ಈ ರಾಶಿಯವರು ಲಕ್ಷ್ಮೀಯನ್ನು ಪೂಜಿಸಿ ಸಂಕಷ್ಟಗಳು ದೂರವಾಗಿ ಸುಖವು ಕೂಡಿಕೊಂಡು ಬರುತ್ತದೆ: ವಾರಭವಿಷ್ಯ

Vaara-Bhavishya
Published on
ವಾರಭವಿಷ್ಯ

ಮೇಷ: ಮೇಷ ರಾಶಿಯವರಿಗೆ ದೇವರೇ ಕೊಡಬೇಕಾದುದನ್ನು ಕೊಟ್ಟು ಶ್ರೇಯಸ್ಸು, ಮಂಗಳವನ್ನು ಉಂಟುಮಾಡುವನು. ಅತಿಶಯವಾದ ಆಶೋತ್ತರಗಳು ಬೇಡ. ರಾಶ್ಯಾಧಿಪತಿ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ, ಪೂಜಿಸಿ.

ವೃಷಭ: ಕತ್ತಲನ್ನು ಹೋಗಲಾಡಿಸಿ ತಂಪಾದ ಗಾಳಿ ಬೀಸುವ ಕಾಲವಿದು. ಅ. 31 ರಂದು ಧನಲಕ್ಷ್ಮೀ ಪೂಜೆ ಇರುವುದಾಗಿ ಪಂಚಾಂಗಕರ್ತರು ಹೇಳುತ್ತಾರೆ. ವೃಷಭ ರಾಶಿ ಅಧಿಪತಿ ಶುಕ್ರನಾಗಿದ್ದು, ಧನಲಕ್ಷ್ಮೀಯನ್ನು ಪೂಜಿಸಿದರೆ ಸದ್ವಿದ್ಯೆ, ಬುದ್ಧಿ, ಯಥೇಚ್ಛವಾದ ಹಣ, ಸ್ಥಿರವಾದ ಮನಸ್ಸು, ಮಂಗಳವನ್ನು ಉಂಟು ಮಾಡುತ್ತದೆ. ಸಾಯಂಕಾಲ 6 ಗಂಟೆಯ ನಂತರ ಧನಲಕ್ಷ್ಮೀಯನ್ನು ಪೂಜಿಸಿ. ಕಷ್ಟಗಳೆಲ್ಲವೂ ಓಡಿ ಹೋಗುತ್ತವೆ. ಲಕ್ಷ್ಮೀಯ ಕೃಪೆ ಇರುತ್ತದೆ.

ಮಿಥುನ: ವಕ್ರದಲ್ಲಿ ಗುರುವಿದ್ದು, ಏಕಾದಶಕ್ಕೆ ಬಂದಿರುವುದರಿಂದ ಧೈರ್ಯವೇ ನಿಮ್ಮನ್ನು ಕಾಪಾಡಲಿ. ಧೈರ್ಯವಿದ್ದರೆ ದೇಶವನ್ನೇ ಆಳಬಹುದು. ಅಷ್ಟರೂಪ ಧಾರಣೆ ಮಾಡುವ ದುರ್ಗೆಯನ್ನು ಪೂಜಿಸಿ, ಆಹ್ವಾನಿಸಿ ಭಕ್ಷ್ಯ ಭೋಜ್ಯ ನೈವೇದ್ಯ ಮಾಡಿ. ಅ. 31ರಂದು ಲಕ್ಷ್ಮೀಯನ್ನು ಪೂಜಿಸಿ. ಸಂಕಷ್ಟಗಳು ದೂರವಾಗಿ ಸುಖವು ಕೂಡಿಕೊಂಡು ಬರುತ್ತದೆ.

ಕಟಕ: ಪಾರ್ವತಿ ಅಂಶದಲ್ಲಿ ಕಟಕ ರಾಶಿಯಲ್ಲಿ ಜನಿಸಿದ ನಿಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಕೇದಾರೇಶ್ವರ ಸಹಿತ ಪಾರ್ವತಿ ಪೂಜಿಸಲೇಬೇಕು. ಕೇದಾರೇಶ್ವರ ವ್ರತವನ್ನು ನ. 1ರಂದು ಆಚರಿಸಿ. ಇಲ್ಲದಿದ್ದರೆ ಕೇದಾರೇಶ್ವರ ವ್ರತ ಕಥಾ ಸಾರಾಂಶ ಓದಿ. ತಂಬಿಟ್ಟು ಆರತಿ ಮಾಡಿ.

