತು ಸ್ಫೂರ್ತಿದಾಯಕ ಕೊಡುಗೆಯನ್ನು ಗುರುತಿಸುವುದು ರಾಷ್ಟ್ರೀಯ ವಿಜ್ಞಾನ ಪುರಸ್ಕಾರದ (ಆರ್​ವಿಪಿ) ಉದ್ದೇಶ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  ಸರ್ಕಾರಿ, ಖಾಸಗಿ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳು/ತಂತ್ರಜ್ಞರು/ಆವಿಷ್ಕಾರಕರು ಅಥವಾ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ, ವಿಜ್ಞಾನ, ತಂತ್ರಜ್ಞಾನ ಅಥವಾ ತಂತ್ರಜ್ಞಾನ ಆಧಾರಿತ ಆವಿಷ್ಕಾರದ ಯಾವುದೇ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಅಥವಾ ನಾವೀನ್ಯತೆ ಅಥವಾ ಆವಿಷ್ಕಾರದ ವಿಷಯದಲ್ಲಿ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದರೆ ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ.

  ಈ ಪ್ರಶಸ್ತಿಗಳನ್ನು ನಾಲ್ಕು ವಿಭಾಗಗಳಲ್ಲಿ ನೀಡಲಾಗುವುದು

  ವಿಜ್ಞಾನ ರತ್ನ (ವಿಆರ್): ಈ ಪ್ರಶಸ್ತಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಳು ಮತ್ತು ಕೊಡುಗೆಗಳನ್ನು ಗುರುತಿಸಿ ನೀಡಲಾಗುತ್ತದೆ.

  ವಿಜ್ಞಾನ ಶ್ರೀ (ವಿಎಸ್): ಈ ಪ್ರಶಸ್ತಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಗಳನ್ನು ಗುರುತಿಸಿ ಕೊಡಲಾಗುತ್ತದೆ.

  ವಿಜ್ಞಾನ ಯುವ-ಶಾಂತಿ ಸ್ವರೂಪ್ ಭಟ್ನಾಗರ್ (ವಿವೈ-ಎಸ್ಎಸ್ ಬಿ) ಪ್ರಶಸ್ತಿ: ಇದನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ 45 ವರ್ಷದವರೆಗಿನ ಯುವ ವಿಜ್ಞಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ನೀಡಲಾಗುತ್ತದೆ.

  ವಿಜ್ಞಾನ ತಂಡ (ವಿಟಿ) ಪ್ರಶಸ್ತಿ: ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ಒಂದು ತಂಡದಲ್ಲಿ ಅಸಾಧಾರಣ ಕೊಡುಗೆ ನೀಡಿದ ಮೂವರು ಅಥವಾ ಹೆಚ್ಚಿನ ವಿಜ್ಞಾನಿಗಳು / ಸಂಶೋಧಕರು / ನಾವೀನ್ಯಕಾರರನ್ನು ಒಳಗೊಂಡ ತಂಡಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುವುದು.

  ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ವಿಜ್ಞಾನದ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಆವಿಷ್ಕಾರಿಗಳು, ವಿಜ್ಞಾನದ ಯಾವುದೇ ಕ್ಷೇತ್ರದಲ್ಲಿ ಹೊಸ ಸಂಶೋಧನೆ, ತಂತ್ರಜ್ಞಾನ ಆಧಾರಿತ ನಾವೀನ್ಯತೆ ಅಥವಾ ಆವಿಷ್ಕಾರ ಅಥವಾ ಗಮನಾರ್ಹ ಸಾಮಾಜಿಕ ಪರಿಣಾಮ ಬೀರುವ ನವೀನ ತಂತ್ರಜ್ಞಾನಗಳು/ ಉತ್ಪನ್ನಗಳ ಅಭಿವೃದ್ಧಿಗೆ ಕೊಡುಗೆ ನೀಡಿದ ಅಥವಾ ಕೈಗೊಂಡ ಆವಿಷ್ಕಾರಿಗಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

  13 ಕ್ಷೇತ್ರಗಳಲ್ಲಿ ಆಯ್ಕೆ: ರಾಷ್ಟ್ರೀಯ ವಿಜ್ಞಾನ ಪುರಸ್ಕಾರವನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೈವಿಕ ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ, ಭೂ ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ವಿಜ್ಞಾನ, ಕೃಷಿ ವಿಜ್ಞಾನ, ಪರಿಸರ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ಪರಮಾಣು ಶಕ್ತಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಇತರ 13 ಕ್ಷೇತ್ರಗಳಲ್ಲಿ ನೀಡಲಾಗುವುದು. ಲಿಂಗ ಸಮಾನತೆ ಸೇರಿದಂತೆ ಪ್ರತಿ ಕಾರ್ಯಕ್ಷೇತ್ರ/ ಕ್ಷೇತ್ರದ ಪ್ರಾತಿನಿಧ್ಯವನ್ನು ಖಚಿತಪಡಿಸಲಾಗುವುದು.

