

ಬೆಂಗಳೂರು: ಈಗ ಈ ಕರೊನಾ ಕಾಲಘಟ್ಟದಲ್ಲಿ ಬಹಳಷ್ಟು ಮಂದಿ ಬ್ಯಾಂಕಿಗೆ ಹೋಗಿ ವ್ಯವಹರಿಸುವ ಬದಲು ಆನ್ಲೈನ್ನಲ್ಲೇ ವಹಿವಾಟು ನಡೆಸುತ್ತಿದ್ದಾರೆ. ಆದರೆ ನೀವು ಈ ಬ್ಯಾಂಕ್ನ ಗ್ರಾಹಕರಾಗಿದ್ದಲ್ಲಿ ಜುಲೈ 1ರಿಂದ ವಹಿವಾಟು ನಡೆಸಲು ಸಾಧ್ಯವಾಗದೇ ಇರಬಹುದು. ಏಕೆಂದರೆ ಈ ಬ್ಯಾಂಕ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯೊಂದು ಆಗಿದೆ.
ಹೌದು.. ಇಲ್ಲೀಗ ಗಮನಹರಿಸಬೇಕಾಗಿರುವುದು ಕೆನರಾ ಬ್ಯಾಂಕ್ನೊಂದಿಗೆ ವಿಲೀನವಾದ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು. ಏಕೆಂದರೆ ವಿಲೀನದ ಬಳಿಕ ಸಿಂಡಿಕೇಟ್ ಬ್ಯಾಂಕ್ನ ಹಳೆಯ ಐಎಫ್ಎಸ್ಸಿ (ಇಂಡಿಯನ್ ಫೈನಾನ್ಸಿಯಲ್ ಸಿಸ್ಟಮ್ ಕೋಡ್) ಬದಲಾಗಿದ್ದು, ಇದೇ ಜುಲೈ 1ರಿಂದ ಅವು ನಿಷ್ಕ್ರಿಯಗೊಳ್ಳಲಿವೆ. ಅಂದರೆ ಆ ಬಳಿಕ ಅದೇ ಹಳೆಯ ಐಎಫ್ಎಸ್ಸಿ ಹಾಕಿ ವ್ಯವಹರಿಸಲು ಮುಂದಾದರೆ ಸಾಧ್ಯವಾಗುವುದಿಲ್ಲ.
ವಿಲೀನವಾದ ಬಳಿಕ ಈ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತ ಬಂದಿದ್ದು, ಇದೀಗ ಎಲ್ಲ ಐಎಫ್ಎಸ್ಸಿ ಕೋಡ್ ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿಂಡಿಕೇಟ್ ಬ್ಯಾಂಕ್ನಿಂದ ನೀಡಲಾಗಿದ್ದ ಹಳೆಯ ಐಎಫ್ಎಸ್ಸಿ 2021ರ ಜೂ. 30ರ ವರೆಗೆ ಮಾತ್ರ ಚಾಲನೆಯಲ್ಲಿ ಇರಲಿದ್ದು, ಜುಲೈ 1ರಿಂದ ಬ್ಯಾಂಕ್ ವಹಿವಾಟಿಗೆ ಖಾತೆದಾರರು ಹೊಸ ಐಎಫ್ಎಸ್ಸಿ ಬಳಸತಕ್ಕದ್ದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.
ಹೊಸ ಐಎಫ್ಎಸ್ಸಿ ಪಡೆಯುವುದು ಹೇಗೆ?: ಸಿಂಡಿಕೇಟ್ ಬ್ಯಾಂಕ್ನ ಮೂಲ ಖಾತೆದಾರರಾಗಿದ್ದವರು ಕೆನರಾ ಬ್ಯಾಂಕ್ಗೆ ತೆರಳಿ ಹೊಸ ಪಾಸ್ಬುಕ್ ಪಡೆದರೆ ಅದರಲ್ಲೇ ಹೊಸ ಐಎಫ್ಎಸ್ಸಿ ಮುದ್ರಿತವಾಗಿರುತ್ತದೆ. ಇನ್ನು ಖಾತೆದಾರರಿಗೆ ಅವರ ಖಾತೆ ಇರುವ ಶಾಖೆಯ ಹೊಸ ಐಎಫ್ಎಸ್ಸಿ ಎಸ್ಎಂಎಸ್ ಮೂಲಕ ಬ್ಯಾಂಕ್ ಈಗಾಗಲೇ ಕಳುಹಿಸಿದೆ. ಅದಾಗ್ಯೂ ಹೊಸ ಐಎಫ್ಎಸ್ಸಿ ಪಡೆಯದವರು, ಬೇರೆಯವರ ಹಳೆಯ ಸಿಂಡಿಕೇಟ್ ಬ್ಯಾಂಕ್ ಖಾತೆ ಜತೆ ವ್ಯವಹರಿಸುವವರು ಅದಕ್ಕೆ ಸಂಬಂಧಿಸಿದ ಹೊಸ ಐಎಫ್ಎಸ್ಸಿ ಸುಲಭದಲ್ಲಿ ಪಡೆಯಲು ಕೆನರಾ ಬ್ಯಾಂಕ್ ಲಿಂಕೊಂದನ್ನು ರವಾನಿಸಿದೆ.
ಸಿಂಡಿಕೇಟ್ ಬ್ಯಾಂಕ್ನ ಹಳೆಯ ಐಎಫ್ಎಸ್ಸಿಗೆ ಪ್ರತಿಯಾಗಿ ಈಗಿನ ಕೆನರಾ ಬ್ಯಾಂಕ್ನ ಹೊಸ ಐಎಫ್ಎಸ್ಸಿ ಪಡೆಯಲಿಚ್ಛಿಸುವವರು ಈ ಕೆಳಗಿನ ಲಿಂಕ್ ಮೂಲಕ ತಿಳಿಯಬಹುದು. ಲಿಂಕ್ ಕ್ಲಿಕ್ಕಿಸಿದ ಬಳಿಕ ಅಲ್ಲಿನ ನಿಗದಿತ ಸ್ಥಳದಲ್ಲಿ ಹಳೆಯ ಐಎಫ್ಎಸ್ಸಿ ಟೈಪಿಸಿದರೆ ಹೊಸ ಐಎಫ್ಎಸ್ಸಿ ತಕ್ಷಣ ಲಭಿಸಲಿದೆ.
ಹೊಸ ಐಎಫ್ಎಸ್ಸಿ ಪಡೆಯಲು ಬಳಸಬೇಕಾದ ಲಿಂಕ್ ಇದು: http://canarabank.com/IFSC.html