ಸಿಂಹ: ಸಿಂಹಾಧಿಪತಿ ಸೂರ್ಯನನ್ನು ಆದಿತ್ಯಾತ್ಮಕ ರುದ್ರನೆಂದು ಕರೆಯುತ್ತಾರೆ. ಸೂರ್ಯನನ್ನು ಶಿವರೂಪಿಯಾಗಿ ಪೂಜಿಸಿದರೂ ಸೂರ್ಯನಾರಾಯಣನಿಗೆ ಸಲ್ಲುತ್ತದೆ. ಒಳ್ಳೆಯ ಕಾಲವು ನಿಮ್ಮ ಮನೆಯ ಬಾಗಿಲು ತಟ್ಟುತ್ತದೆ. ಯಾವುದನ್ನೂ ಭೋಗಿಸಲು ಈಶ್ವರನ ಕೃಪೆಯಿರಬೇಕು. ಕೇದಾರೇಶ್ವರ ಅಷ್ಟೋತ್ತರ ಪಠಿಸಿ. ಸಾಯಂಕಾಲದಲ್ಲಿ ಬೆಲ್ಲದ ಹೂರಣ, ಪಾನಕ, ಕಡಲೇಬೇಲೆ ಕೋಸುಂಬರಿ ಮಾಡಿ.

ಕನ್ಯಾ: ತುಲಾರಾಶಿಯಲ್ಲಿ ಸೂರ್ಯನು ಬಂದು ದಶ ರಾತ್ರಿಗಳು ಕಳೆದಿವೆ. ತುಲಾ ಮಾಸ ಕೂಡ ಪಿತೃಗಳಿಗೆ ತರ್ಪಣಕ್ಕೆ ಶ್ರೇಷ್ಠ ಸಮಯವೆಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ. ಈ ಸಂದರ್ಭದಲ್ಲಿ ಯಾವುದಾದರೂ ಪುಣ್ಯ ಕ್ಷೇತ್ರದಲ್ಲಿ ಮಾತಾ-ಪಿತೃಗಳಿಗೆ ತರ್ಪಣ ಕೊಟ್ಟು ಮನೆಗೆ ಬಂದು ವಾಮನ ಸಹಿತ ಬಲಿ ಚಕ್ರವರ್ತಿಯನ್ನು ಪೂಜಿಸಿ. ಅಷ್ಟೈಶ್ವರ್ಯ ನಿಮ್ಮದಾಗಲಿದೆ. ಸಾಲವೂ ತೀರುತ್ತದೆ.

ತುಲಾ: ಧರ್ಮಕ್ಕೂ ನ್ಯಾಯಕ್ಕೂ ತಕ್ಕಡಿಯೇ ಸಂಕೇತ. ನಿಮ್ಮ ಕೆಲಸವನ್ನು ದೇವರು ಒಪು್ಪವಂತೆ ಧರ್ಮದಿಂದ ಮಾಡಿ. ಗುರು ವಕ್ರಿಯಾಗಿ ಬಂದು ಶುಭನಾಗಿದ್ದು, ಒಂದು ಮಟ್ಟಿಗೆ ಕಾರ್ಯಗಳು ಸಾಗುತ್ತವೆ. ದಾರಿದ್ರ್ಯ ದುಃಖ ದಹನ ಮಾಡುವ ಶಿವಸ್ತೋತ್ರವನ್ನು ಪಠಿಸಿ. ಉದ್ವೇಗ ಕಡಿಮೆಯಾಗಿ ಶಾಂತಿ, ತೃಪ್ತಿಯಿಂದ ಜೀವನವನ್ನು ಮುನ್ನಡೆಸಿಕೊಂಡು ಹೋಗಿ.

ವೃಶ್ಚಿಕ: ವೃಶ್ಚಿಕರಾಶಿ ಲಕ್ಷ್ಮೀ ಸಂಪರ್ಕದಲ್ಲಿ ಇರುವಂತಹ ರಾಶಿಯಾಗಿದೆ. ಕುಬೇರನನ್ನೂ ಬೇಡುವುದಾದರೂ ಮಹಾಲಕ್ಷ್ಮೀಯ ಅನುಮತಿಯನ್ನು ಪಡೆದ ನಂತರವೇ ಅಷ್ಟ ದಿಕ್ಪಾಲಕರು ಬೇಡುತ್ತಾರೆ. ಬೇಕಾದ ಧನ ಬಂದು ಸಾಲವನ್ನು ತೀರಿಸಿ, ಎಲ್ಲರ ಮುಂದೆ ಸೈ ಎಂದು ಬಾಳುವುದು ನಿಮ್ಮ ಧ್ಯೇಯವಾಗಲಿ.

