'ಸಿಎಂ ಆದ್ರೆ ಏನು ಮಾಡ್ತೀರಿ'? ವೈರಲ್ ಆಗ್ತಿದೆ ಅಂದು ದಳಪತಿ ವಿಜಯ್​ ಕೊಟ್ಟ ಉತ್ತರ!

ವಿಜಯವಾಣಿ - 2024-02-02T174532.317
Published on

ಆಂಧ್ರಪ್ರದೇಶ: ಬಹಳ ದಿನಗಳಿಂದ ತಮಿಳು ಚಿತ್ರರಂಗದ ಸ್ಟಾರ್​ ನಟ ದಳಪತಿ ವಿಜಯ್​ ಶೀಘ್ರವೇ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಕೆಲವರು ಇಲ್ಲ ನಟ ತನ್ನ ಅಭಿಮಾನಿಗಳಿಗಾಗಿ ರಾಜಕೀಯಕ್ಕೆ ಇಳಿಯುವುದಿಲ್ಲ, ಹೀಗಾದರೆ ಸಿನಿಮಾ ಕಥೆ ಏನು? ಎಂಬ ಆತಂಕವನ್ನು ಮುಂದಿಟ್ಟಿದ್ದರು. ಆದ್ರೆ, ಇದೀಗ ಈ ಸುದ್ದಿ ಸತ್ಯವಾಗಿದ್ದು, 'ತಮಿಳಿಗ ವೆಟ್ರಿ ಕಳಗಂ' ಎಂಬ ಪಕ್ಷವನ್ನು ವಿಜಯ್​ ಸ್ಥಾಪಿಸಿದ್ದಾರೆ. ಈ ಮುಖೇನ ತಮ್ಮ ಅಪಾರ ಅಭಿಮಾನಿಗಳಿಗೆ ಖುಷಿ ಹಂಚಿದ ದಳಪತಿ, ಸದ್ಯ ಮುಂದಿನ ಕೆಲಸಗಳತ್ತ ಹೆಜ್ಜೆಯಿಟ್ಟಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಒಂದು ವಿಷಯ ಮಾತ್ರ ವ್ಯಾಪಕವಾಗಿ ಸೋಷಿಯಲ್ ಮೀಡಿಯಾವನ್ನು ಸುತ್ತುವರೆದಿದೆ.

ಅಂತಿಮವಾಗಿ ಇಂದು ತಮ್ಮ ಪಕ್ಷದ ಹೆಸರನ್ನು ಘೋಷಿಸುವ ಮೂಲಕ ರಾಜಕೀಯಕ್ಕೆ ಧುಮುಕಿದ ವಿಜಯ್,​ ಈ ಹಿಂದೆ ತಮ್ಮ ಚಿತ್ರಗಳ ಆಡಿಯೋ ಲಾಂಚ್ ಕಾರ್ಯಕ್ರಮದ ವೇದಿಕೆಗಳಲ್ಲಿ ರಾಜಕೀಯ ಕುರಿತಂತೆ ಪರೋಕ್ಷವಾಗಿ ಸುಳಿವು ನೀಡಿದ್ದರು. ಆದ್ರೆ, ಇದು ನಿಜವಲ್ಲ ಎಂದೇ ನಂಬಲಾಗಿತ್ತು. ಸದ್ಯ ಈ ಎಲ್ಲವೂ ಇಂದು ತಲೆಕೆಳಗಾಗಿದ್ದು, ಅಧಿಕೃತವಾಗಿ ತಮ್ಮದೇ ಪಕ್ಷವನ್ನು ಅನಾವರಣಗೊಳಿಸಿದ್ದಾರೆ.

ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ಅಬ್ಬರಿಸಿದ್ದ 'ಲಿಯೋ' ಸ್ಟಾರ್​, 2018ರಲ್ಲಿ ತಾವು ನಟಿಸಿದ 'ಸರ್ಕಾರ್' ಚಿತ್ರದಲ್ಲಿನ ಪಾತ್ರದಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯುವ ಹಂತಕ್ಕೆ ತಲುಪಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಲಾಂಚ್​ ವೇದಿಕೆಯಲ್ಲಿ ನಿರೂಪಕರು ಕೇಳಿದ್ದ ಪ್ರಶ್ನೆಗೆ ವಿಜಯ್​ ಕೊಟ್ಟಿದ್ದ ಉತ್ತರ ಇಂದು ಮತ್ತೊಮ್ಮೆ ವೈರಲ್ ಆಗಿದೆ.

ನಿಜ ಜೀವನದಲ್ಲಿ ನೀವು ಮುಖ್ಯಮಂತ್ರಿಯಾದರೆ ಏನಾಗುತ್ತದೆ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ವಿಜಯ್​, "ಸಿಎಂ ಆದರೆ ನಾನು ಎಂದಿಗೂ ನಟಿಸುವುದಿಲ್ಲ" ಎಂದು ಉತ್ತರಿಸಿದ್ದರು. ಸದ್ಯ ಈ ವಿಷಯ ಅವರ ರಾಜಕೀಯ ನಿಲುವು ಅಧಿಕೃತಗೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net