

ನವದೆಹಲಿ: 'ಕಬೂತರ್ ಜಾ ಜಾ..' ಎಂದು ಪಾರಿವಾಳದೊಂದಿಗೆ ಪ್ರೇಮ ಸಂದೇಶ ಕಳಿಸಿದ್ದನ್ನು ನಾವು ಸಿನಿಮಾದಲ್ಲಿ ನೋಡಿದ್ದೇವೆ. ಹಿಂದಿನ ಕಾಲದಲ್ಲಿ ಪಾರಿವಾಳಗಳ ಮೂಲಕವೇ ಪತ್ರಗಳನ್ನು ರವಾನಿಸುತ್ತಿದ್ದುದನ್ನು ಕಥೆಗಳಲ್ಲಿ, ಹಿರಿಯರಿಂದ ಕೇಳಿದ್ದೇವೆ. ಏಕೆಂದರೆ ಪಾರಿವಾಳ ದಾರಿ ತಪ್ಪದೆ ಕರಾರುವಾಕ್ ಆಗಿ ಸರಿಯಾದ ಗಮ್ಯಕ್ಕೆ ತಲುಪುವುದರಲ್ಲಿ ಹೇಳಿ ಮಾಡಿಸಿದ ಪಕ್ಷಿ. ಹೀಗಿರುವಾಗ ಸುಮಾರು ಹತ್ತು ಸಾವಿರ ಪಾರಿವಾಳಗಳು ನಾಪತ್ತೆ ಆದವೆಂದರೇ ಅಚ್ಚರಿಯೇ..!
ಹೌದು.. ಹೆಚ್ಚೂಕಡಿಮೆ ಹತ್ತು ಸಾವಿರ ಪಾರಿವಾಳಗಳು ನಾಪತ್ತೆಯಾಗಿದ್ದು, ಅವುಗಳ ಕಣ್ಮರೆಗೆ ಕಾರಣವಿನ್ನೂ ನಿಗೂಢವಾಗಿಯೇ ಉಳಿದಿದೆ. ಪೀಟರ್ಬರೋನಲ್ಲಿ ಶನಿವಾರ ನಡೆದ ಪಾರಿವಾಳಗಳ ಹಾರಾಟ ಸ್ಪರ್ಧೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿ ನಿಗದಿತ ತಳಿಯ ಪಾರಿವಾಳಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾರಿಸಿಬಿಡುವ ಸಾಂಪ್ರದಾಯಿಕ ಕ್ರೀಡೆಯೊಂದು ನಡೆಯುತ್ತದೆ. 273 ಕಿ.ಮೀ. ದೂರದ ಈ ಹಾರಾಟದ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪಾರಿವಾಳಗಳು ನಾಪತ್ತೆಯಾಗಿದ್ದು, ಇದು ನಮ್ಮ ರೇಸಿಂಗ್ ಇತಿಹಾಸದಲ್ಲೇ ಅತಿ ಕೆಟ್ಟ ಅನುಭವ ಎಂದು ಆಯೋಜಕರು ಹೇಳಿಕೊಂಡಿದ್ದಾರೆ.
ಮೋಡಗಳನ್ನೂ ಮೀರಿ ಮೇಲಿರುವ ಸೋಲಾರ್ ಸ್ಟಾರ್ಮ್ ಈ ಪಾರಿವಾಳಗಳನ್ನು ದಿಕ್ಕು ತಪ್ಪುವಂತೆ ಮಾಡಿರಬಹುದು ಎಂದು ಕೆಲವರು ಹೇಳಿದ್ದರೂ, ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಅಷ್ಟೇ ಅಲ್ಲ, ಎಷ್ಟು ಪಾರಿವಾಳಗಳು ನಾಪತ್ತೆ ಆಗಿವೆ ಎಂಬುದು ಕೂಡ ಖಚಿತವಾಗಿಲ್ಲ. ಐದರಿಂದ ಹತ್ತು ಸಾವಿರದಷ್ಟು ಪಾರಿವಾಳಗಳು ನಾಪತ್ತೆ ಆಗಿವೆ ಎಂದು ಅಂದಾಜಿಸಲಾಗಿದೆ.
ಇನ್ನು ಈ ಪಾರಿವಾಳಗಳು ಎಲ್ಲಿಯಾದರೂ ಕಂಡು ಬಂದರೆ ಅವುಗಳಿಗೆ ಆಹಾರ ನೀಡುವಂತೆ ಆಯೋಜಕರು ಕೋರಿಕೊಂಡಿದ್ದಾರೆ. ಇವು ತಮ್ಮ ನೆಲೆಗೆ ಮರಳುವಾಗ ಎಲ್ಲಿಯಾದರೂ ನಿಮ್ಮ ಸುತ್ತಮುತ್ತಲೇ ಕಾಣಿಸಿಕೊಳ್ಳಬಹುದು. ಇವು ರೇಸಿಂಗ್ ಪಾರಿವಾಳಗಳಾದ್ದರಿಂದ ಇವುಗಳ ಕಾಲುಗಳಿಗೆ ರಿಂಗ್ ಹಾಕಲಾಗಿರುತ್ತದೆ. ಅಂಥವು ಕಂಡುಬಂದರೆ ಅವುಗಳು ನೀರು-ಕಾಳು ಕೊಟ್ಟು, ಅವುಗಳಿಗೆ ಮರಳಲು ಅವಕಾಶ ಮಾಡಿಕೊಡಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)