ಧನುಸ್ಸು: ಸಿಡಿಲು ಬಡಿದರೆ ಮನುಷ್ಯನು ಹೆದರುತ್ತಾನೆ. ನೀವು ಸಿಡಿಮಿಡಿಗೊಂಡರೆ ಯಾರೂ ಹೆದರುವವರಿಲ್ಲ. ದೇವತಾ ಪ್ರಾರ್ಥನೆ ಆಕಾಶ ಮುಟ್ಟಲಿ. ಕೋಪ ತಗ್ಗಲಿ. ನಷ್ಟದ ನಂತರ ಲಾಭ, ಕಹಿಯ ನಂತರ ಸಿಹಿ. ಕತ್ತಲೆ ಬೆಳಕು ಎಲ್ಲವನ್ನೂ ಕೊಡುವವನು ಭಗವಂತನೇ. ಗುರುಬಲ ಇಲ್ಲದಿರುವುದರಿಂದ ಪ್ರತಿನಿತ್ಯ ಊಟವನ್ನು ಮರೆತರೂ ಗುರು ಚರಿತ್ರೆ ಪಾರಾಯಣ ಮರೆಯದಿರಿ. ಶುಭವಾಗಲಿ.

ಮಕರ: ಒಂದು ಮನೆಯಲ್ಲಿ ಒಂದು ದೀಪವಿದ್ದರೆ ಸಾಕು ಏನು ಕೆಲಸ ಬೇಕಾದರೂ ಮಾಡಬಹುದು. ಶನಿಯ ಏಳೂವರೆ ಸಂಚಾರದಲ್ಲಿ ನಕಾರಾತ್ಮಕ ಚಿಂತೆಗಳು ಬಂದಿವೆ. ಶನಿಯು ಮುಂದಿನ ಮನೆಗೆ ಹೋಗುವ ಕಾಲ ಬಂದಿದೆ. ಮುಂದೆ ಹೋಗುವ ಶನಿಯು ಬಂಗಾರದಂತಹ ಬಾಳನ್ನು ಕೊಟ್ಟು ಹೋಗುತ್ತಾನೆ.

ಕುಂಭ: ಎಷ್ಟೇ ಕಷ್ಟ ಬಂದರೂ ಎಷ್ಟು ಭಾರವನ್ನು ಮನುಜನು ತಡೆದುಕೊಳ್ಳಬಲ್ಲ ಎಂಬ ತೂಕವು ದೈವದ ಕೈಯಲ್ಲಿದೆ. ಪಾಪದ ತೂಕವು ಜಾಸ್ತಿಯಾದರೆ ನಮಗೆ ಸಿಗುವುದು ಅಲ್ಪವೇ. ಆದ್ದರಿಂದ ನಮ್ಮ ಪುಣ್ಯದಿಂದ ಬಂದೊದಗುವ ಶಾಶ್ವತವಾದ ನಿಧಿಯನ್ನು ಭಗವಂತ ಕೊಡುತ್ತಾನೆ. ಶನಿಯ ಪ್ರಾರ್ಥನೆ ಇರಲಿ. ಮಹಾಲಕ್ಷ್ಮೀಯನ್ನು ಪೂಜಿಸಲೇಬೇಕು.

ಮೀನ: ವಕ್ರದಲ್ಲಿ ಗುರುವು ಮೂರನೇ ಮನೆಯನ್ನು ಸೇರಿದ್ದಾನೆ. ಅದೃಷ್ಟ, ಲಾಭವನ್ನು ಪಡೆಯಲು ಕೊಟ್ಟ ದೇವರಿಗೆ ಭಕ್ತಿ ಪೂರ್ವಕವಾಗಿ ಅವನು ಕೊಟ್ಟ ತನು-ಮನ- ಧನವನ್ನು ಅರ್ಪಿಸಿ ಪ್ರಸಾದ ತೆಗೆದುಕೊಳ್ಳಿ. ಬೇಕಾದ ಎಲ್ಲ ಸುಖ-ಸೌಖ್ಯ ಪಡೆದುಕೊಳ್ಳುವ ಕಾಲವಿದು. ನಿತ್ಯವೂ ನರಸಿಂಹ ಅಷ್ಟೋತ್ತರ ಪಠಿಸಿ. ಗುರು ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿದರೆ ಸುಖದ ಹಾದಿಯಲ್ಲಿ ಸಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net