

ಬೆಂಗಳೂರು: ಒಂದು ಸಮಯದಲ್ಲಿ 'ಕರೊನಾ ಬಂದರೆ ಮುಗಿಯಿತು, ಸತ್ತೇ ಹೋಗುತ್ತಾರೇನೋ..' ಎಂಬಷ್ಟರಮಟ್ಟಿಗೆ ಜನಾಭಿಪ್ರಾಯವಿತ್ತು. ಆ ಬಳಿಕ ಕರೊನಾ ಎಂದರೆ ಸಾಮಾನ್ಯ ಶೀತ-ಜ್ವರ ಎಂಬಂತೆ ಹಲವರು ನೋಡಲಾರಂಭಿಸಿದರೂ, ಅದಕ್ಕೆ ಅಪವಾದ ಎನ್ನುವಂತೆ ಒಂದಷ್ಟು ಮಂದಿ ಮೃತಪಟ್ಟಿದ್ದು, ಒಂದೇ ಮನೆಯ ಹಲವರು ಕರೊನಾಗೆ ಬಲಿಯಾಗಿದ್ದು ಕೂಡ ನಡೆದಿದೆ. ಆದರೆ ರಾಜ್ಯದ ಇಂದಿನ ಕರೊನಾ ಬುಲೆಟಿನ್ ಒಂದಷ್ಟು ನಿರಾಳತೆ ಮೂಡಿಸುವಂತಿದೆ.
ಏಕೆಂದರೆ ಇದುವರೆಗೆ ಸೋಂಕಿತರಾಗಿರುವ ಒಟ್ಟು ಪ್ರಕರಣಗಳ ಪೈಕಿ ಬಹುತೇಕರು ಸೋಂಕುಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ಇವತ್ತಿನ ಬುಲೆಟಿನ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3,604 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ, ಅದೇ ಅವಧಿಯಲ್ಲಿ ಅದಕ್ಕಿಂತಲೂ ದುಪ್ಪಟ್ಟು ಎಂದರೆ 7,699 ಮಂದಿ ಸೋಂಕುಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.
ರಾಜ್ಯದಲ್ಲಿ ಮೊದಲ ಪ್ರಕರಣ ಪತ್ತೆಯಾದ ದಿನದಿಂದ ಎಂದರೆ 2020ರ ಮಾರ್ಚ್ 8ರಿಂದ ಲೆಕ್ಕ ಹಾಕಿದರೆ ಇದುವರೆಗೆ ಕರ್ನಾಟಕದಲ್ಲಿ 28,34,630 ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಆ ಪೈಕಿ 26,98,822 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೀ 1,01,042 ಇದೆ. ಬೇಸರದ ಸಂಗತಿ ಎಂದರೆ ಇದುವರೆಗೆ ರಾಜ್ಯದಲ್ಲಿ 34,743 ಮಂದಿ ಕರೊನಾಗೆ ಬಲಿಯಾಗಿದ್ದು, ಕಳೆದ 24 ಗಂಟೆಗಳಲ್ಲೇ 89 ಮಂದಿ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ. 2.18ಕ್ಕೆ ಇಳಿದಿದೆ.