  ಇದನ್ನೂ ಓದಿ: ಎನ್​ಡಿಎ ಮೈತ್ರಿಕೂಟ ಸೇರಿಕೊಂಡ ಜೆಡಿಎಸ್​; ಬಿಜೆಪಿ ಜತೆ ಕೈಜೋಡಿಸಿದ ಎಚ್​.ಡಿ.ಕುಮಾರಸ್ವಾಮಿ

  ಆಯ್ಕೆ ವಿಧಾನ: ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಪ್ರಶಸ್ತಿಗಳಿಗೆ ಸ್ವೀಕರಿಸುವ ಎಲ್ಲಾ ನಾಮನಿರ್ದೇಶನಗಳನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿಎಸ್ಎ) ನೇತೃತ್ವದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಸಮಿತಿ (ಆರ್​​ವಿಪಿಸಿ) ಮುಂದೆ ಇಡಬೇಕು. ವಿಜ್ಞಾನ ಇಲಾಖೆಗಳ ಕಾರ್ಯದರ್ಶಿಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್ ಅಕಾಡೆಮಿಗಳ ಸದಸ್ಯರು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಕೆಲವು ಪ್ರಖ್ಯಾತ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಈ ಸಮಿತಿ ಒಳಗೊಂಡಿರುತ್ತದೆ.

  ಪ್ರತಿ ಜನವರಿಯಲ್ಲಿ ಆಹ್ವಾನ: ಈ ಪ್ರಶಸ್ತಿಗಳ ಗುಚ್ಛಕ್ಕೆ ನಾಮನಿರ್ದೇಶನಗಳನ್ನು ಪ್ರತಿವರ್ಷ ಜನವರಿ 14ರಂದು ಆಹ್ವಾನಿಸಲಾಗುವುದು. ಅರ್ಜಿ ಸಲ್ಲಿಸಲು ಪ್ರತಿವರ್ಷ ಫೆಬ್ರವರಿ 28 ರವರೆಗೆ (ರಾಷ್ಟ್ರೀಯ ವಿಜ್ಞಾನ ದಿನ) ಅವಕಾಶ ಇರುತ್ತದೆ. ಈ ಪ್ರಶಸ್ತಿಗಳನ್ನು ರಾಷ್ಟ್ರೀಯ ತಂತ್ರಜ್ಞಾನ ದಿನಂದು ಅಂದರೆ ಪ್ರತಿ ವರ್ಷ ಮೇ 11 ರಂದು ಘೋಷಿಸಲಾಗುತ್ತದೆ. ಎಲ್ಲಾ ವರ್ಗದ ಪ್ರಶಸ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭವು ಆ. 23ರಂದು (ರಾಷ್ಟ್ರೀಯ ಬಾಹ್ಯಾಕಾಶ ದಿನ) ನಡೆಯಲಿದೆ.

  ಎಲ್ಲಾ ಪ್ರಶಸ್ತಿಗಳು ಸನದ್ ಮತ್ತು ಪದಕವನ್ನು ಹೊಂದಿರುತ್ತವೆ. ಈ ಹೊಸ ರಾಷ್ಟ್ರೀಯ ಪ್ರಶಸ್ತಿಗಳು ಭಾರತ ಸರ್ಕಾರವು ಅತ್ಯುನ್ನತ ಮಟ್ಟದಲ್ಲಿ ವೈಜ್ಞಾನಿಕ ಸಮುದಾಯದ ಸಾಧನೆಗಳನ್ನು ಗುರುತಿಸುವಲ್ಲಿ ಒಂದು ಪರಿವರ್ತಕ ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ.

  ಸಿದ್ದರಾಮಯ್ಯಗೆ ಅಡುಗೆ ಮಾಡಲು ಬರುತ್ತಾ? ಹೆಂಡ್ತಿ ಹತ್ರ ಸಿಎಂ ಯಾವತ್ತಾದ್ರೂ ಬೈಸಿಕೊಂಡಿದ್ರಾ?

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts